ಮತಕ್ಕಾಗಿ ಯಂತ್ರ- ಮಂತ್ರಗಳ ಬ್ಲಾಕ್ಮೇಲ್ ತಂತ್ರ
ಕೊಳ್ಳೇಗಾಲ: ನಗರಸಭೆಯ 11ನೇ ವಾರ್ಡ್ನಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯ ಪತಿಯೊಬ್ಬರು ಅರ್ಚಕರಾಗಿದ್ದು, ತಮ್ಮ ಪತ್ನಿಯನ್ನು ಗೆಲ್ಲಿಸಿಕೊಳ್ಳಲು ಮತದಾರರನ್ನು ಯಂತ್ರ- ಮಂತ್ರ ತಂತ್ರಗಳ ಮೂಲಕ ಬ್ಲಾಕ್ಮೇಲೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಮಕ್ಕಳ ಮಹದೇಶ್ವರ ದೇವಸ್ಥಾನದ ಅರ್ಚಕ ರಮೇಶ ಎಂಬವರು ತನ್ನ ಪತ್ನಿ ಪರ ಮತ ಯಾಚನೆಗೆ ಆಗಮಿಸಿದಾಗ ನೀವು ಊಟ ಮಾಡುತ್ತಿರುವ ಅನ್ನದ ಮೇಲೆ ಆಣೆ ಮಾಡಿ ಹೇಳಿ, ಮತ ಹಾಕುತ್ತೇನೆ ಅಂತ. ಈ ದುಡ್ಡನ್ನು ಮುಟ್ಟಿ ಪ್ರಮಾಣ ಮಾಡಿ, ನನ್ನ ಪತ್ನಿಯನ್ನು ಬೆಂಬಲಿಸುತ್ತೇನೆ ಅಂತ ಎಂದು ಮತದಾರರನ್ನು ನಂಬಿಕೆಯ ಹಿನ್ನೆಲೆಯಲ್ಲಿ ಕಟ್ಟಿ ಹಾಕುತ್ತಿದ್ದಾರೆ. ಅಲ್ಲದೇ ನಿಮ್ಮ ಮಕ್ಕಳಿಗೆ ಆರೋಗ್ಯ ತಪ್ಪಿದಾಗ, ಹೆದರಿಕೊಂಡಾಗ ನಾನು ಯಂತ್ರ(ತಾಯತ) ಕಟ್ಟುತ್ತೇನೆ. ದಯವಿಟ್ಟು ನನ್ನ ಪತ್ನಿಗೆ ಮತ ಹಾಕಿ ಎಂದು ಅಂಗಲಾಚುತ್ತಿದ್ದಾರೆ ಎಂದು ಕೆಲ ಮತದಾರರು 'ಕನ್ನಡಪ್ರಭ'ಕ್ಕೆ ಖಚಿತಪಡಿಸಿದ್ದಾರೆ.
ಅರ್ಚಕ ರಮೇಶ್ ಈ ರೀತಿ ಮತ ಯಾಚಿಸಿ, ನಮಗೆ ಬೇಸರ ತರಿಸುತ್ತಿದ್ದಾರೆ. ಬ್ಲಾಕ್ಮೇಲ್ ತಂತ್ರ ಮಾಡುತ್ತಿದ್ದಾರೆ. ವಿಧಿ ಇಲ್ಲದೆ ಒತ್ತಡಕ್ಕೆ ಮಣಿದು ಆಣೆ ಮಾಡಿದ್ದೇವೆ ಎನ್ನುತ್ತಾರೆ 11ನೇ ವಾರ್ಡ್ನ ಕೆಲವು ಮತದಾರರು. ಇನ್ನು ಕೆಲವರು ನಾವು ಆಣೆ ಪ್ರಮಾಣ ಮಾಡುವುದಿಲ್ಲ. ಈ ರೀತಿ ಮತ ಯಾಚಿಸುವುದು ತಪ್ಪು ಎಂದು ಹೇಳಿ ಅರ್ಚಕ ರಮೇಶ್ಗೆ ತಿರುಗೇಟು ನೀಡಿದ್ದಾರೆ.
