ವಿವಿ ಕಾರ್ಖಾನೆಗೆ ಅಂತಿಮ ಮೊಳೆ ಹೊಡೆದ ಸರ್ಕಾರ
ಹಿರಿಯೂರು: ಮಧ್ಯ ಕರ್ನಾಟಕದ ಹೆಮ್ಮೆಯ ಏಕೈಕ ವಾಣಿವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರ ಆಪೋಷನಕ್ಕೆ ನೀಡಲು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಐನೂರು ಕೋಟಿ ರು.: ಕಾರ್ಮಿಕರ 14.6 ಕೋಟಿ ವೇತನ ಬಾಕಿ ಹಣ ಪಾವತಿ ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ಮೂವತ್ತರಿಂದ ನಲವತ್ತು ಕೋಟಿ ಸಾಲವನ್ನು ತೀರುವಳಿ ಮಾಡುವ ನೆಪವೊಡ್ಡಿ 14 ಸಾವಿರ ಷೇರುದಾರರ, 270 ಎಕರೆ ವಿಸ್ತಾರ ಪ್ರದೇಶವುಳ್ಳ, ಮೂನ್ನೂರರಿಂದ ಐನೂರು ಕೋಟಿ ರು.ಗಳಷ್ಟು ಬೆಲೆಬಾಳುವ ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡಲು ತೀರ್ಮಾನ ಕೈಗೊಂಡಿರುವ ನಿಲುವು ಈಗ ಸಾರ್ವಜನಿಕ ಚರ್ಚೆಗೆ ಎಡೆ ಮಾಡಿದೆ.
ಬಾಕಿ ವೇತನ ಪಾವತಿ: ಕಳೆದ ಜನವರಿ ಮೂವತ್ತರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಕ್ಕೆ ಆಧಾರವಾಗಿ ಹಲವು ಕಾರಣಗಳನ್ನು ಪಟ್ಟಿಮಾಡಿದ್ದು, ಮುಖ್ಯವಾಗಿ ಕಾರ್ಮಿಕರ ಬಾಕಿ ವೇತನ ಪಾವತಿ ಮಾಡಲು ರಾಜ್ಯ ಉಚ್ಚ ನ್ಯಾಯಾಲಯ ನೀಡಿದ್ದ ಆರು ತಿಂಗಳ ಗಡುವನ್ನು ಪ್ರಸ್ತಾಪಿಸಲಾಗಿದೆ.
ಬಾಕಿ ವೇತನ ಪಾವತಿಗೆ ಹಕ್ಕೊತ್ತಾಯ ಮಂಡಿಸಿ ಕಾರ್ಮಿಕ ಒಕ್ಕೂಟ ಸಲ್ಲಿಸಿದ್ದ ಮಧ್ಯಂತರ ಮೇಲ್ಮನವಿಯ ಸಂಬಂಧ ಕೋರ್ಟ್ ನೀಡಿದ್ದ ಆದೇಶದ ಗಡುವು ಮುಂಬರುವ ಮಾರ್ಚ್ ರು.1ಕ್ಕೆ ಮುಗಿಯುವುದರಿಂದ ಈ ತುರ್ತು ನಿರ್ಣಯ ಕೈಗೊಳ್ಳಲಾಗಿದೆಯೆಂದು ಸ್ವಷ್ಟ ಪಡಿಸಲಾಗಿದೆ.
ಸಹಕಾರಿ ಕಾರ್ಖಾನೆ: ಕಬ್ಬು ಅಭಿವೃದ್ಧಿ ನಿಗಮದ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕರ ಪತ್ರಗಳನ್ನು ಉಲ್ಲೇಖಿಸಿ ಇದು ಸಹಕಾರಿ ಕಾರ್ಖಾನೆಯಾಗಿದ್ದು, ಸಾರ್ವಜನಿಕ ವಲಯದ ಕಾರ್ಖಾನೆಯಲ್ಲದಿರುವುದರಿಂದ ಸರ್ಕಾರಕ್ಕೆ ಈ ಕಾರ್ಖಾನೆಯ ಸಮಸ್ಯೆಗಳ ಸಂಬಂಧ ಪ್ರತ್ಯಕ್ಷ ಹಾಗೂ ಪರೋಕ್ಷ ಬದ್ದತೆಯಿಲ್ಲವೆಂದು ಹೇಳಿ, ಸದ್ಯದಲ್ಲಿ ಉದ್ಬವಿಸಿರುವ ಕಾರ್ಮಿಕರ ಬಾಕಿ ವೇತನ ಮತ್ತಿತರ ಸಾಲ ತೀರಿಸುವ ಸಂಬಂಧ ಕಾರ್ಖಾನೆಯನ್ನು ದೀರ್ಘಾವಧಿ ಕಾಲಕ್ಕೆ ಗುತ್ತಿಗೆ ಅಥವಾ ಸ್ಥಿರಾಸ್ಥಿ ಮಾರಾಟ ಮಾಡುವ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆಯೆಂದು ಆದೇಶ ಪತ್ರದಲ್ಲಿ ಅಂತಿಮ ಷರಾ ಬರೆಯುವ ಮೂಲಕ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆಯೆನ್ನುವುದು ಸ್ಪಷ್ಟವಾಗುತ್ತಿದೆ.
