'ಅನಕ್ಷರಸ್ಥರೂ ಕುಮಾರವ್ಯಾಸನ ಭಾರತ ಹಾಡುತ್ತಾರೆ'
ಚಿತ್ರದುರ್ಗ: ಕುಮಾರವ್ಯಾಸನ ಕಾವ್ಯಗಳು ಅಕ್ಷರಸ್ಥರಿಗಷ್ಟೆ ಅಲ್ಲದೆ ಅಕ್ಷರ ಬಾರದವರು ಸುಲಲಿತವಾಗಿ ಹಾಡಲು ಬರುತ್ತವೆ.
ಗ್ರಾಮಾಂತರ ಪ್ರದೇಶಗಳ ಸಾಮಾನ್ಯ ವ್ಯಕ್ತಿಯೂ ಮಹಾಭಾರತವನ್ನು ಓದುತ್ತಿದ್ದಾನೆ ಎಂದರೆ ಅಲ್ಲಿ ಕುಮಾರವ್ಯಾಸ ಇದ್ದಾನೆ ಎಂದೇ ಅರ್ಥವೆಂದು ಅಭಿರುಚಿ ವೇದಿಕೆ ಸಂಚಾಲಕ ಪ್ರೊ.ಬಿ.ಪಿ. ವೀರೇಂದ್ರ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಗಮಕ ವಾಚನ: ನಗರದ ಗಮಕ ಕಲಾಭಿಮಾನಿಗಳ ಸಂಘ, ಗಮಕ ಕಲಾ ಪರಿಷತ್, ಕುಮಾರವ್ಯಾಸ ಪೀಠ, ತುಮಕೂರು ವಿಶ್ವ ವಿದ್ಯಾನಿಲಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುಮಾರವ್ಯಾಸ ದರ್ಶನ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಭಿನ್ನತೆ ಇದೆ: ವ್ಯಾಸ ರಚಿಸಿದ ಮಹಾ ಭಾರತವನ್ನು ಓದುತ್ತಿದ್ದರೆ ಅದು ನಮ್ಮ ಕಣ್ಣ ಮುಂದೆ ನಡೆಯುತ್ತಿದೆ ಎನ್ನುವಂತೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ರಚನೆ ಮಾಡಿದ್ದಾರೆ. ಓದುಗರ ಮನಸ್ಸಿನಲ್ಲಿ ದೃಶ್ಯವನ್ನು ಮೂಡಿಸಿದ್ದಾರೆ. ಪಂಪ ಮತು ವ್ಯಾಸ ರಚಿಸಿದ ಮಹಾಭಾರತದಲ್ಲಿ ವಿಭಿನ್ನತೆ ಇದೆ. ಪಂಪ ಕವಿಯೂ ಮಾತ್ರವಲ್ಲದೆ ಶೂರನು ಆಗಿದ್ದು ಕತ್ತಿಯನ್ನು ಹಿಡಿದು ಹೋರಾಟವನ್ನು ಮಾಡಿದನು. ಅದರ ಜೊತೆಯಲ್ಲಿ ಉತ್ತಮ ಕವಿಯೂ ಆಗಿದ್ದನು. ಪಂಪ ಬರೆದ ಕಾವ್ಯದಲ್ಲಿ ವಾಸ್ತವತೆ ಇದ್ದರೆ. ವ್ಯಾಸ ಬರೆದ ಕಾವ್ಯದಲ್ಲಿ ಕಲ್ಪನೆಯಿದೆ ಎಂದರು.
ಸ್ಪಂದನೆ ಮಾಡುತ್ತಿಲ್ಲ: ಕುಮಾರವ್ಯಾಸ ಅಂದಿನ ಕಾಲದಲ್ಲಿಯೇ ರಾಜರ ಆಡಳಿತವನ್ನು ವಿರೋಧಿಸಿದ್ದ. ರಾಜರು ರಾಕ್ಷಸರು, ಮಂತ್ರಿಗಳು ಮರೆಗುಳಿಗಳು ಸಾಮಾನ್ಯ ಜನತೆಯ ನೋವಿಗೆ ಸ್ಪಂದನೆ ಮಾಡುತ್ತಿಲ್ಲ ಎಂದು ಹೇಳಿದ್ದ. ಅದು ಈಗಲೂ ನಿಜವಾಗುತ್ತಿದೆ. ಈಗ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಜನತೆಗೆ ಹೆಚ್ಚಿನ ಪ್ರಮಾಣದಲ್ಲಿ ನೋವಾಗುತ್ತಿದೆ. ನಮಗೆ ಯಾರೂ ಸ್ಪಂದನೆ ನೀಡುತ್ತಿಲ್ಲ ಎನ್ನುತ್ತಿದ್ದಾರೆ.
