ಕೊನೆಗೂ ನಂಜುಂಡಸ್ವಾಮಿಗೆ ಅರಳಿದ ಕಮಲ
ಕ.ಪ್ರ.ವಾರ್ತೆ ಕೊಳ್ಳೇಗಾಲ ಮಾ.25
ಕೊಳ್ಳೇಗಾಲ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡುವ ಮೂಲಕ ಎಲ್ಲ ಗೊಂದಲಕ್ಕೂ ತೆರೆ ಎಳೆದಿದೆ.
ಬಿಜೆಪಿಯಿಂದ ಜಿಲ್ಲೆಯಲ್ಲಿ ಗೆದ್ದಿದ್ದ ಏಕೈಕ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ನಡೆ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿತ್ತು. ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದೇ ಅಸ್ಪಷ್ಟವಾಗಿತ್ತು. ಆದರೆ ಇದೀಗ ಬಿಜೆಪಿ ಟೆಕೆಟ್ ಘೋಷಣೆ ಮಾಡಿರುವುದರಿಂದ ತೆರೆ-ಮರೆ ಪ್ರಯತ್ನಕ್ಕೆ ತೆರೆ ಹಾಕಿದಂತಾಗಿದೆ.
ಉಪಚುನಾವಣೆಯಲ್ಲಿ 49 ಸಾವಿರ ಮತ: 1991ರಲ್ಲಿ ಬಿಜೆಪಿಯಿಂದ ಮೈಸೂರು ಜಿಲ್ಲಾ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ನಂಜುಂಡಸ್ವಾಮಿ, ನಂತರ 1994ರಲ್ಲಿ ಬಿಜೆಪಿಯಿಂದ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 17 ಸಾವಿರ ಮತ ಪಡೆದು ಜೆಡಿಎಸ್ ಅಭ್ಯರ್ಥಿ ಎಸ್.ಜಯಣ್ಣ ವಿರುದ್ಧ ಪರಾಭವಗೊಂಡರು. ನಂತರ 1999ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಅಭ್ಯರ್ಥಿಯಾಗಿ ಸ್ಪರ್ಧಿಸಿ 34 ಸಾವಿರ ಮತ ಪಡೆದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲಿ ಇವರಿಗೆ ಪ್ರಬಲ ಸ್ಪರ್ಧೆಯೊಡ್ಡಿದ್ದು, ಮಾಜಿ ಶಾಸಕ ಬಾಲರಾಜು. ನಂತರ 2004ರ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆದು ನಂಜುಂಡಸ್ವಾಮಿ ಅವರು ಎಸ್.ಬಾಲರಾಜು ವಿರುದ್ಧ ಸೋಲು ಅನುಭವಿಸಬೇಕಾಯಿತು. 2008ರ ಚುನಾವಣೆಯಲ್ಲಿ ಕೊನೆಗಳಿಗೆಯಲ್ಲಿ ಜಿ.ಎನ್.ನಂಜುಂಡಸ್ವಾಮಿ ಕೈ ಟಿಕೆಟ್ ನಿರೀಕ್ಷಿಸಿದ್ದರಾದರೂ ಅದು ಆರ್. ಧ್ರುವನಾರಾಯಣ ಪಾಲಾಯಿತು. ಟಿಕೆಟ್ ದೊರಕಲಿಲ್ಲ ಎಂಬ ಅಸಮಾಧಾನಕ್ಕೆ ಧ್ರುವನಾರಾಯಣರನ್ನು ಸೋಲಿಸಲು ನಂಜುಂಡಸ್ವಾಮಿ ಪುನಾ ಬಿಜೆಪಿ ಸಖ್ಯ ಬೆಳೆಸಿದರಾದರೂ ಫಲಪ್ರದವಾಗಲಿಲ್ಲ. ಧ್ರುವನಾರಾಯಣ ಗೆಲವು ಸಾಧಿಸಿ ಶಾಸಕರಾದರು.
ಧ್ರುವನಾರಾಯಣ ಅವರು ಲೋಕಸಭೆಗೆ ಸ್ಪರ್ಧಿಸಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ 2009ರಲ್ಲಿ ನಡೆದ ಉಪಚುನಾವಣೆಯಲ್ಲಿ ಮಾಜಿ ಶಾಸಕ ಜಯಣ್ಣ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಾರಿ ಪೈಪೋಟಿ ನೀಡಿ 49 ಸಾವಿರ ಮತ ಪಡೆದು 7 ಸಾವಿರ ಮತಗಳ ಅಂತರದ ಗೆಲವು ಸಾಧಿಸಿದ್ದರು. ಯಡಿಯೂರಪ್ಪ 3 ಬಾರಿ ಭೇಟಿ ನೀಡಿ ಇವರ ಗೆಲವಿಗೆ ಶ್ರಮಿಸಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ ವಿರೋಧಿ ಭಿನ್ನರ ಜೊತೆ ಕಾಣಿಸಿಕೊಂಡು ವಿವಾದಕ್ಕೆ ಗ್ರಾಸವಾಗಿದ್ದರು.
ನಂಜುಂಡಸ್ವಾಮಿ ಅವರು ಬಿಜೆಪಿಯಲ್ಲಿದ್ದುಕೊಂಡು ಕಾಂಗ್ರೆಸ್ ಟಿಕೆಟ್ ಗಿಟ್ಟಿಸಲು ನಡೆಸಿದ ಹಲವಾರು ತಂತ್ರಗಳು ಇವರಿಗೆ ಫಲಪ್ರದವಾಗಲಿಲ್ಲ. ತಮ್ಮ ರಾಜಕೀಯ ಗುರು ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಅಳಿಯನ ಮೂಲಕ ತೀವ್ರ ಲಾಭಿ ನಡೆಸಿ ಹೈಕಮಾಂಡ್ ಗಮನ ಸೆಳೆದರೂ ಕಾಂಗ್ರೆಸ್ ಇವರನ್ನು ಕ್ಯಾರೆ ಎನ್ನಲಿಲ್ಲ. ನಂತರ ಜೆಡಿಎಸ್ ಸೇರುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ಸಹ ನಡೆದಿತ್ತು.
ಆದರೆ ಕೊನೆಗೂ ನಂಜುಂಡಸ್ವಾಮಿ ಪುನಾ ಕಮಲವನ್ನೇ ಒಪ್ಪಿಕೊಂಡಿದ್ದಾರೆ.
ಎನ್. ನಾಗೇಂದ್ರಸ್ವಾಮಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.