ಕಲಾವಿದೆ ದೇವಿಕಾಗೆ ಕನಕ ಚೇತನ ಪ್ರಶಸ್ತಿ
ಹೊಸದುರ್ಗ: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠವು ಇದೇ ಮೊದಲ ಬಾರಿಗೆ ಸಮಾಜದ ಪ್ರತಿಭಾನ್ವಿತ, ವಿಶಿಷ್ಟ ಸಾಧನೆ ಮಾಡಿದ ಭರತನಾಟ್ಯ ಕಲಾವಿದೆ ದೇವಿಕಾ ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಈಶ್ವರಪ್ಪ ಕನಕ ಚೇತನ ಪ್ರಶಸ್ತಿ ನೀಡಿ ಸನ್ಮಾನಿಸಿದರು. ತಾಲೂಕಿನ ಕೆಲ್ಲೋಡು ಸಮೀಪದ ವೇದಾವತಿ ನದಿ ತಟದಲ್ಲಿರುವ ಬೆಂಗಳೂರು ವಿಭಾಗದ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಹೊಸದುರ್ಗ ಪೀಠದ ದಶಮಾನೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಶ್ರೀ ಈಶ್ವರಾನಂದಪುರಿ ಸ್ವಾಮಿ ತಿಳಿಸಿದರು. ರಾಷ್ಟ್ರ ಮಟ್ಟದಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ಗೋಪಿನಾಥ ನ್ಯಾಸ ಪ್ರಭಾತ್ ಕಲಾವಿದರಿಂದ ನೀಡುವ ಪ್ರಶಸ್ತಿಯನ್ನು ನಾಲ್ಕು ಬಾರಿ ಪಡೆದಿರುವ ಇವರು ಸದ್ಯಕ್ಕೆ ಬೆಂಗಳೂರಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾರೆ.
ಉತ್ತಮ ವಿದ್ಯಾರ್ಥಿನಿಬಿರುದು ಪಡೆದ ರಕ್ಷಾ
ಚಳ್ಳಕೆರೆ: ಪಟ್ಟಣದ ವಾರಿಯರ್ಸ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಎಂ. ರಕ್ಷಾ ಈ ಬಾರಿಯೂ ಶಾಲೆಯ ಉತ್ತಮ ವಿದ್ಯಾರ್ಥಿನಿ ಎಂಬ ಬಿರುದನ್ನು ಪಡೆದಿದ್ದಾಳೆ.
ಕಳೆದ ಬಾರಿಯೂ ಸಹ ಪ್ರಶಸ್ತಿ ಪಡೆದಿದ್ದು, ಶಾಲೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ವಿಚಾರಗಳಲ್ಲಿ ಈ ವಿದ್ಯಾರ್ಥಿನಿ ಉತ್ತಮ ಪ್ರಗತಿಯನ್ನು ಸಾಧಿಸಿದ್ದು, ಅಧ್ಯಾಪಕ ವೃಂದ ಇವಳ ಸಾಧನೆಯನ್ನು ಪ್ರಶಂಸೆ ವ್ಯಕ್ತಪಡಿಸಿದೆ.
ತುಂಡು ಭೂಮಿಯಲ್ಲೇ ಲಕ್ಷಾಂತರ ಆದಾಯ
ಹಿರಿಯೂರು: ತುಂಡು ಭೂಮಿಯೇ ಆದಾಯದ ಮೂಲವಾಗಿದ್ದು ಗುಂಟೆಗಳ ಲೆಕ್ಕದಲ್ಲಿ ಪುಷ್ಪ ಕೃಷಿ ಮಾಡಿರುವ ರೈತರು ಲಕ್ಷಾಂತರ ರು.ಗಳನ್ನು ಸಂಪಾದಿಸಿದ್ದಾರೆಂದು ಪುಷ್ಪ ಕೃಷಿಯ ಪ್ರಗತಿ ಪರ ರೈತ ಸಿದ್ದಪ್ಪ ತಿಳಿಸಿದರು. ತಾಲೂಕಿನ ಸಮುದ್ರದಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಪುಷ್ಪ ಕೃಷಿ ಪಾಠಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕ ಯುವತಿಯರಲ್ಲದೆ ಕೃಷಿ ಮಾಡುತ್ತಿದ್ದ ರೈತರು ಕೆಲಸ ಹುಡುಕಿಕೊಂಡು ನಗರಗಳತ್ತ ವಲಸೆ ಹೊರಟಿದ್ದು, ಬರಡು ಭೂಮಿಯಲ್ಲಿಯೂ ಅಲ್ಪ ನೀರನ್ನು ಬಳಸಿ ಪುಷ್ಪ ಕೃಷಿ ಮಾಡಿದರೇ ಲಾಭ ಕಟ್ಟಿಟ್ಟ ಬುತ್ತಿಯೆನ್ನುವುದನ್ನು ಅವರು ಅರಿಯಬೇಕಿದೆಯೆಂದು ಹೇಳಿದರು. ಕೃಷಿ ಅಧಿಕಾರಿ ಜೈವಂತ್ ಪುಷ್ಪ ಕೃಷಿ ಮಾಡುವ ತಾಂತ್ರಿಕ ವಿಧಾನಗಳನ್ನು ಸಭೆಗೆ ತಿಳಿಸಿದರು. ದೇವರಾಜ್, ಲೋಕೇಶ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.