ಪೈಪೋಟಿ, ಕೆಸರೆರಚಾಟದ ವಾರ್ಡ್: ಈಗಾಗಲೇ ತೀವ್ರ ಸುದ್ದಿಯಲ್ಲಿರುವ ಈ ವಾರ್ಡ್ನಿಂದ ಅರ್ಚಕ ರಮೇಶ ಅವರ ಪತ್ನಿ ಅನಸೂಯ ಬಿಜೆಪಿಯಿಂದ, ಕಾಂಗ್ರೆಸ್ನಿಂದ ರಾಧಾ ನಾಗೇಶ, ಜೆಡಿಎಸ್ನಿಂದ ಕೃಷ್ಣವೇಣಿ, ಕೆಜೆಪಿಯಿಂದ ಶಾಂತಾ, ಪಕ್ಷೇತರರಾಗಿ ಪ್ರತಿಮಾಕಾಂತ, ಬಿಎಸ್ಆರ್ನಿಂದ ಚೈತ್ರ ಸ್ಪರ್ಧಿಸಿದ್ದಾರೆ. ಈ ವಾರ್ಡ್ನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಏನಿದು ಕಥೆ?: 11ನೇ ವಾರ್ಡ್ನಿಂದ ಕಳೆದ ಬಾರಿ ಮಕ್ಕಳ ಮಹದೇಶ್ವರ ದೇವಸ್ಥಾನದ ಅರ್ಚಕ ರಮೇಶ ಅವರ ಪತ್ನಿ ಅನುಸೂಯ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಪ್ರತಿಮಾಕಾಂತ ಎದುರು ಅನುಸೂಯ ಪ್ರಬಲ ಪೈಪೋಟಿ ನೀಡಿ ಸೋತಿದ್ದರು. ಈ ಬಾರಿ ಬಿಜೆಪಿ ವರಿಷ್ಠರು ಟಿಕೆಟ್ ನೀಡಿರುವುದರಿಂದ ತಮ್ಮ ಪತ್ನಿ ಸುಲಭವಾಗಿ ಗೆಲ್ಲಬಹುದು ಹಾಗೂ ಗೆಲ್ಲಲೇಬೇಕೆಂಬ ಆಸೆಯಿಂದ, ಪ್ರಭಾವಿ ಬಿಜೆಪಿ ನಾಯಕರ ಸಹಕಾರ ಪಡೆದು ರಮೇಶ್ ಅವರು ಮತದಾರರನ್ನು ಆಣೆ ಪ್ರಮಾಣ ಮಾಡಿ ಎಂಬ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹಣ, ಹೆಂಡದ ಆಮಿಷ ಪ್ರತಿ ಚುನಾವಣೆಯಲ್ಲೂ ಸಹಜವಾಗಿ ಕೆಲಸ ಮಾಡುತ್ತದೆ. ಆದರೆ 11ನೇ ವಾರ್ಡ್ನಲ್ಲಿ ಯಂತ್ರ ಮಂತ್ರದ ಬ್ಲಾಕ್ಮೇಲ್ ತಂತ್ರ ಎಷ್ಟು ಕೆಲಸ ಮಾಡುವುದೋ ಕಾದು ನೋಡಬೇಕಿದೆ.
ಕಾಂಗ್ರೆಸ್ ಅಭ್ಯರ್ಥಿ ಪತಿ ಎತ್ತಂಗಡಿ
11ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ರಾಧಾ ನಾಗೇಶ ಅವರ ಪತಿ ನಾಗೇಶ ಅನಾರೋಗ್ಯ ನಿಮಿತ್ತ ರಜೆಯಲ್ಲಿದ್ದರು. ತಮ್ಮ ಪತ್ನಿ ಪರ ಹಿಂಬಾಗಿಲ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿಯ ಸಂಬಂಧಿಗಳ ದೂರಿನ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಅವರ ರಜೆಯನ್ನು ರದ್ದುಗೊಳಿಸಿದ್ದಾರೆ. ಸಿಎಂ ಕಚೇರಿಯಿಂದ ಬಂದ ಫ್ಯಾಕ್ಸ್ ಸಂದೇಶದಿಂದ ರಜೆಯಲ್ಲಿದ್ದ ನಾಗೇಶ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎನ್ನಲಾಗಿದೆ. ಅವರು ಸಹಕಾರ ಸಂಘಗಳ ನಿಯಮಿತ ಮುಖ್ಯ ಪ್ರವರ್ತಕರಾಗಿ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸರ್ಕಾರ ದಿಢೀರ್ ರಜೆ ರದ್ದುಗೊಳಿಸಿದ್ದರಿಂದ ಗುರುವಾರವೇ ನಾಗೇಶ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
-ಎನ್.ನಾಗೇಂದ್ರಸ್ವಾಮಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.