ಕುಡಿವ ನೀರಿನ ಘಟಕಗಳ ಮೇಲೆ ದಾಳಿ; ಬೀಗಮುದ್ರೆ
ಚಿತ್ರದುರ್ಗ: ಐಎಸ್ಐ ಪ್ರಮಾಣಪತ್ರ ಪಡೆಯದೆ ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ 30 ಕುಡಿಯುವ ನೀರಿನ ಪ್ಯಾಕೇಜಿಂಗ್ ಘಟಕಗಳ ಮೇಲೆ ಜಿಲ್ಲಾಡಳಿತದ ವತಿಯಿಂದ ಭಾನುವಾರ ದಾಳಿ ನಡೆಸಲಾಯಿತು.
ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಗರದಲ್ಲಿ ನಡೆದ ದಾಳಿ ವೇಳೆ 9 ಅನಧಿಕೃತ ಘಟಕಗಳನ್ನು ಲಾಕೌಟ್ ಮಾಡಿಸಲಾಯಿತು. ಇದಲ್ಲದೆ ಚಳ್ಳಕೆರೆಯ 10, ಹಿರಿಯೂರಿನ 2, ಹೊಳಲ್ಕೆರೆಯಲ್ಲಿ ಒಂದು, ಹೊಸದುರ್ಗ ಮತ್ತು ಮೊಳಕಾಲ್ಮುರಿನಲ್ಲಿ ತಲಾ 4 ಘಟಕಗಳಿಗೆ ಬೀಗಮುದ್ರೆ ಹಾಕಲಾಯಿತು.
ಆರೋಗ್ಯಕ್ಕೆ ಪ್ರಮುಖ್ಯತೆ: ಪತ್ರಿಕೆಗೆ ಮಾಹಿತಿ ನೀಡಿದ ಕುಮಾರಸ್ವಾಮಿ, ಜನರು ಹಣ ಕೊಟ್ಟು ಗುಣಮಟ್ಟದ ನೀರು ಕುಡಿಯಲು ಚಿಂತಿಸುವುದಿಲ್ಲ. ಜನರ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿ ಉತ್ತಮ ನೀರು ಒದಗಿಸುವುದು ಪ್ಯಾಕೇಜಿಂಗ್ ಘಟಕಗಳ ಕರ್ತವ್ಯವಾಗಿದೆ. ಐಎಸ್ಐ ಪ್ರಮಾಣಪತ್ರ ಪಡೆದು ಘಟಕ ನಡೆಸುವುದು ದುಬಾರಿ ಎನಿಸುತ್ತದೆ. ಅದಕ್ಕಾಗಿ ಉತ್ಪಾದಕರು ಪ್ರಮಾಣಪತ್ರ ಪಡೆಯಲು ಆಸಕ್ತರಾಗಿಲ್ಲ. ಹಾಗಾಗಿ ಎಲ್ಲ ರೀತಿಯಿಂದಲೂ ನೀರನ್ನು ಶುದ್ಧಗೊಳಿಸದೆ ಪೂರೈಕೆ ಮಾಡುತ್ತಾರೆ ಎಂದರು.
ಘಟಕಗಳ ಜಪ್ತಿ: ಈ ಹಿಂದೆ ಹಲವು ಬಾರಿ ಈ ಘಟಕಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ, ನೋಟಿಸ್ಗಳನ್ನು ನೀಡಲಾಗಿತ್ತು. ಯಾವುದೇ ಘಟಕಗಳು ಸಮರ್ಪಕವಾಗಿ ಸ್ಪಂದಿಸಲಿಲ್ಲ. ಪ್ರಮಾಣಪತ್ರ ಪಡೆಯಲು, ಲೈಸೆನ್ಸ್ ಪಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದ್ದರಿಂದಲೇ ಜಿಲ್ಲಾಡಳಿತ ಈ ಘಟಕಗಳನ್ನು ಜಪ್ತಿ ಮಾಡುವ ಕ್ರಮಕ್ಕೆ ಮುಂದಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಅಕ್ರಮವಾಗಿ ಕುಡಿಯುವ ನೀರಿನ ಪ್ಯಾಕೇಜಿಂಗ್ ಮಾಡಿ ಮಾರಾಟ ಮಾಡುವಂತಹ ಘಟಕಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು. ಕಂದಾಯ ಮತ್ತು ಆಹಾರ ಕಲಬೆರಕೆ ಅಧಿಕಾರಿಗಳಿಗೆ ಯಾವುದೇ ಅಕ್ರಮ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲು ಅನುಮತಿ ನೀಡಲಾಗಿದೆ. ಇಂದು ಜಪ್ತಿ ಮಾಡಿದ ಘಟಕಗಳು ತುಂಬಾ ಸ್ವಚ್ಛವಿಲ್ಲದ ಮತ್ತು ಶೋಚನೀಯ ಸ್ಥಿತಿಯಲ್ಲಿದ್ದವು. ದಾಳಿ ನಡೆಸಿದ ಕ್ರಮ ಸಮರ್ಪಕವಾಗಿದೆ ಎಂದು ಸಮರ್ಥಿಸಿಕೊಂಡರು.
ಹೈಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಶನಿವಾರ ಎಲ್ಲ ತಹಸೀಲ್ದಾರರಿಗೆ ಈ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಅನಧಿಕೃತ ಪ್ಯಾಕೇಜಿಂಗ್ ಘಟಕಗಳ ವಿರುದ್ಧ ಕಾನೂನು ಹೋರಾಟ ಕೈಗೊಂಡಿರುವ ಪ್ರಜಾಂದೋಲನ ಸ್ವಯಂ ಸೇವಾ ಸಂಸ್ಥೆ ಇತ್ತೀಚೆಗೆ ಈ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ಜಿಲ್ಲಾಡಳಿತ ಈ ಘಟಕಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿತ್ತು. ಡಾ.ಬಿ. ಜಯಮ್ಮ, ಆಹಾರ ಸುರಕ್ಷತೆ ಅಧಿಕಾರಿ ಶಿವಕುಮಾರ್, ತಿರುಮಲೇಶ, ಕಾಂತರಾಜ ಮತ್ತಿತರೆ ಅಧಿಕಾರಿಗಳು ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.