ಹನೂರಿನಲ್ಲಿ ಭೀಕರ ಬರ; ರೈತರ ಸಾಮೂಹಿಕ ವಲಸೆ
ಹನೂರು: ಹನೂರು ಕ್ಷೇತ್ರ ಎಂದಾಗ ಬೆಟ್ಟ ಗುಡ್ಡಗಳು, ಅರಣ್ಯ ಪ್ರದೇಶಗಳ ಚಿತ್ರಣ ಕಣ್ಣ ಮುಂದೆ ನಿಲ್ಲುತ್ತಿತ್ತು. ಮಳೆಯ ಸಂದರ್ಭದಲ್ಲಿ ಹೊಲ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಆದರೆ ಇಂದು ಆ ಪರಿಸ್ಥಿತಿ ಬೇರೆಯದೇ ಆಗಿದೆ.
ಕಾಡಿನಿಂದ ಆವೃತವಾಗಿರುವ ಹನೂರು ವಿಧಾನ ಸಭಾ ಕ್ಷೇತ್ರ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದೇ ಬರದ ಸುಳಿಗೆ ತತ್ತರಿಸಿದ್ದು, ಈ ಭಾಗದ ಕಾಡಂಚಿನ ಭಾಗದ ಜನರು ದೈನಂದಿನ ಬದುಕನ್ನು ದೂಡಲು ಪರಿತಪಿಸುತ್ತಿದ್ದಾರೆ. ಪರಿಣಾಮ ಹನೂರಿನ ಬಹುತೇಕ ಪೋಡುಗಳು, ಗುಡ್ಡಗಾಡು ಪ್ರದೇಶದ ಸೋಲಿಗರು ಕೂಲಿಯನ್ನೇ ನಂಬಿ ಬದುಕುತ್ತಿದ್ದು, ಅಸಂಖ್ಯಾತ ಸಣ್ಣ ಹಿಡುವಳಿ ರೈತರು ಸಾಮೂಹಿಕವಾಗಿ ತಮ್ಮ ಗ್ರಾಮಗಳನ್ನು ತೊರೆದು ಒಪ್ಪೊತ್ತಿನ ಊಟಕ್ಕಾಗಿ ಗುಳೆ ಹೊರಟಿದ್ದಾರೆ.
ಏನಿದು ಅಮಾನವೀಯ ಬದುಕು?: ಕಳೆದ 3 ವರ್ಷಗಳಿಂದ ಸರಿಯಾಗಿ ಬರದ ತಾಂಡವ ನೃತ್ಯದಿಂದ ನೀರಿನ ಹಾಹಾಕಾರ ಮುಗಿಲು ಮುಟ್ಟಿದೆ. ಜಾನುವಾರುಗಳು ಮೇವು ಮತ್ತು ನೀರಿಲ್ಲದೇ ಪರಿತಪಿಸುವಂತಾಗಿದೆ. ಅಂತರ್ಜಲ ಕುಸಿತದಿಂದಾಗಿ ಎಲ್ಲೂ ನೀರಿಲ್ಲದೆ ಜನರು ದೈನಂದಿನ ಬದುಕಿನಲ್ಲಿ ಯಮಯಾತನೆ ಅನುಭವಿಸುವಂತಾಗಿದೆ.
ಕ್ಷೇತ್ರದ ಗಾಣಿಗ ಮಂಗಲ, ದಂಟಳ್ಳಿ ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಮನೆಗಳಿಗೆ ಬೀಗ ಜಡಿದು, ಕೂಲಿಗಾಗಿ ವಲಸೆ ಹೊರಟ್ಟಿದ್ದಾರೆ. ಪರಿಣಾಮ ಬಹುತೇಕ ಶಾಲೆಗಳಲ್ಲಿ ಶಾಲಾ ಮಕ್ಕಳ ಹಾಜರಾತಿಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ಇನ್ನು ಇಲ್ಲಿ 800 ರಿಂದ 1000 ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಕೆಲವು ಕಡೆಗಳಲ್ಲಿ ನೀರು ಸಿಕ್ಕರೂ ಅದರಲ್ಲಿ ಫ್ಲೋರೈಡ್ ಅಂಶ ಪತ್ತೆಯಾಗಿದ್ದು, ಕುಡಿಯಲೂ ಯೋಗ್ಯವಾಗಿಲ್ಲ. ಇದರಿಂದ ಜನರು ಕುಡಿಯಲು ಹಾಗೂ ಅಡುಗೆ ಮಾಡಲು ನೀರಿಗಾಗಿ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹೋಗುವ ಪರಿಸ್ಥಿತಿಯಿದೆ.
ಜಾನುವಾರುಗಳ ಮಾರಾಟ, ಕಾಫಿ ತೋಟಗಳಿಗೆ ವಲಸೆ: ರೈತರು ಈ ಭಾಗದಲ್ಲಿರುವ ಪಂಪ್‌ಸೆಟ್‌ಗಳಲ್ಲಿ ಬರುವ ನೀರನ್ನೇ ನಂಬಿ ಅರಿಶಿಣ, ಜೋಳ, ಕಬ್ಬು, ರಾಗಿ ಬೆಳೆಯುತ್ತಿದ್ದರು. ಆದರೆ ನೀರಿಲ್ಲದೆ ವ್ಯವಸಾಯದಿಂದ ನಷ್ಟ ಅನುಭವಿಸಿ ಸಾಲ ಶೂಲಕ್ಕೆ ತುತ್ತಾಗಿದ್ದಾರೆ.
