ಅಕ್ರಮ ಮರಳು: ಬರಿದಾಗುತ್ತಿದೆ ಚಿನ್ನಹಗರಿಹಳ್ಳ
ಮೊಳಕಾಲ್ಮುರು: ತಾಲೂಕಿನ ಜೀವನಾಡಿಯಾದ ಚಿನ್ನಹಗರಿಹಳ್ಳ ಅಕ್ರಮ ಮರಳು ದಂಧೆಕೋರರ ಕೈಲಿ ನಿತ್ಯ ಬಲಿಯಾಗುತ್ತಿದೆ.
ತೀವ್ರ ಬರಗಾಲದಿಂದ ಈ ಭಾಗದಲ್ಲಿ ಅಂತರ್ಜಲ ಕುಸಿದು ಕುಡಿಯುವ ನೀರಿಗೆ ಹಾಹಾಕಾರ ಪಡುವ ಸ್ಥಿತಿಯಲ್ಲಿ ಜನರಿದ್ದು, ಏಕೈಕ ನೀರಿನ ಸೆಲೆಯಾಗಿರುವ ಚಿನ್ನ ಹಗರಿ ನಿತ್ಯ ಮರಳು ಗಣಿಗಾರಿಕೆಯಿಂದ ತನ್ನ ಒಡಲನ್ನು ಬರಿದಾಗಿಸಿಕೊಳ್ಳುತ್ತಿದ್ದರೂ ಸಂಬಂಧಿಸಿದ ಇಲಾಖೆಯವರು ಚಕಾರ ಎತ್ತುತ್ತಿಲ್ಲ.
ಜಾಣ ಕುರುಡುತನ: ಚಿನ್ನಹಗರಿಯ ಇಕ್ಕೆಲೆಗಳ ಗ್ರಾಮಗಳಾದ ಚಿಕ್ಕೋಬನಹಳ್ಳಿ, ಚಿಕ್ಕುಂತಿ ಅಲ್ಲದೇ ಗಡಿ ಗ್ರಾಮಗಳಾದ ಮಾಚೇನಹಳ್ಳಿ, ವೆಂಕಟಾಪುರ ಸಮೀಪದಲ್ಲಿ ನಿತ್ಯ ಮರಳು ದಂಧೆಕೋರರ ಕೈಲಿ ಹಳ್ಳ ಸಾಯುತ್ತಿದೆ. ಇಲ್ಲಿನ ಮರುಳು ಗಣಿಗಾರಿಕೆಯಿಂದ ಪರಿಸರದ ಮೇಲಾಗುವ ಅನಾಹುತಗಳನ್ನು ಗಮನಿಸಿದ ಸರ್ಕಾರ ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ ಹದ್ದಿನ ಕಣ್ಣಿಡುವಂತೆ, ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿ ಆಕ್ರಮ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಬೇಕೆಂದು ಎಷ್ಟೇ ದೃಢ ಸಂಕಲ್ಪ ಮಾಡಿದರೂ ರಾಜಾರೋಷವಾಗಿ ಮರಳು ನಿತ್ಯ ಸದ್ದಿಲ್ಲದಂತೆ ರವಾನೆಯಾಗುತ್ತಿದೆ. ಇಲ್ಲಿನ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ವಿಪರ್ಯಾಸವೇ ಸರಿ.
ಅವ್ಯಾಹತ ಕೊಳ್ಳೆ: ರೈತರು ಕೃಷಿ ಚಟುವಟಿಕೆಗೆ ಬಳಸುವ ಟ್ರ್ಯಾಕ್ಟರ್ ಮತ್ತು ಲಾರಿಗಳ ಮೂಲಕ ಆಕ್ರಮ ಮರಳು ಸಾಗಾಟ ಅವ್ಯಾಹತವಾಗಿ ಕೊಳ್ಳೆ ಹೊಡೆಯಲಾಗುತ್ತಿದೆ. ಮರಳು ಸಾಗಾಟದಿಂದಾಗಿ ಅಂತರ್ಜಲ ಪಾತಾಳ ಕಂಡಿದೆ. ಇದು ಹೀಗೇ ನಡೆದರೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದರೂ ಅಚ್ಚರಿ ಇಲ್ಲ.
