ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ನೈರ್ಮಲ್ಯ ಕಾರ್ಯಕ್ರಮಕ್ಕೆ ಒತ್ತು ನೀಡಿ: ನಾಗಶ್ರೀ ಸಲಹೆ

Parashurama
Updated On : 19 Mar 2013, 10:02 am

ಕ.ಪ್ರ.ವಾರ್ತೆ ್ಣ ಚಾಮರಾಜನಗರ ್ಣ ಮಾ.19
ಜಿಲ್ಲೆಯಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೆತ್ತಿಕೊಳ್ಳಲು ಉದ್ಯೋಗ ಖಾತ್ರಿ ಯೋಜನೆಯಡಿ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಾಗಶ್ರೀ ಪ್ರತಾಪ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದ ಮಂಗಳವಾರ ಜಿಲ್ಲಾ ಪಂಚಾಯತ್ ಹಾಗೂ ಫ್ಯಾನ್ಸಾ ಕರ್ನಾಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ನೈರ್ಮಲ್ಯ ಆಂದೋಲನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನೈರ್ಮಲ್ಯ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡಿ ಸಾಧನೆ ಮಾಡಬೇಕಿದೆ. ಜನರಲ್ಲಿ ಮೌಢ್ಯತೆ ಕಡಿಮೆಯಾಗುತ್ತಿದೆ. ಶುಚಿತ್ವ ಕೆಲಸಗಳ ಅರಿವು ಮೂಡತೊಡಗಿದೆ. ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಶೌಚಾಲಯಗಳನ್ನು ನಿರ್ಮಿಸಲು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿಶೇಷ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಶೌಚಾಲಯ ಮುಕ್ತಗೊಳಿಸಲು ಗ್ರಾಮದ ಹಿರಿಯರು, ಯಜಮಾನರು, ವಿವಿಧ ಕೋಮಿನ ಮುಖಂಡರ ಸಹಕಾರ ಪಡೆಯಬೇಕು. ಅವರ ಮೂಲಕ ಊರಿನ ಜನತೆಗೆ ಶೌಚಾಲಯಗಳ ನಿರ್ಮಾಣಕ್ಕೆ ಮನವೊಲಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಜತೆಗೂಡಿ ನೈರ್ಮಲ್ಯ ಕಾರ್ಯಕ್ರಮ ಜಾರಿಗೊಳಿಸಲು ಶ್ರಮಿಸಬೇಕು ಎಂದು ನಾಗಶ್ರೀ ಸಲಹೆ ನೀಡಿದರು.
ಆರೋಗ್ಯ ಹಾಗೂ ನೈರ್ಮಲ್ಯ ಕಾರ್ಯಕ್ರಮಗಳ ಪ್ರಚಾರಕ್ಕೆ ವಿಶೇಷವಾಗಿ ರೂಪಿಸಲಾಗಿರುವ ನೈರ್ಮಲ್ಯ ವಾಹಿನಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪಿ. ಮಹದೇವಪ್ಪ ಜನರ ಆರೋಗ್ಯ ಹಾಗೂ ಸ್ವಚ್ಛತಾ ಕಾರ್ಯಕ್ರಮಗಳಿಗಾಗಿ ಸರ್ಕಾರ ಹೆಚ್ಚು ಅನುದಾನ ಮೀಸಲಿಟ್ಟು ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ಜನಪ್ರತಿನಿಧಿಗಳು ನೈರ್ಮಲ್ಯ ಕಾರ್ಯಕ್ರಮಗಳಿಗೆ ಸ್ಪಂದಿಸಿ ಜಾಗೃತಿ ಮೂಡಿಸಬೇಕು.
ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳುವವರಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ತ್ವರಿತವಾಗಿ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಸ್ವಚ್ಛತೆಯು ಸಂಸ್ಕೃತಿಯ ವ್ಯಾಪ್ತಿಗೆ ಬರಲಿವೆ. ಕೇವಲ ಆರ್ಥಿಕ ಅಭಿವೃದ್ಧಿಯಿಂದ ಶ್ರೀಮಂತಿಕೆಯನ್ನು ಅಳೆಯಲಾಗುವುದಿಲ್ಲ. ಸಂಸ್ಕೃತಿ ಮೇಲುಗೈಯಿಂದಲೂ ಆಯಾ ದೇಶದ, ಭಾಗದ ಪ್ರಗತಿ ನಿರ್ಧರಿತವಾಗುತ್ತದೆ. ಹಿರಿಯ ತಲೆಮಾರಿನಿಂದಲೂ ಸ್ವಚ್ಛತೆಗೆ ಮಹತ್ವ ನೀಡಿರುವುದನ್ನು ಗಮನಿಸಿದ್ದೇವೆ. ಆದರೆ, ಅನೈರ್ಮಲ್ಯದಿಂದ ಉಂಟಾಗುವ ಗಂಭೀರ ಪರಿಣಾಮಗಳ ಅರಿವಿದ್ದರೂ ವೈಯಕ್ತಿಕ ಹಾಗೂ ಸಮುದಾಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಇತ್ತೀಚೆಗೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತಿದೆ ಎಂದು ವಿಷಾದಿಸಿದರು.
