ನೀರು ಪೂರೈಕೆ ವಿಫಲ: ಗ್ರಾಪಂಗೆ ಮುತ್ತಿಗೆ
ಗುಂಡ್ಲುಪೇಟೆ: ಕುಡಿಯುವ ನೀರು ಪೂರೈಸಲು ಸ್ಥಳೀಯ ಗ್ರಾಮ ಪಂಚಾಯಿತಿ ವಿಫಲವಾಗಿದೆ ಎಂದು ಆರೋಪಿಸಿ ತಾಲೂಕಿನ ಬೇಗೂರಿನ ಗ್ರಾಪಂ ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ಬೆಳಗ್ಗೆ ಮಹಿಳೆಯರು ಹಾಗೂ ಗ್ರಾಮದ ಸಂಘ ಸಂಸ್ಥೆಗಳ ಮುಖಂಡರು ಕಚೇರಿ ಮುಂದೆ ಜಮಾಯಿಸಿ ಗ್ರಾಪಂ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಕಾರರು ಮಾತನಾಡಿ, ಕುಡಿಯುವ ನೀರಿಗಾಗಿ ಗ್ರಾಮಸ್ಥರು ಹಗಲು ರಾತ್ರಿಯೆನ್ನದೆ ಅಲೆಯುತ್ತಿದ್ದಾರೆ. ಕುಡಿವ ನೀರು ಬಂದು ಕೆಲ ಬೀದಿಗೆ ವಾರಗಳೇ ಕಳೆದಿವೆ. ಸಮಸ್ಯೆಗೆ ಅಧಿಕಾರಿಗಳು ಹಾಗು ಗ್ರಾಪಂ ಸದಸ್ಯರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಜಿಪಂ ಸದಸ್ಯ ಡಿ.ಸಿ.ನಾಗೇಂದ್ರ ಕಳೆದ ಹದಿನೈದು ದಿನಗಳ ಹಿಂದೆಯೇ ಸಂಪು ಮಾಡಿಸುವುದಾಗಿ ಹೇಳಿ ಮಾತಿಗೆ ತಪ್ಪಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀರಿನ ಸಮಸ್ಯೆ ಬಗೆಹರಿಸುವ ತನಕ ಪ್ರತಿಭಟನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಪೊಲೀಸರೊಂದಿಗೆ ಕೆಲ ಕಾಲ ಮಾತಿನ ಚಕಮಕಿ ನಡೆಸಿದರು.
ಪಿಡಿಒ ಆಗಮನ: ಪರಿಸ್ಥಿತಿ ಗಂಭೀರತೆ ಅರಿತ ಪೊಲೀಸರು ಬೇಗೂರು ಗ್ರಾಪಂ ಪಿಡಿಒ ನಾಗಭೂಷಣ ಅವರನ್ನು ಕರೆಸಿದರು. ನಾಗಭೂಷಣ ಮಾತನಾಡಿ, ಕಬಿನಿ ನೀರು 1 ಮತ್ತು 3ನೇ ವಾರ್ಡಿಗೆ ಸರಬರಾಜಾಗುತ್ತಿದೆ. ಇನ್ನುಳಿದ ವಾರ್ಡ್ಗಳಿಗೆ ಹೊಸದಾಗಿ ಪೈಪ್ಲೈನ್ ಅಳವಡಿಸಿ ನೀರು ಕೊಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯವಾಯಿತು.
ಗ್ರಾಮದ ಎಸ್ಡಿಎಂಸಿ ಮಾಜಿ ಅಧ್ಯಕ್ಷ ರಾಜಶೆಟ್ಟಿ, ಗ್ರಾಪಂ ಸದಸ್ಯ ಶಿವಮೂರ್ತಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಿ.ಪುಟ್ಟಸ್ವಾಮಿ, ಶಿವಣ್ಣ, ಪುಟ್ಟರಾಜು, ಅಶೋಕ್, ಸಿದ್ದಮ್ಮ, ಲಕ್ಷ್ಮಮ್ಮ, ರಾಜಶೆಟ್ಟಿ, ಮಹದೇವ, ಸಾರ್ಥಕ್ ಮಹೇಶ್, ಪುನೀತ್ ಸೇರಿದಂತೆ ಹಲವರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.