ಆಟೋ ಮೇಲೆ ವಾಟಾಳ್ ಪ್ರಚಾರ
ಚಾಮರಾಜನಗರ: ನಗರಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳ ಪ್ರಚಾರದ ಭರಾಟೆ ರಂಗೇರುತ್ತಿದ್ದು, ಹಗಲಿರುಳೆನ್ನದೆ ಮನೆ ಮನೆಗೆ ತೆರಳಿ, ಮತದಾರ ಪ್ರಭುವನ್ನು ಓಲೈಸುತ್ತಿದ್ದಾರೆ.
ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ಮಾಜಿ ಶಾಸಕ ವಾಟಾಳ್ ನಾಗರಾಜ್ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭಾನುವಾರ ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ತಮ್ಮ ಪಕ್ಷದ ಗುರುತಾದ ಆಟೋ ರಿಕ್ಷಾದಲ್ಲಿ, ಆಟೋ ಡ್ರೈವರ್ ಸಮವಸ್ತ್ರ ಧರಿಸಿ, ಮೆರವಣಿಗೆ ತೆರಳಿ, ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಈ ಸಂಧರ್ಭದಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಪಂಗಳು ಆಳುವ ಪಕ್ಷದ ಗುಲಾಮರಾಗಿರಬಾರದು. ಮೇಯರ್ ಹಾಗೂ ಅಧ್ಯಕ್ಷರು ಚುನಾವಣೆ ಮೂಲಕ ಆಯ್ಕೆಯಾಗಬೇಕು. ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತ್ತತೆ ಇರಬೇಕು. ಸಂಪನ್ಮೂಲ ಕ್ರೋಡೀಕರಣದ ಸಂಪೂರ್ಣ ಅಧಿಕಾರ ಸ್ಥಳೀಯ ಸಂಸ್ಥೆಗಳದ್ದಾಗಿರಬೇಕು ಎಂದು ಆಗ್ರಹಿಸಿದರು.
ತಮ್ಮ ಪಕ್ಷವು ನಗರಕ್ಕೆ ಕಾಯಂ ಕುಡಿಯುವ ನೀರಿನ ವ್ಯವಸ್ಥೆ, ಕಾವೇರಿ 2ನೇ ಹಂತ, ಉತ್ತಮ ಮಾರುಕಟ್ಟೆ, ಬೀದಿ ನಾಯಿಗಳ ನಿಯಂತ್ರಣ, ರಸ್ತೆ ನಿರ್ಮಾಣ, ಮಲ ಹೊರುವ ಪದ್ಧತಿ ನಿಲುಗಡೆ, ಜನತಾ ಬಜಾರ್, ನಿವೇಶನ ಹಾಗೂ ಮನೆಗಳ ಹಂಚಿಕೆ, ಸಾರ್ವಜನಿಕ ಗ್ರಂಥಾಲಯ, ಒಳಚರಂಡಿ ವ್ಯವಸ್ಥೆ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣದ ಸ್ವಚ್ಛತೆ, ಪೌರಕಾರ್ಮಿಕರಿಗೆ ಹೆಚ್ಚಿನ ವೇತನ, ಆಟೋ ರಿಕ್ಷಾ ನಿಲ್ದಾಣ, ರಂಗಮಂದಿರ ನಿರ್ಮಾಣ, ಬಟ್ಟೆ ತೊಳೆಯುವ ಸ್ಥಳ, ಸುಸಜ್ಜಿತ ಶೌಚಾಲಯ ನಿರ್ಮಾಣ, ಕಸ ಶೇಖರಣೆ, ಹಾವು ಹಿಡಿಯಲು ವ್ಯವಸ್ಥೆ, ಹೇರ್ ಕಟಿಂಗ್ ಸಲೂನ್ ಹಾಗೂ ಲಾಂಡ್ರಿಗಳಿಗೆ ಸಹಾಯಧನ, ನಾದಸ್ವರ ವಾದ್ಯ ಮೇಳದವರಿಗೆ ಸಹಾಯಧನ, ಉದ್ಯಾನವನಗಳಲ್ಲಿ ರಜಾದಿನದಂದು ಸಾರ್ವಜನಿಕರಿಗೆ ವಾದ್ಯಗೋಷ್ಠಿ, ನಾಟಕಗಳಿಗೆ ಧನಸಹಾಯ ಮಾಡಲು ಪ್ರೋತ್ಸಾಹಿಸುತ್ತದೆ ಎಂದರು.
ಪಕ್ಷದ ಅಭ್ಯರ್ಥಿಗಳು, ಮುಖಂಡರಾದ ಕಾರ್ ನಾಗೇಶ್, ಸುರೇಶ್ನಾಗ್, ಚಾ.ವೆಂ. ಶ್ರೀನಿವಾಸಗೌಡ, ಮಂಜು, ಪ್ರಕಾಶ್, ಬೇಡರಪುರ ಬಸವಣ್ಣ, ದಳಪತಿ ವೀರತಪ್ಪ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.