ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ನೀರಿಲ್ಲದೆ ನೆಲಕಚ್ಚಿದ ಕೃಷಿ ಕೆಲಸ

Parashurama
Updated On : 11 Feb 2013, 11:17 am

ಹಿರಿಯೂರು: ಸತತವಾಗಿ ನಾಲ್ಕು ವರ್ಷಗಳಿಂದ ಕಾಡುತ್ತಿರುವ ಬರಗಾಲ, ಮರಳು ಗಣಿಗಾರಿಕೆಯ ಪ್ರತಿಕೂಲ ಪರಿಣಾಮಗಳು, ಅಂತರ್ಜಲ ಮಟ್ಟ ಕುಸಿತ, ತ್ರೀಫೇಸ್ ವಿದ್ಯುತ್ ಅಭಾವದಿಂದಾಗಿ ತಾಲೂಕಿನ ಕೃಷಿ ಬದುಕು ನೆಲಕಚ್ಚಿದೆ...
   ಮುಂಬರುವ ದಿನಗಳ ಭೀಕರ ದುಸ್ವಪ್ನಕ್ಕೆ ಸಾಕ್ಷಿಯಾಗಿ ತಾಲೂಕಿನಾದ್ಯಂತ ಅಡಕೆ, ತೆಂಗು, ಮೂಸಂಬಿ, ಪಪ್ಪಾಯಿ ಮತ್ತಿತರ ವಾಣಿಜ್ಯ ಬೆಳೆಗಳ ತೋಟಗಳು ಒಣಗುತ್ತಿವೆ. ಒಂದೊಮ್ಮೆ ಕಲ್ಪವೃಕ್ಷದ ನಾಡೆಂದು ಖ್ಯಾತಿಗೆ ಪಾತ್ರವಾಗಿ ಸಮೃದ್ಧ ಕೃಷಿ ಬದುಕಿಗೆ ನೆಲೆ ಒದಗಿಸಿದ್ದ ಹಿರಿಯೂರು ಈಗ ಶಾಪಗ್ರಸ್ತ ಬೀಡಾಗಿದೆ.
    ಅರ್ಧ ತಾಲೂಕಿನ ಹೊಲ, ಗದ್ದೆ, ತೋಟಗಳಿಗೆ ಜೀವಜಲವನ್ನು ಧಾರೆಯೆರುತ್ತಿದ್ದ ವಾಣಿವಿಲಾಸ ಸಾಗರ ಜಲಾಶಯದ  ಒಡಲು ಈಗ ಬತ್ತಿಹೋಗಿದೆ. ಭೂಗರ್ಭದ ಅಂತರ್ಜಲ ನೆಚ್ಚಿಕೊಂಡು ಕೃಷಿಯನ್ನು ಉದ್ಯಮದ ಸ್ವರೂಪದಲ್ಲಿ ನಡೆಸುತ್ತಿದ್ದ ಮಹತ್ವಾಕಾಂಕ್ಷಿ ರೈತರ ಸಾಹಸಗಳು ಮಣ್ಣಾಗುತ್ತಿವೆ.
 ಸಾಲುಗುಡ್ಡಗಳ ಬೆಟ್ಟದ ತಪ್ಪಲಿನ ಹಳ್ಳಿಗಳಲ್ಲಿ  ವರ್ಷ ಪೂರ್ತಿ ಬತ್ತದೆ ಉಳಿಯುತ್ತಿದ್ದ ನೀರಿನ ಸೆಲೆ ಈಗ ಸಂಪೂರ್ಣ ಇಲ್ಲವಾಗಿದೆ.
ವಿದ್ಯುತ್ ಸಮಸ್ಯೆ: ಈ ಎಲ್ಲ ಸಮಸ್ಯೆಗಳ ಪ್ರಾತಿನಿಧಿಕ ರೂಪವಾಗಿ ಸುವರ್ಣಮುಖಿ ನದಿ ಪಾತ್ರ ಸೆರಗಿನಲ್ಲಿರುವ ಹತ್ತಾರು ಲಕ್ಷಗಳನ್ನು ಹೂಡಿ ರೂಪಿಸಿದ್ದ ಸಮುದ್ರದಹಳ್ಳಿ ಯುವ ರೈತ ಮುಖಂಡ ನಾರಾಯಣ ಗೌಡ ಎಂಬವರ 8 ಎಕರೆ ಪಪ್ಪಾಯಿ ತೋಟ ನೀರು ಮತ್ತು ವಿದ್ಯುತ್ ಸಮಸ್ಯೆ ಅಭಾವದಿಂದಾಗಿ ಒಣಗಿ ನೆಲಕ್ಕೆ ಬೀಳುವ ಸ್ಥಿತಿಯಲ್ಲಿದೆ.
