ಹನೂರು ಕಾಂಗ್ರೆಸ್ ಭದ್ರಕೋಟೆ: ನರೇಂದ್ರ
ಹನೂರು: ತಾಲೂಕು ಕಾಂಗ್ರೆಸ್ನ ಭದ್ರಕೋಟೆಯಾಗಿದ್ದು, ಈ ಬಾರಿಯೂ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಶಾಸಕ ಆರ್.ನರೇಂದ್ರ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪಪಂನ 13 ವಾರ್ಡ್ಗಳಿಗೆ ಚುನಾವಣೆ ನಡೆಯುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ಹನೂರಿಗೆ ಕಾವೇರಿ ಕುಡಿಯುವ ನೀರು ಪೂರೈಸಲು 13 ಕೋಟಿ ವೆಚ್ಚದಲ್ಲಿ ಪೈಪ್ಲೈನ್ ನಿರ್ಮಿಸಿದ್ದು, ಮುಖ್ಯಾಧಿಕಾರಿ ಮತ್ತು ಎಂಜಿನಿಯರ್ ಸರಿಯಾಗಿ ನಿರ್ವಹಣೆ ಮಾಡದ ಕಾರಣ ನೀರಿನ ಸಮಸ್ಯೆ ತಲೆದೋರಿದೆ. ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಪಟ್ಟಣದಲ್ಲಿ 2.23 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ, ಬಿ.ಕಾಂ, ಬಿಬಿಎಂ ತರಗತಿ ತೆರೆಯಲಾಗಿದೆ. ಲ್ಯಾಬ್ ನಿರ್ವಹಣೆಗೆ 37 ಲಕ್ಷ, ಕೊಠಡಿಗಳ ನಿರ್ಮಾಣಕ್ಕೆ 37 ಲಕ್ಷ, ಕಾಲೇಜಿನ ನಿರ್ವಹಣೆಗಾಗಿ 17 ಲಕ್ಷ ಹಾಗೂ ಪಟ್ಟಣದಲ್ಲಿ 14 ಕೋಟಿ ವೆಚ್ಚದಲ್ಲಿ ಏಕಲವ್ಯ ಶಾಲೆ ನಿರ್ಮಾಣವಾಗುತ್ತಿದೆ. ಇದೆಲ್ಲ ಕಾಂಗ್ರೆಸ್ ಸಾಧನೆಯಾಗಿದ್ದು, ಜೆಡಿಎಸ್, ಬಿಜೆಪಿ, ಕೆಜೆಪಿಯವರಿಗೆ ಸಾಧನೆ ಹೇಳಿಕೊಳ್ಳಲು ಏನೂ ಇಲ್ಲ ಎಂದರು.
ತಾಲೂಕು ಕೇಂದ್ರವಾಗಿರುವ ಹನೂರಿಗೆ ಮುಂದಿನ ದಿನಗಳಲ್ಲಿ ಎಲ್ಲ ಕಚೇರಿಗಳನ್ನು ಆರಂಭಿಸಲಾಗುತ್ತದೆ. ಬಸ್ ನಿಲ್ದಾಣ, ಬೈಪಾಸ್ ರಸ್ತೆ, ಪಾರ್ಕ್ ನಿರ್ಮಾಣ ಹಾಗೂ ಹುಬ್ಬೆಹುಣಸೇ ಜಲಾಶಯ ಕಾಮಗಾರಿ ನ್ಯಾಯಾಲಯದಲ್ಲಿದ್ದು, ಮುಂದಿನ ದಿನಗಳಲ್ಲಿ ಅದು ಸಹ ಆರಂಭಗೊಳ್ಳಲಿದೆ. ಪಟ್ಟಣದ ಕೆಲವೆಡೆ ಹಾಗೂ ಆರ್.ಎಸ್ ದೊಡ್ಡಿ ಹೊಸ ಬಡಾವಣೆಗೆ ಕಾಂಕ್ರೀಟ್ ರಸ್ತೆ ಹಾಗೂ ವಿದ್ಯುಚ್ಛಕ್ತಿ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಪಟ್ಟಣದ ಇತರ ಎರಡು ಕಡೆ ಸಾಮೂಹಿಕ ಶೌಚಾಲಯ ತೆರೆಯಲಾಗುವುದು. ಪೌರ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದರು.
ಪಟ್ಟಣದಲ್ಲಿ ಪ್ರತಿ ಎರಡು ವಾರ್ಡ್ಗೆ ಒಬ್ಬೊಬ್ಬ ಜಿಪಂ ಸದಸ್ಯರ ಉಸ್ತುವಾರಿ ಕಮಿಟಿ ನೇಮಿಸಿದ್ದು, ಅಭ್ಯರ್ಥಿಗಳು ಹಾಗೂ ಮುಖಂಡರ ಜೊತೆಯಲ್ಲಿ ಕಾಂಗ್ರೆಸ್ ಸಾಧನೆಗಳನ್ನು ತಿಳಿಸಿ ಪ್ರಚಾರ ಕೈಗೊಳ್ಳಲಾಗುವುದು. ಮಾ.4ರಂದು ಪಟ್ಟಣದಲ್ಲಿ ಸಂಸದ ಆರ್.ಧ್ರುವನಾರಾಯಣ ಹಾಗೂ ಜಿಲ್ಲಾಧ್ಯಕ್ಷ ಮಹದೇವ ಪ್ರಸಾದ್ ಅಧ್ಯಕ್ಷತೆಯಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಜಿಪಂ ಸದಸ್ಯರಾದ ಈಶ್ವರ್, ಶಿವಮ್ಮ, ಹನೂರು ಬ್ಲಾಕ್ ಅಧ್ಯಕ್ಷ ಕೆಂಪಯ್ಯ, ರಾಮಾಪುರ ಕಾಮರಾಜ್, ಟಿಎಪಿಸಿಎಂಸಿ ಅಧ್ಯಕ್ಷ ಲಿಂಗರಾಜ್, ತಾಪಂ ಮುರುಳಿ, ಸಣ್ಣೇಗೌಡ, ಕೆಪಿಸಿಸಿ ಅಧ್ಯಕ್ಷ ಬಸವರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.