ತುಂಗಭದ್ರಾ ಹಿನ್ನೀರನ್ನು ಮೊಳಕಾಲ್ಮುರಿಗೆ ಒದಗಿಸಿ
ಮೊಳಕಾಲ್ಮುರು: ತುಂಗಭದ್ರಾ ಹಿನ್ನೀರು ಬಳಸಿಕೊಂಡು ಬರಪೀಡಿತ ಮೊಳಕಾಲ್ಮುರು ತಾಲೂಕಿನ ನಾನಾ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ, ರಾಜ್ಯದಲ್ಲಿಯೇ ಮೊಳಕಾಲ್ಮುರು ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಅಂತರ್ಜಲ ಪಾತಾಳ ಕಂಡಿದೆ. ಜನತೆ ಕುಡಿಯುವ ನೀರಿಗೆ ಸಂಕಷ್ಟ ಪಡುವಂತಾಗಿದೆ ಎಂದರು.
ಸರ್ಕಾರದಿಂದ ನಿರ್ಲಕ್ಷ್ಯ: ಸರ್ಕಾರ ಮೊಳಕಾಲ್ಮುರು ತಾಲೂಕಿನ ಜನತೆಯನ್ನು ನಿರ್ಲಕ್ಷಿಸುತ್ತಿದ್ದು, ಹಿಂದುಳಿದ ಪ್ರದೇಶವನ್ನು ಅಭಿವೃದ್ಧಿಗೊಳಿಸುತ್ತೇವೆಂದು ಹೇಳುವುದನ್ನು ಕೇವಲ ಭಾಷಣಕ್ಕೆ ಮಾತ್ರ ಸೀಮಿತಗೊಳಿಸುತ್ತಿದೆ. ಜನತೆಯ ಕುಡಿಯುವ ನೀರಿನ ಸಂಕಷ್ಟ ನಿವಾರಿಸುವಲ್ಲಿ ವಿಫಲವಾಗುತ್ತಿದೆ ಎಂದು ಆರೋಪಿಸಿದರು.
ರಾಜೀವ್ ಗಾಂಧಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ 11 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಲ್ಲದೆ ಇನ್ನೂ ಯೋಜನೆಯನ್ನು ವಿಸ್ತರಿಸಿ ಬಿಟ್ಟ ಗ್ರಾಮಗಳನ್ನು ಪ್ಲಾನ್‌ನಂತೆ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ಡಾ. ಸ್ವಾಮಿ ಹಾಗೂ ಜಯವಾಣಿ ಯಾದವ್, ರೈತ ಮುಖಂಡರಾದ ನಾಗವೇಣಿ, ಹಕೀಂ ಸಾಬ್, ಮೂಕಪ್ಪ, ಮಾರಣ್ಣ, ಹೊನ್ನೂರ ಸಾಬೀ, ಮುನಾಫ್, ಗೋವಿಂದರೆಡ್ದಿ, ದೊಡ್ಡ ಹನುಮಯ್ಯ, ಕನಕಮೂರ್ತಿ, ಮೊಹನ್ ರೆಡ್ದಿ, ಸುಧಾಕರ್ ರೆಡ್ದಿ, ರಂಗಮ್ಮ, ವಿವಿಧ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.