ಪುರಸಭೆಗೆ ಡಿಸಿ ದಿಢೀರ್ ಭೇಟಿ: ಪರಿಶೀಲನೆ
ಚಳ್ಳಕೆರೆ: ಪಟ್ಟಣದ ಸ್ವಚ್ಛತೆಗಾಗಿ ಹಾಗೂ ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರ ಲಕ್ಷಾಂತರ ಮೌಲ್ಯದ ಕಸಗುಡಿಸುವ, ಕಸಎತ್ತುವ, ನೀರು ಸರಬರಾಜು ಮಾಡುವ ವಾಹನಗಳನ್ನು ನೀಡಿದ್ದರೂ ಇವುಗಳನ್ನು ಸದುಪಯೋಗವಾಡಿಕೊಳ್ಳದೆ ಕಚೇರಿ ಆವರಣದಲ್ಲಿ ಧೂಳು ಹಿಡಿಯುವಂತೆ ನಿಲ್ಲಿಸಿದ್ದಾರೆ. ಅವುಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟಿರುವಿರಾ ಎಂದು ಪುರಸಭೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಇಕ್ಕೇರಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಪಟ್ಟಣದ ಪುರಸಭಾ ಕಾರ್ಯಾಲಯಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕಚೇರಿಯ ಕಂದಾಯ, ಠಪಾಲ್ ಇನ್ನಿತರ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಕಡತಗಳನ್ನು ಪರಿಶೀಲನೆ ಮಾಡಿದರು.
ಹಾರಿಕೆ ಉತ್ತರ: ಪಟ್ಟಣ ವ್ಯಾಪ್ತಿಯಲ್ಲಿ ಬರುವ ಮನೆ ಕಂದಾಯ, ಕುಡಿವ ನೀರಿನ ತೆರಿಗೆ ಫಲಾನುಭವಿಗಳ ಪಟ್ಟಿ ಹಾಗೂ ವಸೂಲಾತಿ ಮತ್ತು ಬಾಕಿ ಇರುವ ಫಲಾನುಭವಿಗಳ ಪಟ್ಟಿ ಕೊಡಿ ಎಂದು ಕಂದಾಯ ನೀರಿಕ್ಷಕರಿಗೆ ಮಾಹಿತಿ ಕೇಳಿದಾಗ, ಅಧಿಕಾರಿ ತಡವರಿಸಿ ಪಟ್ಟಿ ಕರ ವಸೂಲಿಗಾರನ ಬಳಿ ಇದೆ ಎಂಬ ಹಾರಿಕೆ ಉತ್ತರ ನೀಡಿದರು. ಪಟ್ಟಿ ನೀಡದಿದ್ದರೆ ಅಮಾನತು ಮಾಡುವುದಾಗಿ ಹೇಳಿದರು.
ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 40 ವರ್ಷಗಳಿಂದ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದವರು ಖಾತೆ ಮಾಡಿಲ್ಲ. ಕೆಲವರಿಗೆ ಹಕ್ಕು ಪತ್ರ ನೀಡಿದ್ದಾರೆ. ಇನ್ನು ಕೆಲವರು ಕಂದಾಯ ಇಲಾಖೆ ಜಾಗದಲ್ಲಿ ಮನೆಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇಂತಹ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಪುರಭೆಯಿಂದ ಎನ್‌ಒಸಿ ಪತ್ರ ನೀಡುತ್ತಿಲ್ಲ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗೆ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಪುರಸಭೆ ಕಚೇರಿಯ ಕೆಲವು ನಿಬಂಧನೆಗಳ ಮೇಲೆ ವಿದ್ಯುತ್ ಸಂಪರ್ಕ ಪಡೆಯಲು ಎನ್‌ಒಸಿ ನೀಡುವಂತೆ ವ್ಯಸ್ಥಾಪಕರಿಗೆ ಸೂಚಿಸಿದರು.
ಕಾಮಗಾರಿ ಮಾಡುತ್ತಿಲ್ಲ: ಪಟ್ಟಣದಲ್ಲಿ ಅಗತ್ಯವಿಲ್ಲದ ಕಡೆ ಚರಂಡಿಗಳು ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಬಿಲ್ ಪಡೆದ 15 ದಿನದೊಳಗಾಗಿ ಮುಚ್ಚಿ ಹಾಕುತ್ತಾರೆ. ಅಂಬೇಡ್ಕರ್ ನಗರ, ಗಾಂಧಿನರ ಪ್ರದೇಶಗಳು ಕೊಳಚೆ ಪ್ರದೇಶಗಳೆಂಬ ಹಣೆಪಟ್ಟಿ ಕಂಡಿಕೊಂಡರೂ ರಸ್ತೆಗಳಲ್ಲಿ ಕೊಳಚೆ ನೀರು ಹರಿಯುತ್ತವೆ. ಇಂತಹ ಅವಶ್ಯಕತೆ ಇರುವ ಕಡೆ ಕಾಮಗಾರಿಗಳನ್ನು ಮಾಡುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.
ಫಲಾನುಭವಿಗಳಿಗೆ ಶೌಚಾಲಯ ನೀಡುವಲ್ಲಿ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಡಿ.ಕೆ. ಸೋಮಶೇಖರ್ ಹೇಳಿದರು. ಪುರಸಭೆ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಬಂದರೂ ಸ್ವಚ್ಛತೆ ಕಾಪಾಡುವಲ್ಲಿ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ವೇತನ ಪಡೆದು ಸುಮ್ಮನೆ ಕೂರುವುದಲ್ಲ, ಕೆಲಸ ಮಾಡುವಂತೆ ಪುರಸಭೆಯ ಎಲ್ಲಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.