ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದ ಅಧಿಕಾರಿಗೆ ಬಡ್ತಿ!

Parashurama
Updated On : 25 Jan 2013, 10:35 am

ಚಾಮರಾಜನಗರ: ದಕ್ಷಿಣ ಭಾರತದಲ್ಲೇ ಹೆಚ್ಚು ಆನೆ, ಹುಲಿಗಳಿರುವ ರಾಜ್ಯದ ಬಂಡೀಪುರ ರಾಷ್ಟ್ರೀಯ ಹುಲಿ ರಕ್ಷಿತಾರಣ್ಯದ ಸಂರಕ್ಷಣೆಗೆ, ಅಕ್ರಮವಾಗಿ ಮರ ಮಾರಾಟ ಮಾಡಿದ ಆರೋಪದ ಮೇಲೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದ ಅಧಿಕಾರಿಯೊಬ್ಬರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಈ ಹಿಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಡಿಸಿಎಫ್) 1998ರಿಂದ 2003ರವರೆಗೆ ಕಾರ್ಯನಿರ್ವಹಿಸಿದ್ದ ಎಚ್.ಸಿ. ಕಾಂತರಾಜು ಅವರೇ ಈಗ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ (ಸಿಎಫ್)ಯಾಗಿ ಬಡ್ತಿ ಹೊಂದಿದ್ದಾರೆ.
ಬಂಡೀಪುರ ಹುಲಿ ರಕ್ಷಿತಾರಣ್ಯದ ಮೇಲೆ ಕಣ್ಣಿಟ್ಟು ಮೈಸೂರಿನ ಉಸ್ತುವಾರಿ ಹೊತ್ತಿರುವ ರಾಜಕಾರಣಿಯೊಬ್ಬರ ಕೃಪಾಕಟಾಕ್ಷದಿಂದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರಾಗಿ ಅಧಿಕಾರವನ್ನೂ ಸ್ವೀಕರಿಸಿದ್ದಾರೆ.
ಸರ್ಕಾರ ಇತ್ತೀಚೆಗೆ ಉಪ ಸಂರಕ್ಷಣಾಧಿಕಾರಿ ಹುದ್ದೆಯಲ್ಲಿದ್ದವರಿಗೆ ಬಡ್ತಿ ನೀಡಿ ನಿರ್ದೇಶಕರು ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿತ್ತು. ಇದರ ಫಲವಾಗಿ ಇತ್ತೀಚೆಗೆ ಬಂದಿದ್ದ  ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರು ಸದ್ದಿಲ್ಲದೆ ಸಾಕಷ್ಟು ಸುಧಾರಣೆ ಮಾಡಿದ್ದರು. ಅದಕ್ಕಿಂತ ಮುಂಚೆ ಇದ್ದ ಡಿಸಿಎಫ್ ಕೆ.ಟಿ.ಹನುಮಂತಪ್ಪ ಅವರು ಸಹ ರಾತ್ರಿ ಸಂಚಾರ ನಿಷೇಧ ತೆರವಿಗೆ ಮಣಿಯದೇ ಮತ್ತು ಪರಿಸರ ಸೂಕ್ಷ್ಮ ವಲಯ ಘೋಷಣೆ ಸಂದರ್ಭದಲ್ಲಿ ಮಹತ್ವದ ಕೆಲಸ ಮಾಡಿದ್ದರು.
ಇದೀಗ ಬಂಡೀಪುರ ಅರಣ್ಯದಲ್ಲಿ ನೀರಿಲ್ಲ. ಜತೆಗೆ ಬೆಂಕಿ ಬೀಳುವ ಕಾಲ ಸಮೀಪಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಇನ್ನೂ ಜೀವಂತವಾಗಿದೆ. ಇಂತಹ ಸಂದರ್ಭದಲ್ಲಿ ದಕ್ಷತೆಯಿಲ್ಲದ, ವನ್ಯಜೀವಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸದ ಅಧಿಕಾರಿಯೊಬ್ಬರನ್ನು ಸರ್ಕಾರ ನೇಮಕ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದುರಾಗಿದೆ.
ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದರು: 2009ರಲ್ಲಿ ಕಾಂತರಾಜು ಅವರು ಕೊಡಗಿನ ವೀರಾಜಪೇಟೆಯ ಉಪ ವಿಭಾಗದಲ್ಲಿ ಡಿಸಿಎಫ್ ಆಗಿದ್ದರು. ಈ ವೇಳೆ ತಿತಿಮತಿ ಅರಣ್ಯದ ಸರ್ಕಾರಿ ನಾಟಾ ಸಂಗ್ರಹಾಲಯದಲ್ಲಿ ಸಂಗ್ರಹಿಸಲಾದ ಮರಗಳನ್ನು ಹರಾಜು ಮಾಡುವ ಸಂದರ್ಭದಲ್ಲಿ ಸರ್ಕಾರಿ ದಾಖಲೆಯನ್ನು ಗುತ್ತಿಗೆದಾರರಿಗೆ ಮೊದಲೇ ಬಹಿರಂಗಪಡಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂಬ ಆರೋಪದಡಿ ಲೋಕಾಯುಕ್ತರ ಪೊಲೀಸರು ಕಾಂತರಾಜು ಅವರನ್ನು ಬಂಧಿಸಿದ್ದರು. ಅಷ್ಟೇ ಅಲ್ಲ ಅವರಿಂದ ನಗದು ಹಣವನ್ನೂ ವಶಪಡಿಸಿಕೊಂಡಿದ್ದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿತ್ತು.
ಮರ ಹರಾಜು ನಡೆಯುವ ಮುನ್ನವೇ ತಮಗೆ ಬೇಕಾದ ಗುತ್ತಿಗೆದಾರರಿಗೆ ಸರ್ಕಾರ ನಿಗದಿಪಡಿಸಿದ ದರದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹರಾಜು ವೇಳೆ ಗುತ್ತಿಗೆದಾರರು ಸರ್ಕಾರದ ದರಕ್ಕಿಂತ ಸ್ವಲ್ಪ ಹೆಚ್ಚಿನ ದರ ಕೂಗಿ ಮರ ಖರೀದಿಸುತ್ತಿದ್ದರು. ಇದರ ಮೂಲಕ ಕಾನೂನುಬಾಹಿರವಾಗಿ ರಿಯಾಯಿತಿ ತೋರಿಸಿ ಗುತ್ತಿಗೆದಾರರಿಂದ ಲಂಚ ಸ್ವೀಕರಿಸಿದ್ದರು ಎಂಬ ಆರೋಪ ಕಾಂತರಾಜು ಅವರ ಮೇಲಿದೆ.
ಇಷ್ಟಿದ್ದರೂ ಅವರಿಗೆ ಬಡ್ತಿ ಸಿಕ್ಕಿದ್ದು ವಿಚಿತ್ರವಾಗಿದೆ. ಅದಕ್ಕೆ ಕಾರಣವೂ ಇದೆ. ಲೋಕಾಯುಕ್ತ ಪೊಲೀಸರಿಗೆ ಕಾಂತರಾಜು ಸಿಕ್ಕಿಬಿದ್ದ ನಂತರ ಅವರ ವಿರುದ್ಧ ಇದುವರೆಗೂ ಚಾರ್ಜ್ಶೀಟ್ ಸಲ್ಲಿಸಿಯೇ ಇಲ್ಲ. ಇದರ ಪರಿಣಾಮವಾಗಿ ಬಂಡೀಪುರ ರಕ್ಷಿತಾರಣ್ಯಕ್ಕೆ ಬಡ್ತಿ ಹೊಂದಿ ಬಂದಿದ್ದಾರೆ. ಇದು ಪರಿಸರ ಪ್ರೇಮಿಗಳ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ಬಂಡೀಪುರ ಅರಣ್ಯದಲ್ಲಿ ಆನೆ ಮತ್ತು ಹುಲಿಗಳ ಸಂಖ್ಯೆಯೂ ಹೆಚ್ಚಳವಾಗಿವೆ. ಸಮಸ್ಯೆಗಳೂ ಕೂಡ ಅಷ್ಟೇ ಪ್ರಮಾಣದಲ್ಲಿ ತಲೆ ಎತ್ತಿವೆ. ಹೀಗಾಗಿ ಸರ್ಕಾರ ವನ್ಯಜೀವಿಗಳ ಬಗ್ಗೆ ಒಲವುಳ್ಳ ದಕ್ಷ ಅಧಿಕಾರಿ ನೇಮಕ ಮಾಡುವ ಮೂಲಕ ಅರಣ್ಯ ರಕ್ಷಣೆಗೆ ಮುಂದಾಗಬೇಕಿದೆ ಎಂಬುದೂ ಪರಿಸರ ಪ್ರೇಮಿಗಳು ಆಶಯ.
-ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments