ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಮಠಮಾನ್ಯಗಳಿಗೆ ನೆರವು: ಸಮರ್ಥನೆ

Parashurama
Updated On : 14 Feb 2013, 11:15 am

ಹೊಸದುರ್ಗ: ಜಾತಿಯಲ್ಲಿ ವ್ಯಕ್ತಿ ವೈಭವೀಕರಣವನ್ನು ಬಿಡಬೇಕು. ಜಾತಿ ಸಮಾಜಕ್ಕೆ ಅಂಟಿದ ಶಾಪ. ಸಮಾಜದಲ್ಲಿನ ಶೋಷಿತರ ಪರವಾದ ಧ್ವನಿಯಾಗಿ ನಿಲ್ಲಬೇಕು ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಬುಧವಾರ ತಾಲೂಕಿನ ಕೆಲ್ಲೋಡಿನ ವೇದಾವತಿ ನದಿ ತಟದಲ್ಲಿ ಕನಕ ಗುರು ಪೀಠದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿ, ಜಾತಿ ಜಂಜಾಟದಿಂದ ಹೊರ ಬಂದು ಜಾತ್ಯತೀತವಾಗಿ ಎಲ್ಲ ವರ್ಗದ ಜನರನ್ನು ಪ್ರೀತಿಯಿಂದ ಕಾಣುವ ಶ್ರೀ ಕ್ಷೇತ್ರವಾಗಿ ಕನಕ ಗುರು ಪೀಠ ಹೊರಹೊಮ್ಮಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನೆರವು ನೀಡುವುದರಲ್ಲಿ ತಪ್ಪೇನಿದೆ?: ಮಠಗಳಿಗೆ ನೆರವು ನೀಡುವುದನ್ನು ಸಮರ್ಥಿಸಿಕೊಂಡ ಅವರು, ಸರ್ಕಾರಕ್ಕೆ ಸಹಕಾರಿಯಾಗಿ ಎಲ್ಲರಿಗೂ ಶಿಕ್ಷಣ, ಆರೋಗ್ಯ, ಸಂಸ್ಕಾರ ನೀಡುವಂತಹ ಕೆಲಸಗಳನ್ನು ಮಠಗಳು ಮೊದಲಿನಿಂದಲೂ ಭಕ್ತರ ಸಹಕಾರದಿಂದ ನೆರವೇರಿಸುತ್ತಿರುವಾಗ ಮತ್ತಷ್ಟು ಪ್ರೋತ್ಸಾಹ, ನೆರವು ನೀಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಈ ವಿಚಾರದಲ್ಲಿ ಟೀಕೆಯನ್ನು ಬಿಡಬೇಕು. ಸರ್ವಸಂಗ ತ್ಯಾಗಿಗಳಾಗಿ ಸಮಾಜದ ಏಳ್ಗೆಗೆ ಮಠಗಳನ್ನು ಸ್ಥಾಪಿಸಿ ಕಾಮ ಕ್ರೋಧಗಳನ್ನು ತ್ಯಜಿಸಿ ಸಮಾಜ ಸೇವೆಗೆ ಮುಡಿಪಾಗಿಟ್ಟಿರುವ ಮಠಗಳ ಶಿಕ್ಷಣ ಸೇವೆಗೆ ವಿದ್ಯಾರ್ಥಿ ನಿಲಯ, ಸಾಮೂಹಿಕ ವಿವಾಹಗಳಿಗೆ ಸಮುದಾಯ ಭವನ, ಮತ್ತಿತರ ಸೌಲಭ್ಯಗಳಿಗೆ ಹಣ ನೀಡುವುದಕ್ಕೆ ಸರ್ಕಾರದ ಮುಂದೆ ಬಂದಲ್ಲಿ ದುಪ್ಪಟ್ಟು ಹಣ ನೀಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಮಠಗಳ ಅಭಿವೃದ್ಧಿ ಕಾರ್ಯಗಳಿಗೆ 300 ಕೋಟಿಗೂ ಅಧಿಕ ಹಣ ಬಜೆಟ್‌ನಲ್ಲಿ ಮೀಸಲಿರಿಸಿದರು ಮಠಗಳ ಸಾಮಾಜಿಕ ಅಭಿವೃದ್ಧಿಗೆ ಮಠಗಳಿಂದ ಪ್ರಸ್ತಾವನೆ ಬಂದಲ್ಲಿ ಮತ್ತಷ್ಟು ನೆರವು ನೀಡುವ ಭರವಸೆಯನ್ನು ನೀಡಿದರು.
ಏಕ ಕನಕ ಶಿಲಾ ವಿಗ್ರಹ ಸ್ಥಾಪನೆ: ಪ್ರಾಸ್ತಾವಿಕವಾಗಿ ಮಾತನಾಡಿದ ಕಾಗಿನೆಲೆ ಮಹಾ ಸಂಸ್ಥಾನದ ಆಡಳಿತಾಧಿಕಾರಿ ಬಿ.ಜಿ. ಗೋವಿಂದಪ್ಪ, ರಾಜ್ಯದಲ್ಲಿ ಕಾಗಿನೆಲೆ ಮಹಾ ಸಂಸ್ಥಾನದ ಮಠಗಳ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದೆ. ಎಲ್ಲ ವರ್ಗದ ಜನರ ಸಹಕಾರ ಸೇವೆಗಳಿಂದ ಇಂದು ಕೆಲ್ಲೋಡಿನಲ್ಲಿ ನೂತನ ಕಟ್ಟಡ, ಏಕ ಕನಕ ಶಿಲಾ ವಿಗ್ರಹ ಸ್ಥಾಪನೆಗೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳ ಸ್ಥಾಪನೆ ಮಾಡುವ ಉದ್ದೇಶವಿದ್ದು, ಹಂತಹಂತವಾಗಿ ಅಭಿವೃದ್ಧಿ ಕಾರ್ಯ ನಡೆಸುವ ಉದ್ದೇಶ ಹೊಂದಲಾಗಿದೆ ಎಂದರು.
ಸಮಾರಂಭದಲ್ಲಿ ಶ್ರೀ ಕಾಗಿನೆಲೆ ಶ್ರೀ ಕ್ಷೇತ್ರದ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳ ಸಮ್ಮುಖದಲ್ಲಿ ಧರ್ಮ ಸಭೆ ನಡೆಯಿತು. ಶ್ರೀ ಈಶ್ವರಾನಂದಪುರಿಸ್ವಾಮಿಗಳು, ತಿಂಥಿಣಿ ಶಾಖಾ ಮಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮಿ, ಕೆ.ಆರ್. ನಗರ ಶಿವಾನಂದಪುರಿ ಸ್ವಾಮಿಗಳು, ಭಗೀರಥ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಟಿಗ ಶ್ರೀ ಶಾಂತವೀರ ಸ್ವಾಮಿಗಳು, ಈಡಿಗ ಶ್ರೀ ರೇಣುಕಾನಂದ, ಮಹಾಲಕ್ಷ್ಮೀ ಪೀಠದ ಶ್ರೀ ಜ್ಞಾನಾನಂದಪುರಿ, ಅಭಿನವ ಮಲ್ಲಿಕಾರ್ಜುನ ಸ್ವಾಮಿ ತಮ್ಮಡಿಹಳ್ಳೀ, ಕುಪ್ಪೂರು ಶ್ರೀಗಳು, ಪಾಂಡೋಮಟ್ಟಿ ವಿರಕ್ತ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಧರ್ಮ ಸಭೆಯಲ್ಲಿ  ಮಾಜಿ ಸಚಿವ ವಿಜಯಶಂಕರ್, ಮಾಗಡಿ ರೇವಣ್ಣ, ಶಾಸಕ ರಘುನಾಥರಾವ್ ಮಲ್ಕಾಪುರೆ, ಕೆಪಿಎಸ್‌ಸಿ ನೂತನ ಸದಸ್ಯ ಪಾಟೀಲ್, ಜಿಲ್ಲಾಧಿಕಾರಿ ಇಕ್ಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಎಸ್ಪಿ ನಾಗರಾಜ್, ಕುರುಬ ಸಂಘದ ಮಾಜಿ ಉಪಾಧ್ಯಕ್ಷ ಎಂ.ಹೆಚ್. ಕೃಷ್ಣಮೂರ್ತಿ, ನಿಂಗಪ್ಪ ಭಾಗವಹಿಸಿದ್ದರು. ದೇವಿಕಾ ಪರಮೇಶ್ವರಿ ಅವರಿಂದ ಭರತನಾಟ್ಯ, ಕಡೂರು ಕನಕ ಶ್ರೀ ಮಹಿಳಾ ಸಮಾಜದವರ ವತಿಯಿಂದ ಕೀರ್ತನ ಗಾಯನ ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments