ಬೈಕ್- ಕಾರ್ ಡಿಕ್ಕಿ ಸವಾರ ಸಾವು
ಗುಂಡ್ಲುಪೇಟೆ: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಹಂಗಳ ಗ್ರಾಮದ ಬಳಿ ಶನಿವಾರ ರಾತ್ರಿ ನಡೆದಿದೆ. ತಾಲೂಕಿನ ಮಗುವಿನಹಳ್ಳಿ ಗ್ರಾಮದ ಜವನೇಗೌಡನ ಮಗನಾದ ರಾಜು (32) ಎಂಬವನೇ ಮೃತ ಯುವಕ. ಕಾರು ಹಂಗಳ ಕಡೆಯಿಂದ ಬಂದ ಯುವಕನ ಬೈಕ್‌ಗೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ. ಈ ಸಂಬಂಧ ಕಾರಿನ ಚಾಲಕ ರಾಮ ಸಮುದ್ರದ ಬಾಲಚಂದ್ರ ಹಾಗೂ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕೇರಳಕ್ಕೆ ಅಕ್ಕಿ ಸಾಗಣೆ; ಲಾರಿ ವಶ
ಗುಂಡ್ಲುಪೇಟೆ: ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ಸಹಿತ ಲಾರಿಯನ್ನು ಐಜಿಪಿಯ ವಿಶೇಷ ದಳದ ಪೊಲೀಸರು ಜಪ್ತಿ ಮಾಡಿದ್ದಾರೆ. ಲಾರಿಯಲ್ಲಿ ಪಡಿತರದಾರರಿಗೆ ಕೊಡಬೇಕಾದ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಈ ಸಂಬಂಧ ಕೇರಳದ ಮುಸ್ತಾಪ್ ಎಂಬುವವನನ್ನು ಬಂಧಿಸಿದ್ದು, ಶನಿವಾರ ರಾತ್ರಿ ಮಾಲು ಸಮೇತ ಹಿಡಿದ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಆದರೆ ದೂರು ದಾಖಲಾಗಿಲ್ಲ. ಲಾರಿಯನ್ನು ವಶಕ್ಕೆ ಪಡೆದು ತಹಸೀಲ್ದಾರ್ ಅವರಿಗೆ ಒಪ್ಪಿಸಿದ್ದಾರೆ.
ಆನೆ ದಾಳಿಗೆ ಯುವಕ ಗಾಯ
ಚಾಮರಾಜನಗರ: ಜಮೀನಿನಲ್ಲಿ ಕಾವಲು ಕಾಯಲು ಹೋಗಿದ್ದಾಗ ಆನೆ ದಾಳಿಗೆ ಸಿಲುಕಿದ ಬಾಬು (35) ಎಂಬ ಯುವಕನ ಸೊಂಟಕ್ಕೆ ತೀವ್ರ ಪೆಟ್ಟಾಗಿರುವ ಘಟನೆ ತಾಲೂಕಿನ ಯಣಗುಂಬ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಜಮೀನಿನ ಬಳಿ ಆನೆಗಳು ದಾಳಿಯಿಟ್ಟಿದ್ದರಿಂದ ಕಾವಲು ಕಾಯಲು ಬಾಬು ಹೋಗಿದ್ದಾನೆ. ಆನೆಗಳ ಹಿಂಡೇ ಜಮೀನಿಗೆ ನುಗ್ಗಿ ಫಸಲನ್ನು ನಾಶಪಡಿಸುತ್ತಿದ್ದಾಗ ಅವುಗಳನ್ನು ಓಡಿಸಲು ಪಟಾಕಿ ಸಿಡಿಸಿದ್ದಾನೆ. ಆಗ ಆನೆಗಳೆಲ್ಲ ಕಾಡಿಗೆ ಓಟ ಕಿತ್ತಿವೆ. ಆದರೆ, ಒಂದು ಮೊಂಡು ಆನೆ ಮಾತ್ರ ಅಲ್ಲೇ ಉಳಿದು ಬಾಬುನನ್ನು ತನ್ನ ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ಪರಿಣಾಮ ಬಾಬು ಸೊಂಟಕ್ಕೆ ತೀವ್ರ ಪೆಟ್ಟಾಗಿದೆ. ಸದ್ಯ ಬಾಬುವನ್ನು ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆರ್‌ಎಫ್‌ಓ ಸುರೇಂದ್ರ ಭೇಟಿ ನೀಡಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.