ನೀತಿಸಂಹಿತೆ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ
ಕ.ಪ್ರ.ವಾರ್ತೆ ಚಾ.ನಗರ ಮಾ.25
ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ನಿಯೋಜಿತರಾಗಿರುವ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ವರದಿ ಮಾಡಬೇಕೆಂದು ಜಿಲ್ಲಾಧಿಕಾರಿ ಎಂ.ವಿ.ಸಾವಿತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರ ನಡೆದ ನೀತಿಸಂಹಿತೆ ಉಸ್ತುವಾರಿ ಹಾಗೂ ಇನ್ನಿತರ ಚುನಾವಣೆ ಕಾರ್ಯಗಳಿಗೆ ನೇಮಕವಾಗಿರುವ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಾದರಿ ನೀತಿಸಂಹಿತೆಯು ಚುನಾವಣೆ ದಿನಾಂಕ ಪ್ರಕಟ ಮಾಡಿದ ಮಾ.20ರಿಂದಲೇ ಜಾರಿಯಲ್ಲಿದೆ. ನೀತಿಸಂಹಿತೆ ಪಾಲನೆ ಬಗ್ಗೆ ನಿಗಾ ವಹಿಸಲು ನೇಮಕವಾಗಿರುವ ಅಧಿಕಾರಿಗಳು ವಿಧಾನಸಭಾ ಕ್ಷೇತ್ರವಾರು ಅತ್ಯಂತ ಎಚ್ಚರಿಕೆಯಿಂದ ತಮಗೆ ವಹಿಸಿರುವ ಕೆಲಸವನ್ನು ನಿರ್ವಹಿಸಬೇಕು. ಯಾವುದೇ ಭಾಗದಲ್ಲಿ ಮತದಾರರಿಗೆ ಆಮಿಷವೊಡ್ಡಲು ಸಂಗ್ರಹ ಮಾಡುವ, ವಿತರಿಸುವ ಮದ್ಯ, ಹಣ, ಉಡುಗೊರೆ ವಸ್ತುಗಳು, ಇನ್ನಿತರ ಸಾಮಗ್ರಿಗಳು ಕಂಡುಬಂದಲ್ಲಿ ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಬೇಕು ಎಂದು ನಿರ್ದೇಶನ ನೀಡಿದರು.
ಚುನಾವಣಾ ಸಂದರ್ಭದಲ್ಲಿ ನಡೆಯಬಹುದಾದ ಅಕ್ರಮಗಳಿಗೆ ಕಡಿವಾಣ ಹಾಕಲು ವಿವಿಧ ಸಮಿತಿ ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಅಧಿಕಾರಿಗಳು ತಮಗೆ ವಹಿಸಿರುವ ಕರ್ತವ್ಯದಲ್ಲಿ ನಿರ್ಲಕ್ಷ್ಯ, ಉದಾಸೀನತೆ ತೋರುವುದನ್ನು ಸಹಿಸಲಾಗುವುದಿಲ್ಲ. ಸೆಕ್ಟರ್ ಮ್ಯಾಜಿಸ್ಟ್ರೇಟ್, ವೀಡಿಯೋ ಸಮಿತಿ, ಇನ್ನಿತರ ಅಧಿಕಾರಿಗಳು ಎಲ್ಲ ವೇಳೆಯಲ್ಲೂ ಜಾಗೃತರಾಗಿ ಕೆಲಸ ಮಾಡಬೇಕು ಎಂದರು.
ಚುನಾವಣಾ ಸಂಬಂಧಿ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಪ್ರತಿನಿಧಿಗಳೊಂದಿಗೆ ಗುರುತಿಸಿಕೊಳ್ಳಬಾರದು. ಯಾವುದೇ ಅನುಮಾನ, ಗೊಂದಲಗಳಿದ್ದಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದರು.
ಚುನಾವಣಾ ಕೆಲಸ ನಿರ್ವಹಣೆ ಸಂಬಂಧ ಆಯೋಗದಿಂದ ಬರುವ ನಿರ್ದೇಶನ, ಸುತ್ತೋಲೆ, ಆದೇಶಗಳನ್ನು ಇ-ಮೇಲ್ ಮೂಲಕ ಪ್ರತಿನಿತ್ಯ ರವಾನಿಸಲಾಗುತ್ತದೆ. ಅಧಿಕಾರಿಗಳು ಇವನ್ನು ಖುದ್ದಾಗಿ ನೋಡಿ ಸೂಚನೆ ಅನುಸಾರ ಕೆಲಸ ಮಾಡಬೇಕು. ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ಅಧಿಕಾರಿಗಳು ಒಂದು ತಂಡವಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ 916 ಮತಗಟ್ಟೆ ಸ್ಥಾಪಿಸಲಾಗುತ್ತದೆ. ಇವುಗಳ ಪೈಕಿ ಸೂಕ್ಷ್ಮ, ಅತಿ ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತದಾನ ಒಂದೇ ಹಂತದಲ್ಲಿ ನಡೆಯುವುದರಿಂದ ವ್ಯಾಪಕ ಬಂದೋಬಸ್ತಾಗಿ ಕೇಂದ್ರ ಪ್ಯಾರಾ ಮಿಲಿಟರಿ ಪಡೆ ಬರಲಿದೆ. ಇದರೊಂದಿಗೆ ಡಿಆರ್, ಕೆಎಸ್ಆರ್ಪಿ, ಗೃಹರಕ್ಷಕ ದಳ ಹಾಗೂ ಹಾಲಿ ಲಭ್ಯವಿರುವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ವಿಶೇಷವಾಗಿ ಅಂತರ ರಾಜ್ಯ ಗಡಿ ಭಾಗಗಳಲ್ಲಿ ಚೆಕ್ಪೋಸ್ಟ್ಗಳನ್ನು ಆರಂಭಿಸಲಾಗಿದೆ ಎಂದರು.
