ಚುನಾವಣೆ ಬಹಿಷ್ಕಾರ ಎಚ್ಚರಿಕೆ ನೀಡಿ: ವಾಟಾಳು ಶ್ರೀ
ಕ.ಪ್ರ.ವಾರ್ತೆ ಚಾ.ನಗರ ಮಾ.25
ಕುಡಿಯುವ ನೀರಿಗಾಗಿ ಗ್ರಾಮಸ್ಥರು ಚುನಾವಣೆಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಬೇಕು ಎಂದು ಗ್ರಾಮಸ್ಥರಿಗೆ ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ವಿಶ್ವಜಲ ದಿನಾಚರಣೆ ಅಂಗವಾಗಿ ತಾಲೂಕಿನ ಆಲ್ದೂರು ಗ್ರಾಮದಿಂದ ಚಾಮರಾಜನಗರದವರೆಗೆ ಬಹುಜನ ಸಮಾಜ ಪಾರ್ಟಿ ವತಿಯಿಂದ ಹಮ್ಮಿಕೊಂಡಿರುವ ಶಾಶ್ವತ ಕುಡಿಯುವ ನೀರಿಗಾಗಿ ಮೂರು ದಿನದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. 2 ವರ್ಷದಿಂದ ಸರಿಯಾಗಿ ಮಳೆಯಾಗದ ಕಾರಣ, ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಜನ, ಜಾನುವಾರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರ ಸೌಜನ್ಯಕ್ಕಾದರೂ ಗ್ರಾಮಗಳಲ್ಲಿ ಕೆಟ್ಟು ನಿಂತಿರುವ ಬೋರ್ವೆಲ್ ದುರಸ್ಥಿ ಪಡಿಸುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಚುನಾವಣೆಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಟಿ.ನರಸೀಪುರದ ನಳಂದ ಬುದ್ಧ ವಿಹಾರದ ಭೋದಿರತ್ನ ಬಂತೇಜಿ ಮಾತನಾಡಿ, ಕುಡಿಯುವ ನೀರಿಗಾಗಿ ಬಿಎಸ್ಪಿ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಜೀವಜಲಕ್ಕಾಗಿ ಹೋರಾಟ ಮಾಡುತ್ತಿರುವುದು ಉತ್ತಮ ಕಾರ್ಯ. ಈ ಪಾದಯಾತ್ರೆಯು ನೀರು, ಸೂರು ಕೊಡುವ ಚಿಂತನಾ ಯಾತ್ರೆ ಆಗಲಿ ಎಂದರು.
ಧರಣಿ ಎಚ್ಚರಿಕೆ: ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಸರ್ಕಾರದ ಗಮನ ಸೆಳೆಯುವ ಸಲುವಾಗಿ ಪಕ್ಷದ ವತಿಯಿಂದ ವಿಶ್ವಜಲ ದಿನಾಚರಣೆ ಅಂಗವಾಗಿ ಶಾಶ್ವತ ಕುಡಿಯುವ ನೀರಿಗಾಗಿ 3 ದಿನದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಕುಡಿಯುವ ನೀರು ಎಲ್ಲರ ಹಕ್ಕು ಅದನ್ನು ಸರ್ವರಿಗೂ ಒದಗಿಸಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತಾಲೂಕಿನಲ್ಲಿ ಈಗಾಗಲೇ ಕೊರೆದಿರುವ 133 ಬೋರ್ವೆಲ್ಗಳ ಪೈಕಿ 90 ಬೋರ್ವೆಲ್ಗಳಿಗೆ ವಾರದೊಳಗೆ ವಿದ್ಯುತ್ ಸಂಪರ್ಕ ಕೊಟ್ಟು ಜನ, ಜಾನುವಾರಿಗೆ ನೀರು ಕೊಡಬೇಕು. ಇಲ್ಲದಿದ್ದರೆ ಚುನಾವಣೆಗೆ ಸ್ಪರ್ಧಿಸದೆ ಜಿಲ್ಲಾಡಳಿತ ಭವನದ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
7 ವರ್ಷಗಳಿಂದಲೂ ಟೆಂಡರ್ ನೆಪ ಹೇಳಿಕೊಂಡು ನೆನೆಗುದಿಗೆ ಬಿದ್ದಿರುವ ತಾಯೂರು ಕುಡಿಯುವ ನೀರಿನ ಯೋಜನೆಯನ್ನು ಈಗಾಲಾದರೂ ಕೈಗೆತ್ತಿಕೊಂಡು ಒಂದು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ತಿ.ನರಸೀಪುರದಿಂದ ಚಾಮರಾಜನಗರದವರೆಗೆ ಮಾರ್ಗ ಮಧ್ಯ ಬರುವ 23 ಹಳ್ಳಿಗಳಿಗೆ ಕಾವೇರಿ ನದಿ ಮೂಲದಿಂದ ಶುದ್ಧ ಕುಡಿಯುವ ನೀರನ್ನು ಒಂದು ಕಾಲಾಮಿತಿಯೊಳಗೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಅರಕಲವಾಡಿ ನಾಗೇಂದ್ರ, ಜಿಲ್ಲಾ ಸಂಚಾಲಕ ಎನ್.ಶಿವಮಲ್ಲು, ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಪರ್ವತ್ರಾಜ್, ಬ್ಯಾಡಮೂಡ್ಲು ಬಸವಣ್ಣ, ಕಮರವಾಡಿಮಹದೇವಸ್ವಾಮಿ, ಬಿ.ಜಯಶಂಕರ್, ಸೋಮಣ್ಣ, ಶಿವಣ್ಣ, ರಾಮಯ್ಯ, ಆಲ್ದೂರುಮಹೇಶ್, ಚಿನ್ನಸ್ವಾಮಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.