ಗುಂಡ್ಲುಪೇಟೆ: ಕಾಂಗ್ರೆಸ್, ಕೆಜೆಪಿಗೆ ಪ್ರತಿಷ್ಠೆಯ ಕಣ
ಗುಂಡ್ಲುಪೇಟೆ: ಬೇಸಿಗೆ ಬಿಸಿಲಿನ ಕಾವು ಏರುತ್ತಿರುವಾಗಲೇ ಇತ್ತ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಕಾವೇರುತ್ತಿದೆ.
ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಗುಂಡ್ಲುಪೇಟೆ ಪುರಸಭೆ ಚುನಾವಣೆಯು 2 ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಗುಂಡ್ಲುಪೇಟೆಯ 23 ವಾರ್ಡ್‌ಗಳಿಗೆ ಅಂತಿಮವಾಗಿ 70 ಮಂದಿ ಕಣದಲ್ಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಹಾಲಿ ಶಾಸಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಹದೇವಪ್ರಸಾದ್, ಕೆಜೆಪಿಯ ಸಿ.ಎಸ್.ನಿರಂಜನಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಪುಟ್ಟರಂಗನಾಯಕ ಅವರು ಈ ಬಾರಿಯ ಚುನಾವಣೆಯಲ್ಲಿ ಶತಾಯ ಗತಾಯ ಪುರಸಭೆ ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ.
ಕಳೆದ ಬಾರಿ ನಡೆದ ಪುರಸಭಾ ಚುನಾವಣೆಯಲ್ಲಿ ಶಾಸಕ ಮಹದೇವಪ್ರಸಾದ್ ಜೆಡಿಎಸ್‌ನಲ್ಲಿದ್ದು, ಎಲ್ಲ 23 ವಾರ್ಡ್‌ಗಳಿಗೂ ಕಣಕ್ಕಿಳಿಸಿದ್ದರು. ಆಗ 16 ಮಂದಿ ಗೆದ್ದಿದ್ದರು. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಮ್ಮ ನೇತೃತ್ವದ ಕಾಂಗ್ರೆಸ್‌ನಿಂದ ಕಳೆದ ಅವಧಿಯಲ್ಲಿ ಆಯ್ಕೆಯಾಗಿದ್ದವರ ಪೈಕಿ 1 ನೇ ವಾರ್ಡ್‌ನಿಂದ ರಂಗಸ್ವಾಮಿ, 14ನೇ ವಾರ್ಡಿನಿಂದ ಎಲ್.ಮಣಿಕಾಂತ್, 18ನೇ ವಾರ್ಡಿನಿಂದ ಹಾಲಿ ಎಂಪಿಸಿಎಸ್ ಸದಸ್ಯ ಪಿ.ಚಂದ್ರಪ್ಪ, 20ನೇ ವಾರ್ಡಿನಿಂದ ಮೋಹನ್ ಕುಮಾರ್, 21ನೇ ವಾರ್ಡಿನಿಂದ ಲತಾ ರಾಜಶೇಖರ್ ಜತ್ತಿ, 23ನೇ ವಾರ್ಡಿನಿಂದ ಮಂಜುಳಾ, 8ನೇ ವಾರ್ಡಿನಿಂದ ಭಾಗ್ಯಮ್ಮ ಅವರಿಗೆ ಟಿಕೆಟ್ ನೀಡಿದ್ದಾರೆ.
ಕಳೆದ ಬಾರಿ ಆಯ್ಕೆಯಾಗಿದ್ದ ಪಿ.ಗಿರೀಶ್, ಎಲ್.ಸುರೇಶ್ ಮತ್ತು ಸೋಲು ಅನುಭವಿಸಿದ್ದ ಎನ್. ಮಲ್ಲೇಶ್, ಸರ್ದಾರ್ ಮತ್ತು ಮಲ್ಲರಾಜು ಸೇರಿದಂತೆ 23 ಮಂದಿಯನ್ನು ಕೆಜೆಪಿ ಕಣಕ್ಕಿಳಿಸಿದೆ.
ಈ ಬಾರಿ ನಡೆಯುವ ಪುರಸಭಾ ಚುನಾವಣೆಯಲ್ಲಿ 16 ಮಂದಿ ಹೊಸಮುಖಗಳಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಲಾಗಿದೆ. 2ನೇ ವಾರ್ಡ್‌ನಿಂದ ಸುರೇಶ್, 3ನೇ ವಾರ್ಡ್‌ನಿಂದ ಚಿದಾನಂದ, 4ನೇ ವಾರ್ಡ್‌ನಿಂದ ನೂರುಲ್ಲಾ, 5ನೇ ವಾರ್ಡ್‌ನಿಂದ ಅಬ್ದುಲ್ ವಾಜಿದ್, 6ನೇ ವಾರ್ಡ್‌ನಿಂದ ಷಫೀ, 7ನೇ ವಾರ್ಡ್‌ನಿಂದ ಪಿ.ಶಶಿಧರ್, 9ನೇ ವಾರ್ಡ್‌ನಿಂದ ಎಂ. ನಾಗರತ್ನ, 10 ನೇ ವಾರ್ಡ್‌ನಿಂದ ರತ್ನಮ್ಮ, 11ನೇ ವಾರ್ಡ್‌ನಿಂದ ಸುರೇಶ್, 12 ನೇ ವಾರ್ಡ್‌ನಿಂದ ಜಯಲಕ್ಷ್ಮೀ, 13ನೇ ವಾರ್ಡ್‌ನಿಂದ ಲಿಂಗರಾಜು, 15ನೇ ವಾರ್ಡ್‌ನಿಂದ ವೆಂಕಟರಾಮನಾಯಕ್, 16ನೇ ವಾರ್ಡ್‌ನಿಂದ ಬಿ.ವೆಂಕಟಾಚಲ, 17ನೇ ವಾರ್ಡ್‌ನಿಂದ ರಮೇಶ್, 19ನೇ ವಾರ್ಡ್‌ನಿಂದ ಜಿ.ಕೆ.ನಾಗೇಂದ್ರ, 22ನೇ ವಾರ್ಡ್‌ನಿಂದ ಕಾಮಾಕ್ಷಮ್ಮ ಸ್ಪರ್ಧಿಸಿದ್ದಾರೆ.