ಶುದ್ಧ ಕುಡಿಯುವ ನೀರು, ಅಹಾರ ಮತ್ತು ನೈರ್ಮಲ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ನೈರ್ಮಲ್ಯ ಕಾರ್ಯಕ್ರಮಗಳ ಕೆಲಸವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಬದ್ಧತೆಯಿಂದ ಗುರಿ ಹಾಕಿಕೊಂಡು ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಅಲ್ಪ ಅವಧಿಯಲ್ಲಿ ಸಂಪೂರ್ಣ ನೈರ್ಮಲ್ಯ ಸಾಧಿಸುವ ಗ್ರಾಮ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಜನಪ್ರತಿನಿಧಿಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದಲೇ ಪ್ರತ್ಯೇಕವಾಗಿ ಸಮಾರಂಭ ಆಯೋಜಿಸಿ ಸನ್ಮಾನಿಸಲಾಗುವುದು. ಸಂಪೂರ್ಣ ಸ್ವಚ್ಛತಾ ಅಭಿಯಾನದ ಯಶಸ್ಸಿಗೆ ಕಾರಣರಾದವರಿಗೆ ಬಹುಮಾನ ವಿತರಿಸಲಾಗುವುದು. ಸಾಧನೆ ಮಾಡಿದ ಗ್ರಾಮ ಪಂಚಾಯತ್ಗಳನ್ನು ಇತರ ಗ್ರಾಮ ಪಂಚಾಯಿತಿಗಳಿಗೆ ಬ್ರಾಂಡ್ ಅಂಬಾಸಿಡರ್ ರೀತಿ ಪರಿಚಯಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಫ್ಯಾನ್ಸಾ ರಾಷ್ಟ್ರೀಯ ಸಂಚಾಲಕರಾದ ಡಾ. ಎಂ.ಆರ್. ಸೀತಾರಾಮ ಮಾತನಾಡಿ, ವಿಶ್ವಾದ್ಯಂತ ನೀರು, ನೈರ್ಮಲ್ಯದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಕಳೆದ ವರ್ಷ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಜರುಗಿದ 4ನೇ ದಕ್ಷಿಣ ಏಷ್ಯಾ ಸ್ವಚ್ಛತಾ ಸಮ್ಮೇಳನದಲ್ಲಿ ಎಲ್ಲ ಸಮುದಾಯದ ಜನರಿಗೆ ಶುದ್ಧ ನೀರು ಹಾಗೂ ನೈರ್ಮಲೀಕರಣ ವ್ಯವಸ್ಥೆ ಒದಗಿಸುವ ವಾಗ್ದಾನ ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳು ಮಾಡಿವೆ. ಶುಚಿತ್ವ ಒದಗಿಸುವ ಕಾರ್ಯನೀತಿ ಜಾರಿಗೊಳಿಸುವ ಬದ್ಧತೆಯನ್ನು ತೋರಬೇಕಿದೆ. ಈ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಜನರಲ್ಲಿ ನೈರ್ಮಲ್ಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ದಿಸೆಯಲ್ಲಿ ಕೊಟ್ಟ ಮಾತಿಗೆ ಬದ್ಧರಾಗಿ ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟುಕೊಂಡು ವ್ಯಾಪಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಚಾಮರಾಜನಗರದಿಂದಲೇ ಆರಂಭಿಸಲಾಗಿದೆ ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್. ಸೋಮಶೇಖರಪ್ಪ, ಉಪ ಕಾರ್ಯದರ್ಶಿ ಎ.ಪಿ. ಶಂಕರರಾಜು, ಯೂನಿಸಫ್ ರಾಜ್ಯ ಸಮಾಲೋಚಕರಾದ ಎಂ.ಎಸ್. ರಘುಕುಮಾರ್, ಆರ್ಗ್ಯಂ  ಸಂಸ್ಥೆಯ ನಿವೇದಿತಾ, ಇನ್ಫೋಸಿಸ್ ಫೌಂಡೇಷನ್ನ ಶೇಷಾದ್ರಿ ಕುಲಕರ್ಣಿ, ಸ್ನೇಹ ಸ್ವಯಂ ಸೇವಾ ಸಂಸ್ಥೆಯ ಹೇಮ, ಕೃಷ್ಣನ್ ಕಾರ್ಯಕ್ರಮದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments