ಹೆಣ್ಣು ಮಕ್ಕಳ ಶಿಕ್ಷಣ ಕಡೆಗಣನೆ ಬೇಡ
ಕ.ಪ್ರ.ವಾರ್ತೆ ಚಾ.ನಗರ ಮಾ.25
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಹೇಳಿಕೆಯಂತೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಮುಂದಿನ ದಿನಗಳಲ್ಲಿ ತಮ್ಮ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆ ಎಂದು ಮೊಬಿಲಿಟಿ ಇಂಡಿಯಾದ ಸಂಯೋಜಕ ಜಾನ್ ಫರ್ನಾಂಡಿಸ್ ಹೇಳಿದರು.
ತಾಲೂಕಿನ ಪುಟ್ಟನಪುರ ಸರ್ಕಾರಿ ಶಾಲಾವರಣದಲ್ಲಿ ಮೊಬಿಲಿಟಿ ಇಂಡಿಯಾ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಚಂದನ ಅಂಗವಿಕಲರ ಮಹಾಸಂಘದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಮಹಿಳಾ ಸಾಂತ್ವಾನದ ಸಂಯೋಜಕಿ ರಾಜಮ್ಮ ಮಾತನಾಡಿ, ಮಹಿಳೆಯರ ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಇತ್ತೀಚಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲೂ ಆಚರಣೆ ಮಾಡಿ ಮಹಿಳೆಯರು ಮತ್ತು ಜನಸಮುದಾಯದಲ್ಲಿ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಪುಟ್ಟನಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 40 ಮಕ್ಕಳಿಗೆ ಊಟದ ತಟ್ಟೆಗಳನ್ನು ಚಂದನ ವಿಕಲಚೇತನರ ಮಹಾಸಂಘದ ಅಧ್ಯಕ್ಷ ಮಹದೇವ್ ವಿತರಿಸಿದರು. ಎಸ್ಡಿಎಂಸಿ ಅಧ್ಯಕ್ಷ ಮಲ್ಲೇಶ್, ಮುಖ್ಯೋಪಾದ್ಯಾಯ ಪುಟ್ಟಸ್ವಾಮಿ, ಸಹಶಿಕ್ಷಕರು, ಮೊಬಿಲಿಟಿ ಇಂಡಿಯಾದ ಪ್ರೇರಕ ಮರಿಸ್ವಾಮಿ, ಮಂಜುಳ, ಅಂಗವಿಕಲ ಸ್ವಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.