ಸಕ್ಕರೆ ಸಚಿವರ ಹೇಳಿಕೆ: ಈ ಸಂಬಂಧ ಕಾರ್ಖಾನೆಯ ಆಸ್ತಿಯ ವ್ಯಾಲ್ಯುಯೇಶನ್ ಅಸೆಸ್ ಮಾಡಿ ಸಾರ್ವಜನಿಕ ಟೆಂಡರ್ ಕರೆದು ಮಾರಾಟ ಮಾಡಲಾಗುವುದೆಂದೂ ಸ್ಪಷ್ಟಪಡಿಸಲಾಗಿದೆ. ಸರ್ಕಾರ ಈ ನಿಲುವು ತಳೆಯಬಹುದೆನ್ನುವುದಕ್ಕೆ ಕಳೆದ ಆರು ತಿಂಗಳ ಹಿಂದೆ ದಾವಣಗೆರೆಯ ಸಮಾರಂಭವೊಂದರಲ್ಲಿ ಸಕ್ಕರೆ ಸಚಿವ ರವೀಂದ್ರನಾಥ್ ನೀಡಿದ್ದ ಹೇಳಿಕೆ ಪುಷ್ಠಿಯೊದಗಿಸಿತ್ತು.
ಆದರೆ ಪರಿಹಾರ ಕ್ರಮಗಳನ್ನು ಕೈಗೊಂಡು ಕಾರ್ಖಾನೆ ಪುನಶ್ಚೇತನಗೊಳಿಸಲಿಕ್ಕೆ ಹತ್ತಾರು ಸಾಧ್ಯತೆಗಳು ಮುಕ್ತವಾಗಿದ್ದರೂ ಕೇವಲ 50 ಕೋಟಿ ರು.ಗಳ ಕಾರ್ಮಿಕರ ಬಾಕಿ ವೇತನ ಮತ್ತು ಬ್ಯಾಂಕುಗಳ ಸಾಲದ ಹೊರೆಯನ್ನೇ ದೊಡ್ಡ ನೆಪವನ್ನಾಗಿಸಿ ಐದು ದಶಕಗಳ ಕಾಲ ಈ ಭಾಗದ ಹೆಮ್ಮೆಯ ಸಹಕಾರಿ ಉದ್ದಿಮೆಯಾಗಿ ಉಳಿದಿದ್ದ ಕಾರ್ಖಾನೆಯನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ಬಲಿ ಹಾಕುತ್ತದೆಯೆಂಬ ದುಸ್ವಪ್ನವನ್ನು ಯಾರೂ ಕಂಡಿರಲಿಲ್ಲ.
ತರಾತುರಿ ತೀರ್ಮಾನ: ಈ ಕಾರಣಕ್ಕಾಗಿಯೇ ಈ ಭಾಗದ ರೈತರು ಮತ್ತು ವಿವಿಧ ಸಂಘಟನೆಗಳು ಸಚಿವ ರವೀಂದ್ರ ನಾಥ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದೇ ಅಂತಿಮವಾಗಿ ಸರ್ಕಾರ ರೈತರ, ಷೇರುದಾರರ ಪರವಾಗಿ ಚಿಂತಿಸಿ ಪುನಶ್ಚೇತನಕ್ಕೆ ಮುಂದಾಗಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡು ಮನವಿ ಪತ್ರ, ಶಾಂತಿಯುತ ಸಭೆ, ಪ್ರತಿಭಟನೆಗಳ ಮೂಲಕವೇ ಹಕ್ಕೊತ್ತಾಯ ಮಂಡಿಸಿದ್ದರು.
ಆದರೆ ಸರ್ಕಾರ ಏಕಾಏಕಿ ತನ್ನ ಅಂತಿಮ ದಿನಗಳಲ್ಲಿ ತರಾತುರಿಯಿಂದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿರುವುದು ಹತ್ತಾರು ಸಂಶಯಗಳಿಗೆ ಎಡೆ ಮಾಡಿ ವಿವಾದ ಭುಗಿಲೇಳಲಿಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.
ಚರ್ಚಿಸಿಲ್ಲ: ಹೆದ್ದಾರಿ ನಿರ್ಮಿಸಲು ಕಾರ್ಖಾನೆ ಜಾಗವನ್ನು ಅತಿಕ್ರಮಿಸಿಕೊಂಡ ಎನ್ಎಚ್ಐಎ ಪ್ರಾಧಿಕಾರದಿಂದ ಬರಬೇಕಾಗಿರುವ 18 ಕೋಟಿ ರು.ಗಳಷ್ಟು ಮೊತ್ತದಿಂದಲೇ ಕಾರ್ಮಿಕರ ಬಾಕಿ ವೇತನ ಪಾವತಿ ಮಾಡಬಹುದಿತ್ತು. ಇನ್ನು 14 ಸಾವಿರ ಷೇರುದಾರರ ಹಣದಿಂದ ಹುಟ್ಟು ಕೊಟ್ಟ ಈ ಉದ್ದಿಮೆಯ ಮಾರಾಟ ಸಂಬಂಧ ಒಂದು ಬಾರಿ ಸಾಮಾನ್ಯ ಸಭೆ ಕರೆದು ಚರ್ಚಿಸ ಬಹುದಿತ್ತು.
ಏಕಪಕ್ಷೀಯ ನಿರ್ಧಾರ: ಆದರೆ ಈ ಯಾವ ಪಾರದರ್ಶಕ ನಡೆಯನ್ನು ನಡೆಯುವ ಗೋಜಿಗೆ ಹೋಗದೆ ನಿರ್ಣಯ ಕೈಗೊಂಡಿರುವುದರಿಂದ ಷೇರುದಾರರ ವಿರುದ್ಧ ಸರ್ಕಾರವೇ ನಿಯಮಗಳನ್ನು ಉಲ್ಲಂಘಿಸಿ ಏಕಪಕ್ಷೀಯವಾಗಿ ನಿರ್ಧಾರ ತಳೆದಿದೆಯೆಂಬ ಆಕ್ರೋಶ ತಾಲೂಕಿನಾದ್ಯಂತ ಮಡುಗಟ್ಟುತ್ತಿದೆ.
ಈ ಸಂಬಂಧ ರೈತ ಸಂಘವೂ ಸೇರಿದಂತೆ ವಿವಿಧ ಸಂಘಟನೆಗಳು ಸರ್ಕಾರದ ವಿರುದ್ಧ ಸಾಂಘಿಕ ಹೋರಾಟ ನಡೆಸುವ ನಿಟ್ಟಿನಲ್ಲಿ ರೂಪುರೇಷೆಗಳ ಬಗ್ಗೆ ಚರ್ಚಿಸಲು ಸಭೆಗಳನ್ನು ಕರೆದಿದ್ದು ಸಾರ್ವಜನಿಕ ಆಕ್ರೋಶ ಸ್ಫೋಟಗೊಳ್ಳಲು ಭೂಮಿಕೆ ಸಿದ್ದಗೊಳ್ಳುತ್ತಿದೆ.
ಒಟ್ಟಾರೆ ಐವತ್ತು ಕೋಟಿ ಹಣಕಾಸಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಐದುನೂರು ಕೋಟಿಗೂ ಹೆಚ್ಚಿನ ಬೆಲೆಬಾಳುವ ಕಾರ್ಖಾನೆಯ ಭೂಮಿ, ಮತ್ತಿತರ ಸ್ಥಿರಾಸ್ತಿಗಳನ್ನು ಹರಾಜು ಹಾಕುವ ನಿರ್ದಾರ ತಳೆದ ಸರ್ಕಾರದ ಕ್ರಮ ವ್ಯಾಪಕ ಟೀಕೆಗೊಳಗಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.