ಖಾದಿ ಉದ್ಯಮ ಚೇತರಿಕೆಗೆ ಪ್ರೋತ್ಸಾಹಿಸಿ
ಚಿತ್ರದುರ್ಗ: ಕರಕುಶಲ ವಸ್ತುಗಳ ತಯಾರಿಕೆಯ ಉದ್ಯಮದಲ್ಲಿ ಕಚ್ಚಾವಸ್ತುಗಳ ಕೊರತೆ ಮತ್ತು ಅಗತ್ಯವಾದ ಆರ್ಥಿಕ ನೆರವು ಕಲ್ಪಿಸದಿರುವುದು, ಕಾರ್ಮಿಕರಿಗೆ ನೀಡಲಾಗುವ ಕಡಿಮೆ ವೇತನದ ಕಾರಣಕ್ಕೆ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆಯಿದ್ದರೂ, ಉದ್ಯಮ ಚೇತರಿಕೆ ಕಾಣುತ್ತಿಲ್ಲ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ. ನಾಗರಾಜ್ ಹೇಳಿದರು.
ನಗರದ ಗುರುಭವನದಲ್ಲಿ ಆಯೋಜಿಸಲಾಗಿದ್ದ ಪಿ.ಎಂ. ಇ.ಜಿ.ಪಿ. ಜಿಲ್ಲಾ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದ ಗಡಿದಾಟಿ ವಹಿವಾಟು ವಿಸ್ತರಿಸಿಕೊಂಡು ವ್ಯಾಪಕ ಬೇಡಿಕೆ ಹೊಂದಿದ್ದರೂ, ಖಾದಿ ವಸ್ತ್ರ ಮತ್ತು ಸಹ ಉತ್ಪನ್ನಗಳ ಪೂರೈಕೆ ಸಮರ್ಪಕವಾಗಿಲ್ಲದಿರುವುದೇ ಉದ್ಯಮ ಸಂಕಷ್ಟ ಎದುರಿಸಲು ಕಾರಣವಾಗಿದೆ ಎಂದರು.
ರು. 75 ದಿನಗೂಲಿ: ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ರು. 150 ರಿಂದ 200ವರೆಗಿನ ದರ ನಿಗದಿ ಮಾಡಿ ದಿನ ಭತ್ಯೆ ನೀಡುತ್ತಿದ್ದರೆ, ನಮ್ಮಲ್ಲಿ ಇನ್ನೂ ಕೂಡ ರು. 75 ದಿನಗೂಲಿ ನೀಡುವಂತಹ ಪರಿಸ್ಥಿತಿಯಿದೆ ಎಂದು ವಿಷಾದಿಸಿದರು.
ದೇಶದಲ್ಲಿ ಖಾದಿ ಗ್ರಾಮೋದ್ಯೋಗ ಆಯೋಗ ಏಪ್ರಿಲ್ 1975 ರಲ್ಲಿ ಸ್ಥಾಪಿತವಾಗಿದ್ದು, ಆ ನಂತರ ಅದು ಮಂಡಳಿಯಾಗಿ ಪರಿವರ್ತನೆಯಾಯಿತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾರುಕಟ್ಟೆ ಸಹಾಯಧನ ನೀತಿ ಜಾರಿಗೊಳಿಸಿ ಖಾದಿ ಬಟ್ಟೆಗಳ ಉತ್ಪಾದನೆ ಮತ್ತು ಮಾರಾಟಕ್ಕಾಗಿ ಸಹಕಾರ ನೀಡುತ್ತಿವೆ ಎಂದು
ಹೇಳಿದರು.
ನೇಕಾರರಿಗೆ ತರಬೇತಿ: ಇತ್ತೀಚಿನ ವರ್ಷಗಳಲ್ಲಿ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ನೇಕಾರರಿಗೆ ಇಂದಿನ ದಿನಮಾನಕ್ಕೆ ಹೊಂದುವ ವಸ್ತ್ರ ತಯಾರಿಸುವ ನಿಟ್ಟಿನಲ್ಲಿ ತಬೇತಿ ನೀಡಲಾಗುತ್ತಿದೆ ಎಂದರು. ಪ್ರಸ್ತುತ ನಾವು ಫ್ಯಾಷನ್ ಯುಗದಲ್ಲಿದ್ದು, ಗ್ರಾಹಕರ ಮನಸ್ಧಿತಿಗೆ ತಕ್ಕಂತೆ ಸರಕು ತಯಾರಿಸಿಕೊಡುವ ಸ್ಫರ್ಧಾತ್ಮಕ ಗುಣ ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಜಿಪಂ ಸಿಇಒ ನಾರಾಯಣಸ್ವಾಮಿ ಮಾತನಾಡಿ, ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಉತ್ಪಾದನೆಯಾದ ವಸ್ತು ಮಾರಾಟವಾಗದಿದ್ದರೆ ಅದು ತಯಾರಕರ ದೋಷವೆಂದು ಪರಿಗಣಿಸಲಾಗುತ್ತದೆ ಎಂದರು. ಆದ ಕಾರಣ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿದ್ದರೆ ಸರಕುಗಳು ತಂತಾನೆ ಬಿಕರಿಯಾಗುತ್ತವೆಯಾದ್ದರಿಂದ ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಉತ್ತಮ ಸಮನ್ವಯತೆ ಸಾಧ್ಯವಾಗಬೇಕೆಂದರು.
ನೇಕಾರರಿಗೆ ಜಿಪಂ ವತಿಯಿಂದ ಆರ್ಥಿಕ ನೆರವು ನೀಡಲಾಗಿದ್ದು, ವಿವಿಧ ಯೋಜನೆಯಲ್ಲಿ ನೇಕಾರರಿಗೆ ಶೆಡ್ ನಿರ್ಮಾಣಕ್ಕೆ ಸೂಕ್ತ ನೆರವು ಒದಗಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಅವರು, ನಾವು ಧರಿಸುವ ಉಡುಪು ನಮಗೆ ಹಿತವೆನ್ನಿಸಬೇಕು. ಉತ್ಪನ್ನ ಮಾರಾಟಗಾರರು ಸ್ನೇಹಮಯಿಗಳಾಗಿರಬೇಕು ಮತ್ತು ಉತ್ತಮ ದರ ಹೊಂದಿರಬೇಕು ಇಷ್ಟು ಸಾಧ್ಯವಾದಾಗ ಯಾವುದೇ ಉದ್ಯಮದ ಯಶಸ್ಸು ಕಟ್ಟಿಟ್ಟ ಬುತ್ತಿಯೆಂದರು.
ಈ ನಿಟ್ಟಿನಲ್ಲಿ ಗ್ರಾಹಕ ವಸ್ತುಗಳ ಖರೀದಿಗೆ ತಂತಾನೇ ಮುಂದಾಗುತ್ತಾನೆ. ಆಧುನಿಕತೆ ವಿನ್ಯಾಸ ಹೊಂದಿದ ಉತ್ಪನ್ನಗಳಿಗೆ ಸಹಜವಾಗಿ ಬೇಡಿಕೆಯಿರುವುದರಿಂದ ಅವುಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವೆಂದರು. ಈ ಉದ್ಯಮದ ಪೋಷಣೆ ಮತ್ತು ಉಳಿವಿನಿಂದ ಗ್ರಾಮಾಂತರ ಪ್ರದೇಶದಲ್ಲಿನ ಜನರಿಗೆ ದೊಡ್ಡಮಟ್ಟದಲ್ಲಿ ಅನುಕೂಲವಾಗಲಿರುವುದರಿಂದ ಕೇವಲ ವಸ್ತುಪ್ರದರ್ಶನಗಳನ್ನು ವೀಕ್ಷಿಸಿ ಸುಮ್ಮನಾಗದೇ ಅಗತ್ಯ ನೆರವನ್ನು ಒದಗಿಸಿ ಉದ್ಯಮಕ್ಕೆ ಬೆಂಬಲ ನೀಡಬೇಕಿದೆ ಎಂದರು.
ಜಿಪಂ ಅಧ್ಯಕ್ಷೆ ಗೀತಾ ಬಸವರಾಜ್, ಉಪಾಧ್ಯಕ್ಷ ದ್ಯಾಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್, ಮಾಜಿ ಅಧ್ಯಕ್ಷ ಚಂದ್ರಪ್ಪ, ನಗರಸಭಾದ್ಯಕ್ಷೆ ಸುನೀತಾ ಮಲ್ಲಿಕಾರ್ಜನ್, ನಗರಾಭಿವೃದ್ಧಿ ಅಧ್ಯಕ್ಷ ತಿಪ್ಪೇಸ್ವಾಮಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.