   ಅಂದರೆ ನೀರಿನ ಅಕ್ಷಯ ಪಾತ್ರೆಯಾಗಿ ತನ್ನ ಒಡಲಲ್ಲಿ ಪಸೆ ಉಳಿಸಿಕೊಂಡಿರುತ್ತಿದ್ದ ನದಿ ಪಾತ್ರದ ಹಳ್ಳಿಗಳಲ್ಲೇ ಈಗ ತೋಟಗಳು ಒಣಗಿ ನೆಲಕಚ್ಚುತ್ತಿರುವುದು ಸನ್ನಿವೇಶದ ವಿಷಮತೆಗೆ ನಿದರ್ಶನವಾಗಿದೆ.
ಕೃಷಿ ಕುಟುಂಬಗಳು ಬೀದಿಗೆ: ಜನ್ಮತಃ ನೀರಿನ ಅಭಾವವನ್ನು ಕಂಡಿಲ್ಲದ ಕಾರಣಕ್ಕೆ ನದಿಪಾತ್ರದ ಮತ್ತು ಗುಡ್ಡಗಳ ತಪ್ಪಲಿನ ಹಳ್ಳಿಗಳಲ್ಲೇ ಸಮಸ್ಯೆ ತೀವ್ರವಾಗಿರುವುದು ರೈತರನ್ನು ಕಂಗಾಲಾಗಿಸಿದೆ. ಈ ನಡುವೆ ನೀರಿನ ಸೆಲೆ ಇನ್ನೂ ಜೀವಂತವಾಗಿರುವ ಕೆಲವು ಕಡೆ ತ್ರೀಫೇಸ್ ವಿದ್ಯುತ್ ಕೊರತೆ ಸೃಷ್ಟಿಸಿರುವ ಸಮಸ್ಯೆಯಿಂದಾಗಿ ಅನೇಕ ಕೃಷಿ ಕುಟುಂಬಗಳು ಬೀದಿಗೆ ಬೀಳುವ ಸನ್ನಿವೇಶ ಎದುರಾಗಿದೆ.
ತೋಟ ಒಣಗುತ್ತಿದೆ: ಕಳೆದ ವರ್ಷ ಕೇವಲ ಸಾವಿರ ಪಪ್ಪಾಯಿ ಗಿಡಗಳನ್ನು ನಾಟಿಮಾಡಿ ಕೆಜಿಗೆ ಮೂರು ನಾಲ್ಕು ರುಪಾಯಿಗಳ ಕನಿಷ್ಠ ದರದಲ್ಲಿಯೇ 6 ಲಕ್ಷಕ್ಕೂ ಹೆಚ್ಚಿನ ಆದಾಯ ಕಂಡಿದ್ದ ಕಾರಣಕ್ಕೆ ಈ ಬಾರಿ ಪಕ್ಕದ ಹೊಲವನ್ನು ಗುತ್ತಿಗೆ ಪಡೆದು ಆರೂವರೆ ಸಾವಿರ ಗಿಡಗಳನ್ನು ನಾಟಿ ಮಾಡಿ ಅದ್ಬುತ ಯಶಸ್ಸಿನ ಕನಸು ಕಾಣುತ್ತಿದ್ದ ರೈತ ನಾರಾಯಣಗೌಡರಿಗೆ ಈಗ ವಿದ್ಯುತ್ ಸಮಸ್ಯೆ ಭೂತಾಕಾರವಾಗಿ ಕಾಡುತ್ತಿದೆ.
