ಶಿಷ್ಯರ ಗೆಲವಿಗೆ ಶಾಸಕ ಜಿಎನ್ನೆನ್ ಅಡ್ಡಗಾಲು
ಕೊಳ್ಳೇಗಾಲ: ನಗರಸಭೆ ಚುನಾವಣೆಯಲ್ಲಿ 27ನೇ ವಾರ್ಡ್ ಮತ್ತು 19ನೇ ವಾರ್ಡ್‌ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಬಸ್ತಿಪುರ ಶಾಂತರಾಜು, ಮುಡಿಗುಂಡ ಶಾಂತು ಕಣದಲ್ಲಿರುವುದು ವಿಶೇಷ. ಏಕೆಂದರೆ ಈ ಹಿಂದೆ ಇವರಿಬ್ಬರೂ ನಂಜುಂಡಸ್ವಾಮಿ ಅವರ ಶಿಷ್ಯರೇ ಆಗಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ತಮ್ಮ ಶಿಷ್ಯರಿಬ್ಬರ ಗೆಲವಿಗೆ ಶಾಸಕರು ಅಡ್ಡಗಾಲು ಹಾಕಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ 27ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಹಾಕದೆ ಸ್ಥಳೀಯ ಶಾಸಕ ಜಿ.ಎನ್.ನಂಜುಂಡಸ್ವಾಮಿ ಪಕ್ಷೇತರ ಅಭ್ಯರ್ಥಿಗೆ ಸಾಥ್ ನೀಡಿದ್ದಾರೆ. ಮಾತ್ರವಲ್ಲ, ಆ ವಾರ್ಡ್‌ನಲ್ಲಿ ಬೇರೆ ಪಕ್ಷಗಳು ಅಭ್ಯರ್ಥಿ ನಿಲ್ಲಿಸದಂತೆಯೂ ಪ್ರತಿತಂತ್ರ ರೂಪಿಸಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಪಣತೊಟ್ಟಿದ್ದಾರೆ.
ಅದೇ ರೀತಿ 19ನೇ ವಾರ್ಡ್‌ನಲ್ಲಿ ಸ್ಪರ್ಧಿಸಿರುವ ಬಸ್ತಿಪುರ ಶಾಂತರಾಜು ಅವರನ್ನು ಸೋಲಿಸಲು ಶಾಸಕರು ತೆರೆ ಮರೆಯ ಯತ್ನ ನಡೆಸುತ್ತಿದ್ದಾರೆ. ಕಣದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದರೂ ಶಾಂತರಾಜು ಸೋಲಿಸಲು ಶಾಸಕರು ಇತರೆ ತಂತ್ರ- ಪ್ರತಿತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಬೆಳವಣಿಗೆಗೆ ಕಾರಣ?: ಮುಡಿಗುಂಡ ಶಾಂತು, ಹಾಗೂ ಬಸ್ತಿಪುರ ಶಾಂತರಾಜು ಜಿ.ಎನ್.ನಂಜುಂಡಸ್ವಾಮಿ ಅವರ ಆಪ್ತ ಶಿಷ್ಯರಾಗಿದ್ದವರು. ಕಳೆದ ನಗರಸಭೆ ಚುನಾವಣೆ ಸಂದರ್ಭದಲ್ಲಿ ಇಬ್ಬರಿಗೂ ಟಿಕೆಟ್ ಕೊಡಿಸಿ ಗೆಲವಿಗೆ ಶ್ರಮಿಸಿದ್ದರು. ಆದರೆ ರಾಜಕೀಯ ಕಾರಣಗಳಿಂದ ನಂಜುಂಡಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರಕದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಾಗ ಈ ಇಬ್ಬರು ಸದಸ್ಯರು ಅವರ ಜೊತೆ ಗುರುತಿಸಿಕೊಳ್ಳಲಿಲ್ಲ. ಹಾಗಾಗಿ ತಮ್ಮ ಬೆಂಬಲಿಗರು ತಮ್ಮ ಜೊತೆ ಬರಲಿಲ್ಲ ಎಂಬ ದ್ವೇಷ ರಾಜಕಾರಣಕ್ಕೆ ಶಾಸಕರು ಸೋಲಿಸುವ ಈ ತಂತ್ರ ಪ್ರಯೋಗಿಸಿದ್ದಾರೆ.
ಕಾಂಗ್ರೆಸ್ ವರಿಷ್ಠರು ಸಹ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ಅಭ್ಯರ್ಥಿಗಳ ಗೆಲವಿಗೆ ಸಂಸದ ಆರ್.ಧ್ರುವನಾರಾಯಣ, ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಹದೇವಪ್ರಸಾದ್, ಮಾಜಿ ಶಾಸಕ ಜಯಣ್ಣ ನೇತೃತ್ವದ ನಾಯಕರ ತಂಡ ಶಾಸಕರ ತಂತ್ರಕ್ಕೆ ಪ್ರತಿತಂತ್ರ ಪ್ರಯೋಗಿಸಲು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಶಾಸಕ ನಂಜುಂಡಸ್ವಾಮಿ ಅವರ ತಂತ್ರ ಫಲಿಸುವುದೋ ಅಥವಾ ಇಬ್ಬರು ಶಾಂತರಾಜುಗಳು ಮತದಾರರ ಆಶೀರ್ವಾದದಿಂದ ಗೆಲವು ಸಾಧಿಸಿ ಶಾಸಕರಿಗೆ ಪ್ರತಿತಂತ್ರ ಪ್ರಯೋಗಿಸುವರೋ ಎಂಬುದನ್ನು ಮಾ.11ರವರೆಗೂ ಕಾದು ನೋಡಬೇಕಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.