ನಿಷೇಧ ಮಧ್ಯೆ ಮಾಂಸ, ಮದ್ಯ!
ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಪವಾಡ ಪುರುಷ ಘನನೀಲಿ ಸಿದ್ದಪ್ಪಾಜಿ ನೆಲೆಸಿರುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಹುತಾತ್ಮರ ದಿನದ ಅಂಗವಾಗಿ ಜಿಲ್ಲಾಡಳಿತ ಹೇರಿದ್ದ ನಿಷೇಧದ ನಡುವೆಯೂ ಲಕ್ಷಾಂತರ ಮಂದಿ ಭಕ್ತರು ಸಾವಿರಾರು ಕೋಳಿ, ಕುರಿ ಬಲಿಕೊಟ್ಟು, ಬಾಡು ತಿಂದು, ಮದ್ಯ ಸೇವಿಸಿ ನಶೆಯ ಜಾತ್ರೆಯಲ್ಲಿ ತೇಲಾಡಿದರು!
ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯವರು ಕಳೆದ ವರ್ಷದಿಂದ ಪ್ರಾಣಿ ಬಲಿ ನಿಷೇಧ ಮಾಡುವಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಒತ್ತಡ ತಂದ ಪರಿಣಾಮ, ಜಿಲ್ಲಾಡಳಿತ ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ ಮಾಡಿತ್ತು. ಜೊತೆಗೆ ಜ.30ರಂದು ಹುತಾತ್ಮರ ದಿನವೂ ಆದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ಪ್ರಾಣಿ ಬಲಿ ನಿಷೇಧ ಆದೇಶ ಹೊರಡಿಸಲಾಗಿತ್ತು. ಜಿಲ್ಲಾಡಳಿತ ಅಲ್ಲಲ್ಲಿ ಪ್ರಾಣಿ ಬಲಿ ನಿಷೇಧ ಕುರಿತಾದ ನೂರಾರು ಬ್ಯಾನರ್ ಪ್ರದರ್ಶಿಸಿ, ಹತ್ತೂರು ಕಡೆ 450ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, 20 ಸಾವಿರ ಕರಪತ್ರ ಹಂಚಿದರೂ ಎಂದಿನಂತೆ ಪಂಕ್ತಿಸೇವೆ ನಡೆಯಿತು. ಆದರೆ, ದೇವಸ್ಥಾನ ಸುತ್ತಮುತ್ತಲ ಪ್ರದೇಶ ಬಲಿ ಮತ್ತು ಪಂಕ್ತಿ ಸೇವೆಯಿಂದ ಸಂಪೂರ್ಣ ಹೊರತಾಗಿತ್ತು.
ಕಳೆದ ಬಾರಿ ಅಂಹಿಸಾ- ಪ್ರಾಣಿ ಸಂದೇಶ ರ್ಯಾಲಿ ನಡೆಸಿದ್ದ ಬೆಂಗಳೂರಿನ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ಈ ಬಾರಿ ರ್ಯಾಲಿಗೆ ಬದಲು ತಾವೇ ಖುದ್ದಾಗಿ ಪೊಲೀಸರ ಜೊತೆಗೂಡಿ ಪ್ರಾಣಿಗಳು ಬಾರದಂತೆ ತಡೆಯುವ ಕಾರ್ಯಚರಣೆಯಲ್ಲಿ ನಿರತರಾಗಿದ್ದರು.
ಎಲ್ಲೆ ಮೀರಿದ ಭಕ್ತಿ: ಸಿದ್ದಪ್ಪಾಜಿ ಜಾತ್ರೆ ಯಾವುದೇ ಶಿಷ್ಟಾಚಾರ, ಸಂಪ್ರದಾಯ ಕಟ್ಟುಪಾಡುಗಳಿಲ್ಲದೆ ಎಲ್ಲೆ ಮೀರಿದ ಭಕ್ತಿಯಿಂದ ನಡೆಯುತ್ತಿದ್ದು, ಜಾತ್ರೆಯಲ್ಲಿ ದೇವರಿಗೆ ಹೆಂಡ, ಬಾಡು ಮತ್ತು ಭಂಗಿ ಸೊಪ್ಪೇ ನೈವೇದ್ಯ. ಹಾಗಾಗಿ ಮೈಸೂರು ಪ್ರಾಂತ್ಯದ ಮಂಡ್ಯ, ಮೈಸೂರು, ರಾಮನಗರ, ಕನಕಪುರ ಮತ್ತು ಚಾಮರಾಜನಗರ ಅಲ್ಲದೆ, ಬೆಂಗಳೂರಿನಿಂದ ಬಹುತೇಕ ಸಿದ್ದಪ್ಪಾಜಿ ಒಕ್ಕಲಿನ ಜನ ಸುಗ್ಗಿ ಮುಗಿಸಿ, ಐದು ದಿನಗಳ ಜಾತ್ರೆಗೆ ಬಂದಿದ್ದರು. ದೇವಸ್ಥಾನದ ಸುತ್ತಮುತ್ತಲಿನ ಸಾವಿರಾರು ಎಕರೆ ಪ್ರದೇಶದಲ್ಲಿ ಬಿಡಾರ ಹೂಡಿ ದೇವರಿಗೆ ಕುರಿ, ಆಡು ಮತ್ತು ಕೋಳಿ ಬಲಿ ಕೊಟ್ಟು, ಹರಕೆ ಒಪ್ಪಿಸಿ, ಜಾತಿ ಭೇದ ಮರೆತು ಸಹಪಂಕ್ತಿ ಭೋಜನ ಮಾಡಿ ದೇವರಿಗೆ ಭಕ್ತಿ ಸಮರ್ಪಿಸಿದರು.
- ದೇವರಾಜು ಕಪ್ಪಸೋಗೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.