ಜಿಲ್ಲಾಡಳಿತದಿಂದ ನ್ಯಾಯಾಂಗ ನಿಂದನೆ
ಚಿತ್ರದುರ್ಗ: ಐಎಸ್ಐ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಪಡೆಯದಿರುವ ಘಟಕಗಳನ್ನು ಕೂಡಲೇ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ನವೆಂಬರ್ 9ರಂದು ಆದೇಶ ನೀಡಿದ್ದರೂ, ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಪ್ರಜಾಂದೋಲನ ಸಂಸ್ಥೆ ಅಧ್ಯಕ್ಷ ಲೋಚನೇಶ ಹೂಗಾರ್ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಅಂಕಿತ ಅಧಿಕಾರಿಗಳು ಐಎಸ್ಐ ಪ್ರಮಾಣ ಪತ್ರ ಪಡೆಯದೆ ಇರುವ ಘಟಕಗಳಿಗೆ ಕೇವಲ ನೋಟಿಸ್ ನೀಡುವುದರಲ್ಲಿ ನಿರತರಾಗಿದ್ದಾರೆ. ನ್ಯಾಯಾಲಯ ಐಎಸ್ಐ ಪ್ರಮಾಣಪತ್ರ ಪಡೆಯದಿರುವ ಘಟಕಗಳನ್ನು ಮುಚ್ಚಿಸಬೇಕು, ನೀರು ಮಾರಾಟ ಮಾಡದಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ನೋಟಿಸ್ ನೀಡುವುದು ಸರಿಯಲ್ಲ. ತೀರ್ಪು ಬಂದು ಮೂರು ತಿಂಗಳು ಗತಿಸಿವೆ.
ಯಾವುದೇ ಕ್ರಮವಿಲ್ಲ: ಹಾಗಿದ್ದೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರಣಕ್ಕಾಗಿ ಯಾವ ಜಿಲ್ಲೆಗಳಲ್ಲಿ ಘಟಕಗಳನ್ನು ಮುಚ್ಚಿಸಿಲ್ಲವೋ ಅಂತಹ ಜಿಲ್ಲೆಗಳ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದೂರನ್ನು ಹೈಕೋರ್ಟ್ನಲ್ಲಿ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
ಎಲ್ಲಾ ಪ್ಯಾಕೇಜ್ಡ್ ಕುಡಿಯುವ ನೀರು ಶುದ್ಧ ಹಾಗೂ ಗುಣಮಟ್ಟದ್ದೆಂದು ಭಾವಿಸುವ ಗ್ರಾಹಕರು ಹಣ ನೀಡಿ ಸುರಕ್ಷಿತವಲ್ಲದ ನೀರು ಸೇವಿಸುತ್ತಾರೆ. ಐಎಸ್ಐ ಪ್ರಮಾಣಪತ್ರ ಪಡೆಯದೆ ನಾಯಿಕೊಡೆಗಳಂತೆ ತಲೆ ಎತ್ತಿರುವ ನೀರಿನ ಘಟಕಗಳನ್ನು ನಿಯಂತ್ರಿಸಲೇಬೇಕು ಎಂದರ.
ಇಂತಹ ಘಟಕಗಳ ವಿರುದ್ಧ 2009ರಿಂದಲೇ ಸಂಸ್ಥೆ ವತಿಯಿಂದ ರಾಜ್ಯಾದ್ಯಂತ ಹೋರಾಟ ಪ್ರಾರಂಭ ಮಾಡಿದೆ. ಹೋರಾಟಕ್ಕೆ ಜಿಲ್ಲಾಡಳಿತಗಲು ಸ್ಪಂದಿಸದೆ ಹೋದಾಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಗೆ ಸ್ಪಂದಿಸಿದ ನ್ಯಾಯಾಲಯ ಕೇವಲ ಒಂದು ವಾರದಲ್ಲಿ ಮಧ್ಯಂತರ ಆದೇಶ ನೀಡಿ ಐಎಸ್ಐ ಪ್ರಮಾಣಪತ್ರ ಇಲ್ಲದ ಘಟಕಗಳನ್ನು ಕೂಡಲೇ ಮುಚ್ಚಿಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತ್ತು.
5 ತಿಂಗಳಾದರೂ ಯಾವ ಜಿಲ್ಲಾಧಿಕಾರಿಗಳೂ ತೀರ್ಪಿಗೆ ಸ್ಪಂದಿಸದೆ ಇದ್ದಾಗ ನ.9ರಂದು ಅಂತಿಮ ಆದೇಶ ನೀಡಿದರು. ಈ ಆದೇಶಕ್ಕೂ ಕವಡೆ ಕಿಮ್ಮತ್ತು ನೀಡಲಾಗಿಲ್ಲ. ಕೂಡಲೇ ಜಿಲ್ಲೆಯ ಅಂಕಿತ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಆದೇಶಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.