ಪಂಚಾಕ್ಷರಿ ಇಲ್ಲವೆ ಚಾಮರಾಜುಗೆ ಜೆಡಿ'ಎಸ್'
ಜಾತ್ಯಾತೀತ ಜನತಾದಳದ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿ ಜಿಲ್ಲಾಧ್ಯಕ್ಷ ಎಂ.ಪಂಚಾಕ್ಷರಿ ಇಲ್ಲವೇ ಜಿಪಂ ಮಾಜಿ ಉಪಾಧ್ಯಕ್ಷ ಎನ್.ಚಾಮರಾಜು ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ.
ಈಗಾಗಲೇ ಜೆಡಿಎಸ್ನಿಂದ ತೀರ್ಥಪ್ರಸಾಥ್, ಲಿಂಗರಾಜು, ಚಾಮರಾಜು ಹಾಗೂ ಪಂಚಾಕ್ಷರಿ ಹೆಸರು ಕೇಳಿ ಬಂದಿದೆ. ಹಾಲಿ ಶಾಸಕ ಜಿ.ಎನ್.ನಂಜುಂಡಸ್ವಾಮಿಗೆ ಬಿಜೆಪಿ ಟಿಕೆಟ್ ನೀಡಿರುವುದರಿಂದ ಅವರು ಜೆಡಿಎಸ್ಗೆ ಬರುತ್ತಾರೆ ಎಂಬ ಊಹಾಪೋಹಕ್ಕೆ ಈಗ ತೆರೆ ಬಿದ್ದಿದೆ.
ಚಾಮರಾಜುಗೆ ಆಹ್ವಾನ: ಜಿಪಂ ಮಾಜಿ ಉಪಾಧ್ಯಕ್ಷರಾಗಿ ಕೆಲಸ ಮಾಡಿರುವ ಎನ್.ಚಾಮರಾಜು 2004 ಚುನಾವಣೆಯಲ್ಲಿ ಜೆಡಿಯುನಿಂದ ಲೋಕಸಭೆಗೆ ಸ್ಪರ್ಧಿಸಿ 90 ಸಾವಿರ ಮತ ಪಡೆದರೂ ಪರಾಭವಗೊಂಡಿದ್ದರು. ಸೌಮ್ಯಸ್ವಭಾವದ ಚಾಮರಾಜು ಅವರು ಎ.ಆರ್.ಕೃಷ್ಣಮೂರ್ತಿ ನಿಕಟವರ್ತಿಗಳಾಗಿದ್ದಾರೆ. ಇತ್ತೀಚೆಗೆ ರಾಜಕೀಯ ವ್ಯವಸ್ಥೆಯಿಂದ ದೂರ ಸರಿದಿರುವ ಇವರನ್ನು ಜೆಡಿಎಸ್ನ ಕೆಲವು ಮುಖಂಡರೇ ಮನವೊಲಿಸಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ಇದಲ್ಲದೆ ಚಾಮರಾಜನಗರ ಜಿಲ್ಲಾಧ್ಯಕ್ಷ ಎಂ.ಪಂಚಾಕ್ಷರಿ ಸಹಾ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಮುಂಚೂಣಿಯಲ್ಲಿದ್ದಾರೆ. 2009ರಲ್ಲಿ ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಇವರು ತಮ್ಮ ಬೆಂಬಲಿಗರಾದ ಸಿಂಗಾನಲ್ಲೂರು ರಾಜಣ್ಣ ಹಾಗೂ ಜೆ.ಶಿವಮೂರ್ತಿ ಅವರಿಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು. 2012ರಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹುದ್ದೆ ನೀಡಿತ್ತು. ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಪಂಚಾಕ್ಷರಿ ಟಿಕೆಟ್ಗಾಗಿ ತಮ್ಮ ಬೆಂಬಲಿಗರ ಮೂಲಕ ಲಾಭಿ ನಡೆಸುತ್ತಿದ್ದಾರೆ. ಆದರೆ ವರಿಷ್ಠರು ಯಾರಿಗೆ ಮಣೆ ಹಾಕುತ್ತಾರೆ ಎಂದು ಕಾದು ನೋಡಬೇಕಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.