ವಿದ್ಯುತ್ ವ್ಯತ್ಯಯ
ಚಿತ್ರದುರ್ಗ: ಚಿತ್ರದುರ್ಗದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್ 6 ಫೀಢರ್‌ನಲ್ಲಿ ವಿದ್ಯುತ್ ಕಂಬ ಮತ್ತು ವಾಹಕ ಬದಲಿಸುವ ಕೆಲಸವನ್ನು ಶುಕ್ರವಾರ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಜೆಸಿಆರ್ ಬಡಾವಣೆ, ಗೋಪಾಲಪುರ ರಸ್ತೆ, ಮಾರುತಿ ನಗರ, ಬೋವಿ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಪಿ. ಬಸವರಾಜ್ ತಿಳಿಸಿದ್ದಾರೆ.
ಡಿಸಿಸಿಗೆ ಹೆಚ್ಚುವರಿ ಪದಾಧಿಕಾರಿಗಳ ನೇಮಕ
ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಹೆಚ್ಚುವರಿ ಪದಾಧಿಕಾರಿಗಳನ್ನಾಗಿ ನಾಲ್ವರನ್ನು ನೇಮಕಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅನುಮೋದನೆ ನೀಡಿದ್ದಾರೆ. ಉಪಾಧ್ಯಕ್ಷರಾಗಿ ಡಿ.ಟಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರವಣಗೆರೆ ಗೌಡ, ಕಾರ್ಯದರ್ಶಿಗಳಾಗಿ ಓಬಯ್ಯ, ಬಿ.ಎನ್. ಪ್ರಕಾಶ್ ನೇಮಕಗೊಂಡಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಬೋಸರಾಜು ಅವರು ಡಿಸಿಸಿ ಅಧ್ಯಕ್ಷ ಎಂ.ಎ. ಸೇತೂರಾಮ್ ಅವರಿಗೆ ಪತ್ರ ಬರೆದಿದ್ದಾರೆ.
ದನಗಾಯಿಗೆ ಜೇನು ನೊಣ ದಾಳಿ
ಚಳ್ಳಕೆರೆ: ಜಮೀನಿನಲ್ಲಿ ದನಗಳನ್ನು ಮೇಯಿಸುವಾಗ ಜೇನು ನೊಣಗಳ ದಾಳಿಗೆ ವ್ಯಕ್ತಿಯೊಬ್ಬ ತುತ್ತಾಗಿದ್ದಾನೆ.ತಳಕು ಹೋಬಳಿಯ ಓಬಣ್ಣನಹಳ್ಳಿ ಗ್ರಾಮದ ವೆಂಕಟಪ್ಪ (55) ಎಂಬ ವ್ಯಕ್ತಿ ತಮ್ಮ ಬಾಬ್ತು ಜೋಳದ ಹೊಲದಲ್ಲಿ ಮಧ್ಯಾಹ್ನ ದನಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಜೇನುಗೂಡಿಗೆ ಹದ್ದೊಂದು ದಾಳಿ ಮಾಡಿದಾಗ ನೊಣಗಳು ವೆಂಕಟಪ್ಪನನ್ನು ಸುತ್ತುವರೆದು ಇಡೀ ದೇಹವನ್ನೇ ಕಚ್ಚಿವೆ. ಇದರಿಂದ ಕಿರುಚಿಕೊಂಡ ವೆಂಕಟಪ್ಪನ ಸದ್ದು ಕೇಳಿ ಪಕ್ಕದ ಜಮೀನಿನವರು ಬಂದು ಜೇನು ನೊಣಗಳನ್ನು ಓಡಿಸಿದ್ದಾರೆ. ಅಸ್ವಸ್ತಗೊಂಡ ವೆಂಕಟಪ್ಪನನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.