ಚುನಾವಣಾ ವೇಳೆ ರೌಡಿಶೀಟರ್ ಪಟ್ಟಿಯಲ್ಲಿರುವವರ ಮೇಲೆ ವಿಶೇಷ ನಿಗಾ ವಹಿಸಲಿದ್ದೇವೆ. ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಹೊಂದಿರುವ ಮಾಲೀಕರಿಗೆ ಪೊಲೀಸ್ ಠಾಣೆಯಲ್ಲಿ ಬಂದೂಕು ಠೇವಣಿ ಮಾಡಲು ಸೂಚಿಸಲಾಗಿದೆ. ಚುನಾವಣಾ ಅಕ್ರಮ ಪತ್ತೆ ಹಚ್ಚಲು ಹೋಬಳಿವಾರು ರಚಿಸಲಾಗಿರುವ ಅಧಿಕಾರಿಗಳ ತಂಡದಲ್ಲಿ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಯಾವುದೇ ಭಾಗದಲ್ಲಿ ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೂ ಮಾಹಿತಿ ನೀಡಬೇಕು ಎಂದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ಸೋಮಶೇಖರಪ್ಪ ಮಾತನಾಡಿ, ಮತದಾರರ ನೋಂದಣಿ ಹಾಗೂ ಮತದಾರರ ಪಟ್ಟಿ ದೋಷ ಸರಿಪಡಿಸುವ ಕೆಲಸ ನಿರ್ವಹಿಸುವ ಹೊಣೆಯನ್ನೂ ಸಹ ಅಧಿಕಾರಿಗಳು ನಿಭಾಯಿಸಬೇಕಿದೆ. 18 ವರ್ಷ ಮೇಲ್ಪಟ್ಟವರೆಲ್ಲರೂ ಮತದಾರರ ಪಟ್ಟಿಯಲ್ಲಿ ತಪ್ಪದೆ ಹೆಸರು ನೋಂದಣಿ ಮಾಡಿಸಲು ಜಾಗೃತಿ ಮೂಡಿಸಬೇಕಿದೆ ಎಂದರು.
ಉಪವಿಭಾಗಾಧಿಕಾರಿ ಸತೀಶ್ ಬಾಬು ಮಾತನಾಡಿ, ಚುನಾವಣಾ ಪ್ರಚಾರ ಸಾಮಗ್ರಿ, ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರ, ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವಂತಿಲ್ಲ. ಖಾಸಗಿಯವರಿಗೆ ಸೇರಿದ ಕಟ್ಟಡದಲ್ಲಿ ಪ್ರದರ್ಶಿಸಲು ಅನುಮತಿ ಪಡೆದಿರುವ ಬಗ್ಗೆ ದಾಖಲೆ ನೀಡಬೇಕು. ಯಾವುದೇ ಸಭೆ ಸಮಾರಂಭ ಸಂಬಂಧ ಪ್ರದರ್ಶಿಸುವ ಪ್ರದರ್ಶನ ಸಾಮಗ್ರಿಯನ್ನು ಕಾರ್ಯಕ್ರಮ ನಡೆದ ಒಂದು ಗಂಟೆಯ ಬಳಿಕ ತೆರವುಗೊಳಿಸಬೇಕು. ಪ ಪಂ, ನಗರಸಭೆ, ಪುರಸಭೆ ಹಾಗೂ ಸ್ಥಳೀಯ ಸಂಸ್ಥೆ ಆಡಳಿತಾಧಿಕಾರಿಗಳು ಈ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದರು.
ಅಬಕಾರಿ ಉಪ ಆಯುಕ್ತ ಮಾದೇಶ್ ಮಾತನಾಡಿ, ಜಿಲ್ಲೆಯಲ್ಲಿ ಮದ್ಯ ಮಾರಾಟ, ಖರೀದಿ ವ್ಯವಹಾರಗಳ ಮೇಲೆ ಕಣ್ಗಾವಲು ಇರಿಸಲಾಗಿದೆ. ಇತ್ತೀಚೆಗೆ ಹೆಚ್ಚು ಖರೀದಿ ವಹಿವಾಟು ನಡೆದಿರುವ ಮದ್ಯ ಅಂಗಡಿ ಉದ್ದಿಮೆಗಳ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಯಾವುದೇ ದೂರುಗಳಿದ್ದಲ್ಲಿ ನೇರವಾಗಿ ತಿಳಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ, ಪೊಲೀಸ್ ಇಲಾಖೆ ಡಿವೈಎಸ್ಪಿಗಳಾದ ಮುತ್ತುಸ್ವಾಮಿ ನಾಯ್ಡು, ಚನ್ನಬಸವಣ್ಣ, ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪವಿಭಾಗಾಧಿಕಾರಿ ಸಂಬಯ್ಯ, ನೋಡೆಲ್ ಅಧಿಕಾರಿ ಹಾಗೂ ಭೂದಾಖಲೆಗಳ ಉಪನಿರ್ದೇಶಕ ಸೋಮಸುಂದರ್, ನಾಲ್ಕೂ ತಾಲೂಕುಗಳ ತಹಸೀಲ್ದಾರರು, ಪ್ರೊಬೆಷನರಿ ಉಪವಿಭಾಗಾಧಿಕಾರಿಗಳಾದ ಜಗದೀಶ್, ವಿಜಯ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.