ಪರಿಸರ ಸಂರಕ್ಷಣೆ ಎಲ್ಲರ ಹೊಣೆ
ಚಿತ್ರದುರ್ಗ: ಪ್ರಕೃತಿ ಮನುಷ್ಯನ ಅಗತ್ಯತೆಗಳನ್ನು ಈಡೇರಿಸುತ್ತದೆಯೇ ವಿನಃ ದುರಾಸೆಗಳನ್ನಲ್ಲ. ಹಾಗಾಗಿ ಮನುಷ್ಯ ಪರಿಸರವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವುದನ್ನು ಬಿಟ್ಟು ಅದರ ಸಂರಕ್ಷಣೆಗೆ ಮುಂದಾಗಬೇಕೆಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ತೋಟಗಾರಿಕೆ ಸಂಘ, ಕೃಷಿ ಇಲಾಖೆ - ಆತ್ಮ ಯೋಜನೆ ಹಾಗೂ ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿರುವ 22ನೇ ಫಲ-ಪುಷ್ಪ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸ್ವಾರ್ಥ ತ್ಯಜಿಸಿ: ಇಂದಿನ ದಿನಗಳಲ್ಲಿ ಮನುಷ್ಯ ಪ್ರಕೃತಿಯಲ್ಲಿ ಇರುವುದೆಲ್ಲವೂ ನನಗೇ ಎಂದು ಸ್ವಾರ್ಥ ಲಾಲಸೆಯಿಂದ ಸಿಗುವುದೆಲ್ಲವನ್ನೂ ಕಬಳಿಸುವ ಗುಣ ಬೆಳೆಸಿಕೊಂಡಿದ್ದಾನೆ. ಮನುಷ್ಯನ ದೌರ್ಜನ್ಯ ಸಹಿಸಿಕೊಂಡಿರುವ ಪ್ರಕೃತಿ ಒಂದು ದಿನ ತಿರುಗಿ ಬಿದ್ದಲ್ಲಿ ಮನುಷ್ಯ ನಶಿಸಿ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನುಷ್ಯ ಪ್ರಕೃತಿಯಲ್ಲಿನ ಗಿಡ, ಮರ, ಹೂವು, ಹಣ್ಣುಗಳನ್ನು ನೋಡಿ ಕಣ್ಮನ ತುಂಬಿಕೊಳ್ಳಬೇಕು. ಕೇವಲ ನೋಡಿ ಕಣ್ತುಂಬಿಕೊಂಡರೆ ಸಾಲದು, ಅದನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು. ವಸ್ತು ಪ್ರದರ್ಶನದಲ್ಲಿನ ಸುಂದರ ವಾತಾವರಣ ನೋಡಿ ಮನುಷ್ಯ ತನ್ನಲ್ಲಿನ ಸಣ್ಣತನ ಕಡಿಮೆ ಮಾಡಿಕೊಳ್ಳಬೇಕು. ಕಿಂಚಿತ್ತಾದರೂ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಂಡು ಅದನ್ನು ಸಂರಕ್ಷಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಗಾಜಿನ ಮನೆ: ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಹಲವಾರು ವರ್ಷಗಳಿಂದ ಜಿಲ್ಲಾ ಕೇಂದ್ರದಲ್ಲಿ ಗಾಜಿನ ಮನೆ ನಿರ್ಮಾಣ ಮಾಡಬೇಕೆಂಬ ಬೇಡಿಕೆಯಿದೆ. ಅದಕ್ಕೆ ಶಾಸಕರ ನಿಧಿಯಿಂದ ನೆರವು ನೀಡಲು ಸಾಧ್ಯವಾಗುವುದಿಲ್ಲ. ಅದರ ನಿರ್ಮಾಣಕ್ಕಾಗಿ ರು. 2 ಕೋಟಿ ಅಗತ್ಯವಿದೆ. ಅದೃಷ್ಟವಿದ್ದರೆ ಮುಂದೆ ಅದಕ್ಕೆ ನೆರವಾಗುವುದಾಗಿ ಭರವಸೆ ನೀಡಿದರು.
ರೈತರು ಬರಗಾಲವಿದ್ದರೂ ಛಲ ಬಿಡದೆ ನೀರಿನ ಕೊರತೆಯಿದ್ದರೂ ತೋಟಗಾರಿಕೆ ಮತ್ತಿತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಮಾಜದ ಪ್ರತಿಯೊಬ್ಬರೂ ರೈತರಿಗೆ ಸಹಕಾರ ನೀಡಿ ಅವರ ಬದುಕು ಹಸನಾಗುವಂತಹ ಕ್ರಮಕ್ಕೆ ಸಹಾಯ ನೀಡಬೇಕು ಎಂದು ಹೇಳಿದರು.
ಪರಿಸರ ರಕ್ಷಿಸಿ: ಜಿಪಂ ಸಿಇಓ ನಾರಾಯಣಸ್ವಾಮಿ ಮಾತನಾಡಿ, ಮನುಷ್ಯ ಇತರರಿಗೆ ತೊಂದರೆ ನೀಡದೆ ಬದುಕಬೇಕು. ಪರಿಸರಕ್ಕೆ ಹಾನಿಯಾಗದಂತೆ ನಮ್ಮೆಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಮುಂದಿನ ಪೀಳಿಗೆಗೆ ಆರೋಗ್ಯಪೂರ್ಣ ವಾತಾವರಣ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಜಿಪಂ ಅಧ್ಯಕ್ಷೆ ಬಿ. ಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್, ತಾಪಂ ಅಧ್ಯಕ್ಷ ಮಹಲಿಂಗಪ್ಪ, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಡಿಸಿ ವಿ.ಪಿ. ಇಕ್ಕೇರಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಕೂರ್ಮರಾವ್, ಎಂ.ಎನ್. ನಾಗರಾಜ್, ಅಶ್ವತ್ಥ್, ವಿಜಯಕುಮಾರ್, ಸುಜಯಾ ಶಿವಪ್ರಕಾಶ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.