4 ಮಂದಿ ಪುರಸಭಾಧ್ಯಕ್ಷರು ಕಣಕ್ಕೆ: ಈ ಬಾರಿ ಪುರಸಭಾ ಚುನಾವಣೆಗೆ ನಾಲ್ಕು ಮಂದಿ ಮಾಜಿ ಅಧ್ಯಕ್ಷರಾದ ಕಾಂಗ್ರೆಸ್‌ನ ರಮೇಶ್ , ಬಿ. ವೆಂಕಟಚಲ, ಮಂಜುಳಾ, ಕೆಜೆಪಿಯಿಂದ ಎಲ್.ಸುರೇಶ್ ಕಣಕ್ಕಿಳಿದಿದ್ದಾರೆ. ಇವರ ಪೈಕಿ 17ನೇ ವಾರ್ಡ್‌ನಿಂದ ರಮೇಶ್ ಮತ್ತು ಎಲ್.ಸುರೇಶ್ ಪರಸ್ಪರ ಎದುರಾಳಿಗಳಾಗಿದ್ದು, ಕಳೆದ ಬಾರಿ ಶಾಸಕ ಮಹದೇವಪ್ರಸಾದ್ ಜೆಡಿಎಸ್‌ನಲ್ಲಿದ್ದಾಗ ಅವರ ಬೆಂಬಲಿಗ ಸುರೇಶ್ ಜೆಡಿಎಸ್‌ನಿಂದ, ರಮೇಶ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆಗ ಸುರೇಶ್ ಆಯ್ಕೆಯಾಗಿದ್ದರು. ಇದೀಗ ಸುರೇಶ್ ಕೆಜೆಪಿಗೆ ಸೇರ್ಪಡೆಯಾಗಿದ್ದಾರೆ.
ರಮೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇಬ್ಬರು ಪ್ರಭಾವಿಗಳ ಹಣಾಹಣಿಯಲ್ಲಿ ಯೂರಿಗೆ ವಿಜಯಲಕ್ಷ್ಮೀ ಒಲಿಯುವಳೋ ಎಂಬುದು ಕುತೂಹಲ ಹುಟ್ಟಿಸಿದೆ. ಕಳೆದ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜಿ.ಕೆ. ಖಯಾಮುದ್ದೀನ್, ಎಸ್.ರಾಜಶೇಖರ್, ಜಿ.ಎಲ್.ರಾಜು ಹಾಗೂ ಸಯ್ಯದ್ ದಸ್ತಗೀರ್ ಈ ಬಾರಿ ಕಣಕ್ಕಿಳಿದಿಲ್ಲ.
ಈಗ ಸಮರ್ಪಕ ನೀರು: ಪಟ್ಟಣದಲ್ಲಿ ಕಬಿನಿ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ, ಪ್ರತಿನಿತ್ಯ ಸದಸ್ಯರು ಸಾರ್ವಜನಿಕರ ಜೊತೆಗೂಡಿ ಪ್ರತಿಭಟನೆ ನಡೆಸುತ್ತಿದ್ದರು. ಆಗೆಲ್ಲ ನಾನಾ ಕಾರಣ ಹೇಳುತ್ತಿದ್ದರು. ಈಗ ಟ್ಟಣದ ಎಲ್ಲ ವಾರ್ಡ್‌ಗಳಿಗೂ ಸಮರ್ಪಕವಾಗಿ ಸರಬರಾಜಾಗುತ್ತಿದೆ. ಅಂದು ಇಲ್ಲದ ನೀರು ಈಗ ಎಲ್ಲಿ ಬಂತು ಎಂದು ವಾರ್ಡ್‌ನ ಜನತೆ ಮಾತಾಡಿಕೊಳ್ಳುತ್ತಿದ್ದು, ಇದು ಚುನಾವಣಾ ಗಿಮಿಕ್ ಅಲ್ಲದೇ ಮತ್ತೇನು ಅಲ್ಲ ಎನ್ನುತ್ತಿದ್ದಾರೆ.
-ವಿ.ಆರ್.ಸುಬ್ಬರಾವ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.