ಇಂದಿನಿಂದ ಫಲಪುಷ್ಪ ಪ್ರದರ್ಶನ
ಚಿತ್ರದುರ್ಗ: ಜಿಲ್ಲಾ ತೋಟಗಾರಿಕೆ ಸಂಘ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ 22 ನೇ ಫಲ-ಪುಷ್ಪ ಪ್ರದರ್ಶನವನ್ನು ಫೆ. 8 ರಿಂದ 10 ರವರೆಗೆ ಜಿಲ್ಲಾ ತೋಟಗಾರಿಕೆ ಕ:ಕೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಸಂಘದ ಪದನಿಮಿತ್ತ ಅಧ್ಯಕ್ಷರು, ಹಾಗೂ ಜಿಪಂ ಸಿಇಓ ನಾರಾಯಣಸ್ವಾಮಿ ತಿಳಿಸಿದರು.
ನಗರದ ತೋಟಗಾರಿಕೆ ಇಲಾಖೆಯ ಸಭಾಂಗಣದಲ್ಲಿ ಗುರುವಾರ ಸುದ್ದಿಗ್‌ಠೋಯಲ್ಲಿ ಮಾತನಾಡಿದ ಅವರು ಕಳೆದ 21 ವರ್ಷಗಳಿಂದ ಪ್ರದರ್ಶನ ನಡೆಸಲಾಗುತ್ತಿದೆ. ಇದಕ್ಕಾಗಿ ಸುಮಾರು ರು. 8 ಲಕ್ಷ ವೆಚ್ಚವಾಗಲಿದೆ. ಚಿತ್ರದುರ್ಗ ಜಿಲ್ಲಾ ಫಲ-ಪುಷ್ಪ ಪ್ರದರ್ಶನವು ಪ್ರಖ್ಯಾತವಾಗಿದ್ದು, ವಿಶೇಷ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು, ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಕುಂಡದಲ್ಲಿ ಬೆಳೆಸಿ ಪ್ರದರ್ಶಿಸುತ್ತಿರುವುದು ಇದಕ್ಕೆ ಕಾರಣವಾಗಿದೆ.
ಬೃಹತ್ ಪ್ರದರ್ಶನ: ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ಜಾತಿಯ ಹೂ ಜೋಡಣೆ, ಕುಂಡಗಳಲ್ಲಿ ಬೆಳೆಸಿದ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಇಕೆಬಾನ, ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ ಮತ್ತು ಅಲಂಕಾರಿಕಾ ಗಿಡಗಳ ತೋಟಗಳ ಸ್ಪರ್ಧೆಗಳು ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ತರಕಾರಿ ಹಾಗೂ ಇತರೆ ಉತ್ಪನ್ನಗಳ ಪ್ರದರ್ಶನಗಳ ಸ್ಪರ್ಧೆಗಳು ಅಡಕವಾಗಿವೆ. ಈ ಕಾರ್ಯಕ್ರಮಗಳನ್ನು ಫಲ-ಪುಷ್ಪ ಪ್ರದರ್ಶನದ ಅಂಗವಾಗಿ ನಡೆಸಲಾಗುತ್ತಿದೆ ಎಂದರು.
ಪ್ರದರ್ಶನದ ಅಂಗವಾಗಿ ಫೆ.8 ರಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಹಣ್ಣು ತರಕಾರಿ ಮತ್ತು ಹೂಗಳನ್ನು ಮಾತ್ರ ಉಪಯೋಗಿಸಬೇಕಾಗುತ್ತದೆ. ಫೆ.9 ರಂದು 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10.30 ಗಂಟೆಯಿಂದ 3.30 ಗಂಟೆಯವರೆಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳಿಂದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಪ್ರದರ್ಶನವನ್ನು ಪ್ರತಿ ದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರು ವೀಕ್ಷಿಸಬಹುದು. ಪ್ರವೇಶ ಉಚಿತವಾಗಿರುತ್ತದೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಛಾಯಾ ಚಿತ್ರ ಪ್ರದರ್ಶನ: ಫೆ.8ರ ಸಂಜೆ 6 ಗಂಟೆಗೆ ಪ್ರದರ್ಶನವನ್ನು ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶ್ರೀಗಳು ನಡೆಸಲಿದ್ದು, ತೋಟಗಾರಿಕೆ ಸಚಿವ ಎಸ್.ಎ.ರವೀಂದ್ರನಾಥ್ ನೂತನವಾಗಿ ನಿರ್ಮಾಣವಾಗಿರುವ ಕಟ್ಟಡ ಮತ್ತು ವನ್ಯ ಛಾಯಾ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಫೆ.10ರ ಸಂಜೆ 6 ಘಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಸುಜಯ ಶಿವಪ್ರಕಾಶ್, ಹಿರಿಯ ಬೆಳೆಗಾರರಾದ ಸೀತಾರಾಮ ರೆಡ್ಡಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಆಶ್ವತ್ಥ್, ಉಪ ನಿರ್ದೇಶಕ ವಿಜಯಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.