ಮತ್ತೊಂದೆಡೆ ದೈನಂದಿನ ಬದುಕಿಗೆ ಅಗತ್ಯ ಪ್ರಮಾಣದ ಆಹಾರವೂ ಸಿಗುತ್ತಿಲ್ಲ. ಇದರಿಂದ ಕಂಗೆಟ್ಟ ಜನರು ದನಕರುಗಳನ್ನು ಜೀವನೋಪಯೋಗಕ್ಕಾಗಿ ಮಾರಿಕೊಂಡಿದ್ದಾರೆ. ಗ್ರಾಮಗಳನ್ನು ತೊರೆದು ಕೇರಳ, ತಮಿಳುನಾಡು, ಕೊಡಗು, ಕಾಫಿ ತೋಟಗಳಿಗೆ ವಲಸೆ ಹೋಗುತ್ತಿದ್ದಾರೆ.
ಖಾತ್ರಿಯಿಲ್ಲ ಉದ್ಯೋಗ, ಬಳಕೆಗೆ ಯಂತ್ರೋಪಕರಣ: ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿ ಹಲವಾರು ತಿಂಗಳುಗಳೇ ಕಳೆದಿವೆ. ನೆಪ ಮಾತ್ರಕ್ಕೆ ಜನರಿಗೆ ಇಲ್ಲಿ ಉದ್ಯೋಗ ಖಾತರಿ, ರಸ್ತೆ, ಬೀದಿ ದೀಪ, ಚರಂಡಿ ನಿರ್ಮಾಣ, ಕೆರೆ ಕಾಲುವೆಗಳ ಪುನರ್ ನವೀಕರಣ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಗ್ರಾಮದ ಜನರನ್ನು ಬಳಸಿಕೊಳ್ಳದೆ ಯಂತ್ರಗಳನ್ನು ಬಳಸಿ, ಕಾಮಗಾರಿ ನಿರ್ವಹಣೆ ಮಾಡಲಾಗಿದೆ.
ಕೋಟ್ಯಂತರ ರು. ಅವ್ಯವಹಾರ: ಮತ್ತೊಂದು ದುರಂತವೆಂದರೆ ಕೆಲವು ಕಡೆ ಉದ್ಯೋಗ ಖಾತರಿ ಯೋಜನೆಯಡಿ ಕೆಲವು ಪ್ರಭಾವಿ ಗುತ್ತಿಗೆದಾರರು ತಮಗೆ ಬೇಕಾದ ಜನರನ್ನು ಹಾಗೂ ತಮ್ಮ ಪಕ್ಷಗಳಿಗೆ ಸೇರಿರುವ ಕಾರ್ಯಕರ್ತರುಗಳ ಸಂಬಂಧ ಪಟ್ಟ ಜನರಿಗೆ ಮಾತ್ರ ಕೆಲಸ ಕೊಟ್ಟಿದ್ದಾರೆ. ಈ ಸಂಬಂಧ ಹನೂರು ಕ್ಷೇತ್ರದಲ್ಲಿ ನಡೆದಿರುವ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಯಲ್ಲಿ ಕೋಟ್ಯಂತರ ರು.ಗಳ ಅವ್ಯವಹಾರ ಕಂಡುಬಂದು ಹಲವಾರು ಗ್ರಾಮ ಪಂಚಾಯ್ತಿ ಪಿಡಿಓ, ಕಾರ್ಯದರ್ಶಿಗಳನ್ನು ಅಮಾನತು ಪಡಿಸಲಾಗಿದೆ.
ಸರ್ಕಾರ ಕಣ್ಣೆತ್ತಿ ನೋಡಬೇಕು: ಹೀಗಾಗಿ ಉದ್ಯೋಗ ಖಾತರಿ ಕಾಮಗಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯದೇ, ಈ ಭಾಗದ ಜನರು ಗುಂಪು ಗುಂಪಾಗಿ ವಲಸೆ ಹೊರಟಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಸೂಕ್ತ ಶಿಕ್ಷಣ ಸಿಗುತ್ತಿಲ್ಲ. ಕೂಲಿ ಮಾಡಲು ಆಗದೇ, ವಲಸೆ ಹೋಗಲು ಆಗದೇ ಗ್ರಾಮಗಳಲ್ಲಿ ಉಳಿದಿರುವ ವಯೋವೃದ್ಧ ಜನರು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಹಣದ ನೆರವಿಲ್ಲದೆ ಪರದಾಡುತ್ತಿದ್ದಾರೆ.
ಜಿಲ್ಲಾಡಳಿತ ಕ್ಷೇತ್ರದ ಜನರ ಸಮಸ್ಯೆಯ ಕುರಿತು ಸರ್ಕಾರದ ಗಮನಕ್ಕೆ ತಂದು ಬರಪರಿಹಾರ ಕೈಗೊಂಡು, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರು, ಉದ್ಯೋಗ ಖಾತರಿ ಯೋಜನೆ ಖಾತರಿಗೊಳಿಸಿ, ವಲಸೆ ಹೋಗುವುದನ್ನು ತಪ್ಪಿಸಬೇಕೆಂಬುದು ಜನರ ಒತ್ತಾಸೆಯಾಗಿದೆ.
-ದೇವರಾಜ್ ನಾಯ್ಡು, ಹನೂರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.