ಕುಮಾರವ್ಯಾಸ ರಚಿಸಿದ ಹಲವಾರು ಕಾವ್ಯಗಳು ಅಕ್ಷರ ಬಾರದ ಜನತೆಯ ಬಾಯಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲದೆ ಹರಿದಾಡುತ್ತವೆ. ಕಾವ್ಯವನ್ನು ಯಕ್ಷಗಾನ ರೂಪದಲ್ಲಿ ಕಟ್ಟಿಕೊಂಡು ಹಾಡುತ್ತಿದ್ದಾರೆ. ಇವರ ನಾಲಿಗೆಯ ಮೇಲೆ ಕುಮಾರವ್ಯಾಸ ನಲಿದಾಡುತ್ತಿದ್ದಾನೆ. ಅಕ್ಷರಸ್ಥರಿಗಿಂತ ಅನಕ್ಷರರು ಈತನ ಕಾವ್ಯಗಳನ್ನು ಹೆಚ್ಚಿನ ಮಟ್ಟದಲ್ಲಿ ಇಷ್ಟಪಡುತ್ತಿದ್ದಾರೆ. ಯಾವುದೇ ಜಾತಿ ಧರ್ಮಗಳಿಗೆ ಅನ್ವಯಾಗದೇ ಎಲ್ಲರಿಗೂ ಆತ ಇಷ್ಟವಾಗುತ್ತಿದ್ದಾನೆ ಎಂದು ವಿರೇಂದ್ರ ಕುಮಾರ ಹೇಳಿದರು.
ಪಾಂಡವರು ಸಾಮಾನ್ಯ ವ್ಯಕ್ತಿಗಳಂತೆ ಬೇರೆಯವರ ಮನೆಯಲ್ಲಿ ಕೆಲಸವನ್ನು ಮಾಡಿ ಅಂತಿಮವಾಗಿ ಸಂತೋಷ ಹೊಂದುತ್ತಾರೆ. ಇದನ್ನು ಆಡುವುದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಇದೆ ಎಂದರು.
ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷ ಡಾ. ರಾಜೀವಲೋಚನ ಮಾತನಾಡಿ, ಗಮಕಕ್ಕೂ ಕುಮಾರವ್ಯಾಸರವರಿಗೂ ಅವಿನಾಭಾವ ಸಂಬಂಧವಿದೆ. 12ನೇ ಶತಮಾನದಲ್ಲಿ ಬಸವಣ್ಣ ವಚನ ಕಾಂತ್ರಿಯನ್ನು ಮಾಡಿದರೆ ಕುಮಾರವ್ಯಾಸ ಗಮಕದ ಮೂಲಕ ಪ್ರಸಿದ್ಧಿಯನ್ನು ಪಡೆದರು. ಬಸವಣ್ಣ ಕಾಯಕ ಪ್ರಜ್ಞೆಯನ್ನು ಮೂಡಿಸಿದರೆ, ಕುಮಾರವ್ಯಾಸ ಭಕ್ತಿಯ ರಸವನ್ನು ಹರಿಸಿದ್ದಾನೆ. ಪಂಪನನ್ನು ನೀಡುವುದರ ಮೂಲಕ ಕಾವ್ಯ ಪರಂಪರೆಯನ್ನು ಮುಂದುವರೆಸಲು ನೆರವಾಗಿದ್ದಾನೆ ಎಂದರು.
ಎರಡು ದಿನಗಳ ಕುಮಾರವ್ಯಾಸ ದರ್ಶನವನ್ನು ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರಾದ ಹೊಸಳ್ಳಿ ಕೇಶವಮೂರ್ತಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜಾರಾಮ್ ಮೂರ್ತಿ, ತುಮಕೂರು ವಿಶ್ವ ವಿದ್ಯಾನಿಲಯದ ಕುಮಾರವ್ಯಾಸ ಪೀಠದ ಗೌರವ ಪ್ರಾಧ್ಯಾಪಕ ಡಾ. ಪ್ರಸನ್ನ ಉಪಸ್ಥಿತರಿದ್ದರು.
ಶೃತಿ, ಸಂಯುಕ್ತಾ ಪ್ರಾರ್ಥಿಸಿದರೆ, ಗಣಪತಿ ಭಟ್ ಸ್ವಾಗತಿಸಿದರು. ಜಯಾ ಪ್ರಾಣೇಶ್ ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.