ಮಹಿಳಾ ಸಂಘಟನೆಗಳಿಂದ ಆನಿವಾಳ ಗ್ರಾಪಂ ಮುತ್ತಿಗೆ
ಹೊಸದುರ್ಗ: ತಾಲೂಕಿನ ಕಸಬಾ ಹೋಬಳಿ ಆನಿವಾಳ ಗ್ರಾಮದಲ್ಲಿ ಸೋಮವಾರ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು.
ಆನಿವಾಳ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಹಿಳೆಯರ ಮೇಲೆ ಹಲ್ಲೆ: ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಇದರ ಚಟಕ್ಕೆ ಯುವಕರು, ವಯಸ್ಕರು ಬಲಿಯಾಗಿದ್ದಾರೆ. ಗ್ರಾಮದ ಮನೆಗಳಲ್ಲಿ ನೆಮ್ಮದಿಯಿಲ್ಲದಂತಾಗಿದೆ ಎಂದು ಗ್ರಾಪಂ ಅಧ್ಯಕ್ಷರಿಗೆ ಸ್ತ್ರೀ ಶಕ್ತಿ ಸಂಘದವರು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಕ್ರಮ ಜರುಗಿಸಲಾಗುವುದು: ಮನವಿ ಸ್ವೀಕರಿಸಿದ ಅಧ್ಯಕ್ಷ ಪರಪ್ಪ ಮಾತನಾಡಿ, ಈ ಸಂಬಂಧ ಈ ಕ್ಷಣದಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಓಂಕಾರಪ್ಪ, ಗ್ರಾಪಂ ಸದಸ್ಯರು ಹಾಜರಿದ್ದರು.
ಪ್ರತಿಭಟನೆಯಲ್ಲಿ ಆನಿವಾಳ ಗ್ರಾಮದ ಶಾರದಾ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ಕವಿತಾ, ಮಮತ, ಅಕ್ಕಮಹಾದೇವಿ ಮಹಿಳಾ ಸ್ವಸಹಾಯ ಸಂಘದ ಅನಸೂಯ, ಪುಟ್ಟಮ್ಮ, ಶ್ರೀದೇವಿ ಮಹಿಳಾ ಸ್ವ ಸಹಾಯ ಸಂಘದ ಅನ್ನಪೂರ್ಣ, ಆಶಾ , ದುರ್ಗಾಂಬಿಕಾ ಸಂಘದ ಗಂಗಮ್ಮ ರತ್ನಮ್ಮ, ಗಂಗಾಂಬಿಕ ಸಂಘದ ಮಮತ, ವಿಶಾಲಮ್ಮ, ಶಾಂಭವಿ ಸಂಘದ ರತ್ನಮ್ಮ, ಕಾಂತಮಣಿ, ಕರಿಸಿದ್ದೇಶ್ವರ ಸಂಘದ ಸುಧಾ, ನಿರ್ಮಲ, ಬಸವೇಶ್ವರ ಅಂಗವಿಕಲರ ಸಂಘದ ಕಮಲಾಕ್ಷಿ, ರುಕ್ಮಣಿಯಮ್ಮ ಮತ್ತವರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.