   ಈ ಕಾರಣಕ್ಕೆ ಕಳೆದ ಎಂಟು ತಿಂಗಳ ಹಿಂದೆ ನೆಟ್ಟಿದ್ದ ಪಪ್ಪಾಯಿ ಈಗ ಫಲ ಬಿಡುವ ಹಂತದಲ್ಲಿದ್ದು ನಿಯಮಿತವಾಗಿ ನೀರನ್ನು ನೀಡಬೇಕಾದ ಅವಶ್ಯಕತೆಯಿದೆ.
  ಆದರೆ ರಾತ್ರಿ ಎರಡು ಗಂಟೆ ಮತ್ತು ಹಗಲು ಎರಡು ಗಂಟೆ ನೀಡಲಾಗುತ್ತಿರುವ ತ್ರೀಫೇಸ್‌ನಿಂದಾಗಿ ಕಾಲು ಭಾಗದ ತೋಟ ತಣಿಯದಂತಾಗಿದೆ. ಅಂದರೆ ಈ ಬೆಳೆಯನ್ನು ರಕ್ಷಿಸಲು ಎರಡು ಬೋರ್ ವೆಲ್‌ಗಳನ್ನು ಕೊರೆಯಿಸಲಾಗಿದ್ದರೂ ವಿದ್ಯುತ್ ಅಭಾವದಿಂದಾಗಿ ತೋಟ ಒಣಗುತ್ತಿರುವ ಹೊಸ ಸಮಸ್ಯೆ ಉದ್ಬವಿಸಿರುವ ಕಾರಣಕ್ಕೆ ದಿಕ್ಕು ತೋಚದಂತಾಗಿದ್ದಾರೆ.
 ತಾಲೂಕಿನ ಪ್ರತಿಹಳ್ಳಿಯಲ್ಲಿಯೂ ಈ ಸಮಸ್ಯೆ ಜೀವಂತವಾಗಿದ್ದು ಸಾವಿರಾರು ರೈತರು ಬವಣೆಗೆ ಸಿಕ್ಕು ನರಳುತ್ತಿದ್ದಾರೆ. ಈ ಕಾರಣಕ್ಕೆ ಈಗಾಗಲೇ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಂಡ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
   ಕಲ್ಲುವಳಿ ಸಾಲಿನ ಊರುಗಳಾದ ಇದ್ದಲ ನಾಗೇನಹಳ್ಳಿ, ಹಿಂಡಸಕಟ್ಟೆ, ಯಲ್ಲದಕೆರೆ, ಗುಡ್ಡದ ತಪ್ಪಲು ಪ್ರದೇಶಗಳಾದ ಗೌನಹಳ್ಳಿ, ಗೋಗುದ್ದು, ಭೂತಯ್ಯನ ಹಟ್ಟಿ, ಸೂರಗೊಂಡನಹಳ್ಳಿ, ಭರಂಪುರ, ಭರಂಗಿರಿ, ಮತ್ತು ಐಮಂಗಲ ಹೋಬಳಿಯ ಬಹುತೇಕ ಹಳ್ಳಿಗಳ ತೆಂಗು, ಅಡಕೆ ತೋಟಗಳು ನಾಶವಾಗಿದೆ.
 ಉಳಿದ ಕಸಬಾ, ಜವನಗೊಂಡನಹಳ್ಳಿ, ಧರ್ಮಪುರ ಹೋಬಳಿಯ ಹಳ್ಳಿಗಳು ಮತ್ತು ವಾಣಿ ವಿಲಾಸ ಜಲಾಶಯ ಅಚ್ಚು ಕಟ್ಟುಪ್ರದೇಶದ ಹಳ್ಳಿಗಳೂ ಸೇರಿಂದಂತೆ ಬಹುತೇಕ ಭಾಗದಲ್ಲಿ ತೋಟಗಾರಿಕಾ ಮತ್ತು ಪಾರಂಪರಿಕ ಕೃಷಿ ಬದುಕು ನೀರು ಮತ್ತು ವಿದ್ಯುತ್ ಸಮಸ್ಯೆಯಿಂದಾಗಿ ವಿನಾಶದ ಅಂಚಿಗೆ ಬಂದು ನಿಂತಂತಾಗಿದೆ.
-ಆರ್. ಸಂತೋಷ್ ಕೋಡಿಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments