ರು. 5 ಕೋಟಿ ಲಂಚದ ಆರೋಪ: ತನಿಖೆಗೆ ಸಮಿತಿ
ಚಿತ್ರದುರ್ಗ: ಬಸವ ಇಂದಿರಾ ಆವಾಸ್ ಯೋಜನೆಯಲ್ಲಿ ಫಲಾನುಭವಿಗಳಿಗೆ ಮನೆ ನೀಡುವುದಾಗಿ ಭರವಸೆ ನೀಡಿ ಫಲಾನುಭವಿಗಳಿಂದ ತಲಾ ರು. 5 ಸಾವಿರದಿಂದ 15 ಸಾವಿರದವರೆಗೆ ಚಿತ್ರದುರ್ಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಂಚ ಪಡೆದಿದ್ದಾರೆ ಎಂದು ಜಿಪಂ ಸದಸ್ಯ ಜಿ.ಟಿ. ಬಾಬುರೆಡ್ಡಿ ಆರೋಪಿಸಿದರು.
ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಬಾಬುರೆಡ್ಡಿ, ತಾಪಂ ಇಓ ರುದ್ರಮುನಿ ಅವರು 2011-12ರ ಸಾಲಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸಭೆಗಳನ್ನು ನಡೆಸದೆ ತಮ್ಮದೇ ಆದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಅವರಿಂದ ಲಂಚ ಪಡೆದಿದ್ದಾರೆ. ಹೀಗೆ ಪಡೆದ ಲಂಚದ ಮೊತ್ತ ರು. 5 ಕೋಟಿ ಆಗಬಹುದು.
ತಾಲೂಕಿನಲ್ಲಿ ಬಸವ ಇಂದಿರಾ ಆವಾಸ್ ಯೋಜನೆಗಳಡಿ ಒಟ್ಟು 5ರು.00 ಮನೆಗಳನ್ನು ನೀಡಲು ಅವಕಾಶವಿದೆ. ಈ ಯೋಜನೆಯಲ್ಲಿ ಇಂತಹ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಈ ಬಗ್ಗೆ ತನಿಖೆಯಾಗಬೇಕು ಎಂದು ಬಾಬುರೆಡ್ಡಿ ಆಗ್ರಹಿಸಿದಾಗ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷೆ ಬಿ. ಗೀತಾ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ತನಿಖೆ ನಡೆಸಲು ಸಮ್ಮತಿಸಿದರು. ಸಮಿತಿಯಲ್ಲಿ ಉಪಾಧ್ಯಕ್ಷ ದ್ಯಾಮಣ್ಣ, ಮುಖ್ಯ ಯೋಜನಾಧಿಕಾರಿ ಚಂದ್ರಪ್ಪ, ಯೋಜನಾಧಿಕಾರಿ ಲಕ್ಷ್ಮಿನಾರಾಯಣ, ಉಪ ಕಾರ್ಯದರ್ಶಿ ರುದ್ರಪ್ಪ, ಇಬ್ಬರು ಜಿಪಂ ಸದಸ್ಯರನ್ನು ಸೇರಿಸಿ ರಚನೆ ಮಾಡಲಾಯಿತು.
ನೇರ ಆರೋಪ ಸರಿಯಲ್ಲ: ಬಾಬುರೆಡ್ಡಿ ಆರೋಪಕ್ಕೆ ಉತ್ತರಿಸಿದ ಇಓ ರುದ್ರಮುನಿ, ಈ ರೀತಿ ನೇರವಾದ ಆರೋಪ ಮಾಡುವುದು ಸರಿಯಲ್ಲ. 2012ರ ಡಿ.ರು.ರಂದು ನಡೆದ ಜಾಗೃತಿ ಸಮಿತಿ ಸಭೆಯಲ್ಲಿ ಫಲಾನುಭವಿಗಳ ಪಟ್ಟಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಯಾರ ಹತ್ತಿರವೂ ಒಂದು ರುಪಾಯಿ ಸಹ ಪಡೆದಿಲ್ಲ ಎಂದರು.
ಬಾಬುರೆಡ್ಡಿ ಮಾತನಾಡಿ, ತಾವು ಸುಳ್ಳು ಹೇಳುವುದಿಲ್ಲ. ಹಣ ಕೊಟ್ಟಿರುವ ಜನರೇ ತಮ್ಮ ಬಳಿ ದೂರು ಹೇಳಿದ್ದಾರೆ. ಇಓ ಪರವಾಗಿ 4 ಜನರು ಹಣ ವಸೂಲಿ ಮಾಡಿದ್ದಾರೆ. ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ರಾಜಿನಾಮೆ ನೀಡಲೂ ಸಿದ್ಧ ಎಂದು ಸವಾಲು ಹಾಕಿದಾಗ ಇಓ ರುದ್ರಮುನಿ ಅವರೂ ಕೂಡ ತಾವು ತಪ್ಪು ಮಾಡಿದ್ದರೆ ರಾಜಿನಾಮೆ ನೀಡಿ ಮನೆಗೆ ಹೋಗುವುದಾಗಿ ಉತ್ತರಿಸಿದರು.
ಸಿಇಓ ನಾರಾಯಣಸ್ವಾಮಿ ಹೊಸದಾಗಿ ಮತ್ತೆ ಗ್ರಾಮಸಭೆಗಳನ್ನು ನಡೆಸಿ ಅವುಗಳ ಛಾಯಾಚಿತ್ರಗಳು, ವಿಡಿಯೋಗಳನ್ನು ಕಂಪ್ಯೂಟರ್ಗೆ ಅಳವಡಿಸಿ ಕಳುಹಿಸಿಕೊಟ್ಟರೆ ಮಾತ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಅದಕ್ಕಾಗಿ ಈಗ ಮತ್ತೆ ಗ್ರಾಮಸಭೆಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.
ಶೋಕಾಸ್ ನೋಟಿಸ್: ಹಿರಿಯೂರು ತಾಲೂಕು ಹುಚ್ಚವ್ವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದರೂ ಶಾಲೆಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಮಕ್ಕಳು ಕುಡಿಯುವ ನೀರು ಉಪಯೋಗಿಸುತ್ತಿದ್ದಾರೆ ಎಂದು ಸುಳ್ಳು ವರದಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅವರಿಗೆ ಶೋಕಾಸ್ ನೋಟಿಸ್ ನೀಡುವಂತೆ ಸಿಇಓ ನಾರಾಯಣಸ್ವಾಮಿ ಸಭೆಯಲ್ಲಿ ನಿರ್ದೇಶನ ನೀಡಿದರು.
ಚಿತ್ರದುರ್ಗದ ತಿಮ್ಮಣ್ಣನಾಯಕನಕೆರೆಗೆ ರು. 28 ಲಕ್ಷ, ಹಿರಿಯೂರು ತಾಲೂಕು ರಂಗೇನಹಳ್ಳಿ ಕೆರೆಗೆ ರು. 45 ಲಕ್ಷ, ಉಡುವಳ್ಳಿ ಕೆರೆಗೆ ರು. 54 ಲಕ್ಷ, ಗೌನಹಳ್ಳಿ ಕೆರೆಗೆ ರು. 60 ಲಕ್ಷ, ಕಂದಿಕೆರೆ ಕೆರೆಗೆ ರು. 10 ಲಕ್ಷ, ಹೀಗೆ ಒಟ್ಟು ರು. 1.97 ಲಕ್ಷ ಮೀನು ಮರಿಗಳು ಮೀನುಗಾರಿಕೆಗೆ ಲಭ್ಯ ಇವೆ ಎಂದು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಸಭೆಯಲ್ಲಿ ತಿಳಿಸಿದಾಗ ಸಿಇಓ ಅವರು ತಕ್ಷಣ ಮೀನು ಮರಿಗಳನ್ನು ಕೆರೆಗಳಿಗೆ ಬಿಡಬೇಕು ಎಂದು ಸೂಚಿಸಿದರು.
ಯಾವುದೇ ಅಂಗನವಾಡಿ ಕಟ್ಟಡ ನಿರ್ಮಿಸಲು ನಿವೇಶನದ ಕೊರತೆಯಿದೆ ಎಂದು ಹೇಳಲು ಬರುವುದಿಲ್ಲ. ಶಾಲೆಗಳಿರುವ ಪಕ್ಕದಲ್ಲೇ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಅನುಮತಿ ನೀಡಿದೆ. ನಿಗದಿಪಡಿಸಲಾದ ಅವಧಿಯೊಳಗೆ ಕಟ್ಟಡಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದಂಡ ವಿಧಿಸಲಾಗುವುದು ಎಂದು ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ. ಗೀತಾ ವಹಿಸಿದ್ದರು. ಉಪಾಧ್ಯಕ್ಷ ದ್ಯಾಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.