ನಿತ್ಯ ಮರಳು ಸಾಗಾಟ: ಸದಾ ನೀರಿನ ಸೆಲೆಯನ್ನು ತನ್ನ ಒಡಲಾಳದಲ್ಲಿ ಹರಿಸುತ್ತಿದ್ದ ಚಿನ್ನ ಹಗರಿ ಕಳೆದ ಮೂರ್ನಾನಾಲ್ಕು ವರ್ಷದ ಭೀಕರ ಬರಗಾಲದಿಂದ ತತ್ತರಿಸಿ ಒಣಗಿ ಹೋಗಿರುವ ಹಿನ್ನೆಲೆಯಲ್ಲಿ ಮರಳು ಸಾಗಾಟಗಾರರಿಗೆ ಸುಲಭವಾಗಿದೆ. ನಿತ್ಯ ಮರಳು ಸಾಗಾಟ ಮಾಡುತ್ತಿರುವುದರಿಂದ ಆಳುದ್ದದ ಗುಂಡಿಗಳು ಬಿದ್ದು, ಅಂತರ್ಜಲ ಕುಸಿಯಲು ಕಾರಣವಾಗುತ್ತಿದೆ.
ಹಗರಿ ಹಳ್ಳ ಹಾದುಹೋಗುವ ಇಕ್ಕೆಡೆಗಳ ಗ್ರಾಮಗಳಿಗೆ ಅಂತರ್ಜಲ ಕಾಪಾಡುತ್ತಿರುವ ತಾಲೂಕಿನ ಜೀವನದಿ ಆಕ್ರಮ ಮರಳು ದಂದೆಯ ಕಪಿಮುಷ್ಠಿಯಲ್ಲಿ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಚಿನ್ನ ಹಗರಿ ಹಳ್ಳದಲ್ಲಿ ನಿತ್ಯ ನಡೆಯುತ್ತಿರುವ ಆಕ್ರಮ ಮರಳು ದಂದೆಗೆ ಕಡಿವಾಣ ಹಾಕಿದರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಗರಿಹಳ್ಳ ಶಕ್ತವಾಗುತ್ತದೆ. ಎನ್ನುವುದು ಈ ಭಾಗದ ಜನರಿಂದ ಕೇಳಿಬರುತ್ತಿರುವ ಮಾತಾಗಿದೆ.
ಮರಳು ದಾಸ್ತಾನು: ಗಣ್ಯವ್ಯಕ್ತಿಗಳು ಬಂದು ಹೋಗುವ ಇಲ್ಲಿನ ಹಾನಗಲ್ ಪ್ರವಾಸಿ ಮಂದಿರದ ಸಮೀಪದ ಸಣ್ಣ ನಿರಾವರಿ ಇಲಾಖೆಗೆ ಸಂಬಂಧಿಸಿದ ಸ್ಥಳದಲ್ಲಿ ಆಕ್ರಮವಾಗಿ ಮರಳು ಮತ್ತು ಜಲ್ಲಿ ದಾಸ್ತಾನು ಮಾಡಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ.
ರಾಶಿ ರಾಶಿಯಾಗಿ ದಾಸ್ತಾನು ಮಾಡಲಾಗಿರುವ ಮರಳಿಗೆ ಸಂಬಂಧಿಸಿ ನಿಖರವಾದ ದಾಖಲೆಗಳಿಲ್ಲದೆ ಸರ್ಕಾರಿ ಸ್ಥಳದಲ್ಲಿ ನಿರ್ಭಯವಾಗಿ ಶೇಖರಣೆ ಮಾಡಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರವಾಸಿ ಮಂದಿರಕ್ಕೆ ಗಣ್ಯ ವ್ಯಕ್ತಿಗಳು ಅಲ್ಲದೇ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದು ಹೋದರೂ ಯಾವೊಬ್ಬ ಅಧಿಕಾರಿಗಳು ಇದರ ಕಡೆ ಗಮನ ಹರಿಸಿಲ್ಲದಿರುವುದು ಸೋಜಿಗವೆನಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.