ನಲಿಕಲಿ ಮೂಲಕ ಗುಣಾತ್ಮಕ ಶಿಕ್ಷಣ ಸಾಧ್ಯ
ಹೊಸದುರ್ಗ: ಪಟ್ಟಣದ ಶಾದಿ ಮಹಲ್ನಲ್ಲಿ ಚಿತ್ರದುರ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಅಡಿಯಲ್ಲಿ ಬ್ಲಾಕ್ ಮಟ್ಟದ ನಲಿ ಕಲಿ ಸಂವಾದ ಕಾರ್ಯಕ್ರಮ ಜರುಗಿತು.
ನಲಿ ಕಲಿ ಸಂವಾದ ಕಾರ್ಯಕ್ರಮವನ್ನು, ನಲಿಕಲಿ ಕಲಿಕಾ ಸಾಮಗ್ರಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಅಭಿವೃದ್ಧಿ) ಹಾಗೂ ಡಯಟ್ ಪ್ರಾಂಶುಪಾಲ ಎಂ. ಮಲ್ಲಣ್ಣ ಅನಾವರಣಗೊಳಿಸಿ ಉದ್ಘಾಟಿಸಿದರು.
ನಂತರ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಗುಣಾತ್ಮಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಕ್ಕಳ ಕಲಿಕೆಯಲ್ಲಿನ ಲೋಪ ದೋಷಗಳನ್ನು ಗುರುತಿಸಿ ಬೋಧನೆಯಲ್ಲಿ ಅಳವಡಿಸಬಹುದಾದ ಚಟುವಟಿಕೆಗಳನ್ನು ಗುರುತಿಸಿಕೊಂಡು ಉತ್ತಮ ಕಲಿಕೆ ನೀಡುವಲ್ಲಿ ಶಿಕ್ಷಕ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಪ್ರಾಥಮಿಕ ಶಿಕ್ಷಣದಲ್ಲಿ ಅಳವಡಿಸಿರುವ ನಲಿಕಲಿ ಬೋಧನಾ ಪದ್ಧತಿಯಲ್ಲಿನ ಸಮಸ್ಯೆಗಳ ನಿವಾರಣೆಗೆ ಶಿಕ್ಷಕರ ಸಂವಾದ ಉತ್ತಮ ಕಾರ್ಯಕ್ರಮವಾಗಿದೆ. ಈ ಮೂಲಕ ಶಿಕ್ಷಕರಲ್ಲಿ ನಲಿಕಲಿ ಪದ್ಧತಿಯಲ್ಲಿನ ಸಾಹಿತ್ಯ, ಚಟುವಟಿಕೆಗಳನ್ನು ಅಳವಡಿಸುವಲ್ಲಿ ಹಾಗೂ ನೂತನ ಪಠ್ಯ ಸಾಹಿತ್ಯ ಅಳವಡಿಕೆಯಲ್ಲಿ ಮಾರ್ಗೋಪಾಯಗಳನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಮಾತನಾಡಿ, ತಾಲೂಕಿನ ಶಾಲೆಗಳಲ್ಲಿ ನಲಿಕಲಿ ಚಟುವಟಿಕೆಗಳನ್ನು ಉತ್ತಮವಾಗಿ ಅಳವಡಿಸಿದ್ದು ಶಿಕ್ಷಕರು ತಾಳ್ಮೆ, ಸಂಯಮದಿಂದ ನಲಿಕಲಿ ಪದ್ಧತಿಯಲ್ಲಿ ಬೋಧನೆ ಮಾಡಿದಲ್ಲಿ ಮಕ್ಕಳಿಗೆ ಒಳ್ಳೆಯ ಗುಣಾತ್ಮಕ ಶಿಕ್ಷಣ ನೀಡಬಹುದು ಎಂದರು.
ಅಭಿವೃದ್ಧಿಗೆ ಸಹಕಾರಿ: ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಡಯಟ್ನ ಹಿರಿಯ ಉಪನ್ಯಾಸಕ, ನಲಿಕಲಿ ನೋಡಲ್ ಅಧಿಕಾರಿ ಹನುಮಂತರಾಯಪ್ಪ, ನಲಿಕಲಿ ಪದ್ಧತಿಯಿಂದ ಮಕ್ಕಳಲ್ಲಿ ಸ್ವಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಸೈಯದ್ ಮೋಸಿನ್, ಡಯಟ್ ಉಪನ್ಯಾಸಕ ಸ್ವಾಮಿ, ಬೆಂಗಳೂರು ಡಿಎಸ್ಇಆರ್ಟಿ ರಾಜ್ಯ ನಲಿಕಲಿ ಸಂಪನ್ಮೂಲ ಅಧಿಕಾರಿ ವೀರಣ್ಣ ಗೌಡರ್, ನಲಿಕಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ರಾಜು ಇಜಾರಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ಕುಮಾರ್, ಗೌರವಾಧ್ಯಕ್ಷ ವೀರಭದ್ರಪ್ಪ ಮತ್ತಿತರ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.
ಉತ್ತಮ ಡಿಡಿಪಿಐ ಎಂಬ ಪ್ರಶಸ್ತಿಗೆ ಭಾಜನರಾದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ. ಮಲ್ಲಣ್ಣ ಅವರನ್ನು ಸನ್ಮಾನಿಸಲಾಯಿತು.
ತಾಲೂಕಿನ ಎಲ್ಲಾ ಶಾಲೆಯು ನಲಿ ಕಲಿ ಶಿಕ್ಷಕರು ಸಂವಾದದಲ್ಲಿ ಪಾಲ್ಗೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ತಮ್ಮ ಶಾಲೆಯ ಉತ್ತಮ ಚಟುವಟಿಕೆಗಳನ್ನು ಪ್ರದರ್ಶಿಸಿದರು.
ನಲಿಕಲಿ ಸಾಮೂಹಿಕ ಗೀತೆಯ ಮೂಲಕ ಪ್ರಾರ್ಥಿಸಿ, ಸೈಯದ್ ಮೋಸಿನ್ ಸ್ವಾಗತಿಸಿ, ಮಂಜುನಾಥ್ ದೇವಪುರ ನಿರೂಪಿಸಿ, ತಿಪ್ಪೇಶ್ ದೇವಪುರ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.