ಮಗು ಅಪಹರಣ: ಆರೋಪಿಗಳ ಬಂಧನ
ಚಿತ್ರದುರ್ಗ: ಅಮಾವಾಸ್ಯೆ ಪ್ರಯುಕ್ತ ನಿಧಿ ಆಸೆಗಾಗಿ ಮಗುವೊಂದನ್ನು ಅಪಹರಿಸಿದ್ದ ಆರೋಪಿಗಳನ್ನು ಚಳ್ಳಕೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಳ್ಳಕೆರೆ ಪಟ್ಟಣದ ಅಂಬೇಡ್ಕರ್ ನಗರದ ವಾಸಿ ಪಾಲಮ್ಮ ಎಂಬುವವರು ತನ್ನ ಮೂರು ವರ್ಷದ ಲಕ್ಷ್ಮಿ ಎಂಬ ಹೆಣ್ಣು ಮಗುವನ್ನು ಮೂವರು ಹೆಂಗಸರು ಅಪಹರಣ ಮಾಡಿಕೊಂಡು ಹೋಗಿದ್ದು, ಇದನ್ನು ಪ್ರತ್ಯಕ್ಷವಾಗಿ ನೋಡಿದ್ದ ಸರೋಜಮ್ಮ, ಆಶಾಬೀ ಹಾಗೂ ಇತರೆಯವರು ಪ್ರತ್ಯಕ್ಷದರ್ಶಿಗಳಾಗಿ ಈ ಬಗ್ಗೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮಗುವಿನ ಪತ್ತೆ ಬಗ್ಗೆ ಪೊಲೀಸ್ ಅಧೀಕ್ಷಕ ಎಂ.ಎನ್. ನಾಗರಾಜ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಾಂತರಾಜು ಮಾರ್ಗದರ್ಶನದಲ್ಲಿ ಪತ್ತೆ ಕಾರ್ಯ ಕೈಗೊಂಡ ಚಳ್ಳಕೆರೆ ಉಪಾಧೀಕ್ಷಕ ಎಂ. ಶೇಖರಪ್ಪ, ಸಿಪಿಐನವರಾದ ಮಂಜುನಾಥ ಟಿ., ಪಿಎಸ್ಐ ಶ್ರೀನಿವಾಸ್ ಮತ್ತು ಸಿಬ್ಬಂದಿಯವರಾದ ಜ್ಯೋತಿ, ಸೂರ್ಯಪ್ರಭಾವತಿ, ಮಂಜಪ್ಪ ಬಿ.ಆರ್., ಮಂಜಪ್ಪ, ರವಿಕುಮಾರ್ ಬಿ.ವಿ. ಅವರು ಪತ್ತೆ ಕಾರ್ಯ ಕೈಗೊಂಡು ಆರೋಪಿಗಳಾದ ಶಿವಮ್ಮ, ಲಕ್ಷ್ಮಿ ಅವರನ್ನು ಪಟ್ಟಣದ ರೈಲ್ವೇ ಸ್ಟೇಷನ್ ಬಳಿ ಪತ್ತೆ ಹಚ್ಚಿ ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಾಮಾಚಾರಕ್ಕೆ ಅಪಹರಣ: ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ತಾವು ಹಾಗೂ ಮಹಾಲಕ್ಷ್ಮಿ (ತಲೆಮರೆಸಿಕೊಂಡಿರುತ್ತಾಳೆ) ಎಂಬ ಮತ್ತೊಬ್ಬಳು ಸೇರಿ ನಿಧಿ ಆಸೆಗಾಗಿ ವಾಮಾಚಾರಕ್ಕೆ ಬಲಿ ಕೊಡುವ ಸಲುವಾಗಿ ಮಗುವನ್ನು ಅಪಹರಿಸಿದ್ದೆವೆಂದು ಹೇಳಿಕೆ ನೀಡಿದ್ದಾರೆ.
ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಹಾಗೂ ಅಪಹರಣಕ್ಕೊಳಗಾದ ಮಗುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕ ಎಂ.ಎನ್. ನಾಗರಾಜ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಾಂತರಾಜು ಶ್ಲಾಘನೆ ವ್ಯಕ್ತಪಡಿಸುವ ಮೂಲಕ 10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.