ಕ.ಪ್ರ.ವಾರ್ತೆ ್ಣ ಚಾ.ನಗರ ್ಣ ಮಾ.30
ಮತದಾರರಲ್ಲಿ ಜಾಗೃತಿ ಮೂಡಿಸಿ, ಚುನಾವಣೆಯನ್ನು ಯಶಸ್ವಿಯಾಗಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಅತ್ಯಂತ ಮಹತ್ವದ್ದು ಎಂದು ಜಿಲ್ಲಾಧಿಕಾರಿ ಎಂ.ವಿ.ಸಾವಿತ್ರಿ ತಿಳಿಸಿದರು.
ಚಾಮರಾಜನಗರ ತಾಪಂ ಕಚೇರಿ ಸಭಾಂಗಣದಲ್ಲಿ ಶನಿವಾರ ಮತದಾರ ಜಾಗೃತಿ ಅಭಿಯಾನದ ಅಂಗವಾಗಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಆಶಾ ಕಾರ್ಯಕರ್ತೆಯರ ವ್ಯಾಪ್ತಿ ವ್ಯಾಪಕವಾಗಿದೆ. ಇವರ ಸೇವೆ ಬಳಸಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಹಾಗೂ ಮತ ಚಲಾಯಿಸುವ ವಿಷಯದ ಬಗ್ಗೆ ಅರಿವು ಮೂಡಿಸಬಹುದು ಎಂದರು.
ಮತದಾರರಲ್ಲಿ ಅರಿವು ಮೂಡಿಸಲು ಆಯಾ ಭಾಗದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಸ್ಥೆಗಳು ಸೇವಾ ಮನೋಭಾವದಿಂದ ಇದನ್ನು ಆಂದೋಲನ ಮಾದರಿಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಯಾವುದೇ ಸರ್ಕಾರ ರಚನೆಗೆ ಚುನಾವಣೆ ಪ್ರಕ್ರಿಯೆ ಪ್ರಮುಖವಾಗಿದ್ದು, ಅರ್ಹ ಮತದಾರ, ಅದನ್ನು ಚಲಾಯಿಸುವ ಮೂಲಕ ತನ್ನ ಕರ್ತವ್ಯ ನಿರ್ವಹಿಸಬೇಕಿದೆ. ಒಂದು ಮತವೂ ಅತ್ಯಂತ ಮಹತ್ವದ್ದಾಗಿದ್ದು, ನಮ್ಮ ಒಂದು ಮತದಿಂದ ಯಾವುದೇ ಪರಿಣಾಮ ಸಾಧ್ಯವಿಲ್ಲ ಎಂಬ ಮತದಾರರ ನಿರ್ಲಕ್ಷ್ಯ ಮನೋಭಾವ ಬದಲಾಗಬೇಕಿದೆ ಎಂದರು.
ಚುನಾವಣಾ ಕಾರ್ಯವನ್ನು ಲಘುವಾಗಿ ಪರಿಗಣಿಸದೆ, ಚುನಾವಣೆಗೆ ನೇಮಕಗೊಂಡಿರುವ ಅಧಿಕಾರಿಗಳು ಕಟ್ಟು ನಿಟ್ಟಾಗಿ ಕಾರ್ಯ ನಿರ್ವಹಿಸಬೇಕು. ತಪ್ಪಿದಲ್ಲಿ ಅಂತವರ ವಿರುದ್ಧ ಕ್ರಮ ವಹಿಸಲಾಗುವುದು. ಮತದಾರರ ಜಾಗೃತಿ ಅಭಿಯಾನವು ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಸಾಗಬೇಕು ಎಂದರು.
ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಆರ್.ಸೋಮಶೇಖರಪ್ಪ ಮಾತನಾಡಿ, 18 ವರ್ಷ ಮೇಲ್ಪಟ್ಟವರು, ಆಯಾ ಮತಗಟ್ಟೆ ಅಧಿಕಾರಿಗಳ ಬಳಿ ಲಭ್ಯವಿರುವ ನಮೂನೆ-6 ಅನ್ನು ಭರ್ತಿ ಮಾಡಿ ನೀಡಿದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳಲಿದೆ. ಚುನಾವಣೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮತದಾರರ ಗುರುತಿನ ಚೀಟಿಯನ್ನು ಆಯಾ ಮತದಾರರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಆಯಾ ಮತಗಟ್ಟೆ ಅಧಿಕಾರಿಗಳು ಹಾಗೂ ಕ್ಷೇತ್ರ ಚುನಾವಣಾಧಿಕಾರಿಗಳು, ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಅಹಾರ ಇಲಾಖೆ ಉಪನಿರ್ದೇಶಕ ಸಂಬಯ್ಯ, ಚಾಮರಾಜನಗರ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಜಯಕೃಷ್ಣ, ಕಾಯಂ ಪೂರ್ವ ಉಪವಿಭಾಗಾಧಿಕಾರಿ ಜಗದೀಶ್, ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ, ಉಪ ತಹಶೀಲ್ದಾರ್ ಶಂಕರ್‌ರಾವ್ ಇದ್ದರು.