ಬಿಜೆಪಿ ಜಿಲ್ಲಾಧ್ಯಕ್ಷರಿಂದ ಹಲ್ಲೆ: ಕೆಜೆಪಿ ದೂರು
ಕ.ಪ್ರ.ವಾರ್ತೆ ಚಿತ್ರದುರ್ಗ ಮಾ.7
ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ಯಾದವ್ ಅವರು ಕೆಜೆಪಿ ಮುಖಂಡರ ಮೇಲೆ ಹಲ್ಲೆ ನಡೆಸಿರುವ ಘಟನೆ ಗುರುವಾರ ಬೆಳಗ್ಗೆ ನಗರದ ಮದಕರಿ ವೃತ್ತ ಹಾಗೂ ಪ್ರವಾಸಿ ಮಂದಿರದ ಬಳಿ ನಡೆದಿದೆ.
ಮಿನಿ ಮಹಾ ಸಮರ ಎನಿಸಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನದ ದಿನ 6 ನೇ ವಾರ್ಡ್ನ ಮತಗಟ್ಟೆಯ ಸಮೀಪದ ಪ್ರವಾಸಿ ಮಂದಿರದ ಎದುರು ಬೆಳಗ್ಗೆ ಕೆಜೆಪಿ ಮುಖಂಡ ನಾಗರಾಜ್ ಬೇದ್ರೆ ಮತ ಪ್ರಚಾರ ನಡೆಸುತ್ತಿದ್ದರು.
ಆಗ ಅಲ್ಲಿಗೆ ಬಂದ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ಯಾದವ್ ನಾಗರಾಜ್ ಬೇದ್ರೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಜಿ.ಎಂ. ಸುರೇಶ್ ಗಲಾಟೆಯನ್ನು ತಡೆದು ಸಿದ್ದೇಶ್ ಯಾದವ್ ಅವರನ್ನು ಕಳುಹಿಸಿದ್ದಾರೆ.
ಚರ್ಚೆಗೆ ಬನ್ನಿ: ನಾಗರಾಜ್ ಬೇದ್ರೆ ವಿಷಯವನ್ನು ಕೆಜೆಪಿ ಜಿಲ್ಲಾಧ್ಯಕ್ಷ ರಮೇಶ್ ಹಾಗೂ ಮುಖಂಡ ಜಿತೇಂದ್ರ ಅವರಿಗೆ ತಿಳಿಸಿದ್ದಾರೆ.
ನಂತರ ಜಿತೇಂದ್ರ, ನಾಗರಾಜ್ ಬೇದ್ರೆ, ಅಜ್ಮಲ್ ಸೇರಿದಂತೆ ಇತರೆ ಐದು ಜನ ಹಲ್ಲೆ ನಡೆಸಿರುವ ಬಗ್ಗೆ ಪ್ರಶ್ನಿಸಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಜಿ.ಎಂ. ಸುರೇಶ್ ಹಲ್ಲೆ ವಿಷಯವನ್ನು ಹೆಚ್ಚು ಮಾಡುವುದು ಬೇಡ. ಇದನ್ನು ಇಲ್ಲಿಗೇ ಬಿಟ್ಟು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳೋಣ. ಮದಕರಿ ವೃತ್ತದ ಬಳಿ ಬನ್ನಿ ಎಂದು ಹೇಳಿದ ಮಾತಿಗೆ ಒಪ್ಪಿ ಜಿತೇಂದ್ರ, ನಾಗರಾಜ್ ಬೇದ್ರೆ ಮದಕರಿ ವೃತ್ತದ ಬಳಿ ತೆರಳಿದರು.
ಮತ್ತೆ ಹಲ್ಲೆ: ಘಟನೆ ಕುರಿತು ಸಿದ್ದೇಶ್ ಯಾದವ್ ಜೊತೆ ಜಿತೇಂದ್ರ, ನಾಗರಾಜ್ ಬೇದ್ರೆ ಮಾತನಾಡುತ್ತಿದ್ದಾಗ ಹಿಂದಿನಿಂದ ಬಂದ ಸಿದ್ದೇಶ್ ಯಾದವ್ ಕಾರು ಚಾಲಕ ಏಕಾಏಕಿ ಜಿತೇಂದ್ರ ಹಾಗೂ ನಾಗರಾಜ್ ಬೇದ್ರೆ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಮಾತನಾಡುತ್ತಿದ್ದ ಸಿದ್ದೇಶ್ ಯಾದವ್ ಕೂಡ ಮತ್ತೊಮ್ಮೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ನಾಗರಾಜ್ ಬೇದ್ರೆ ಹಾಗೂ ಜಿತೇಂದ್ರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿತೇಂದ್ರ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ಣಯಾದವ್ ಅವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ಯಾದವ್ ಅವರ ವರ್ತನೆ ಹಾಗೂ ಧೋರಣೆಯನ್ನು ತಾಳಲಾರದೆ ಬಿಜೆಪಿಯಲ್ಲಿದ್ದ ಮುಖಂಡರು ಬಿಜೆಪಿಯನ್ನು ತೊರೆದು ಕರ್ನಾಟಕ ಜನತಾ ಪಕ್ಷವನ್ನು ಸೇರುತ್ತಿದ್ದಾರೆ ಎಂದು ನಾಗರಾಜ್ ಬೇದ್ರೆ ಬಿಜೆಪಿ ವರಿಷ್ಠರಲ್ಲಿ ಹೇಳಿರುವುದೇ ಇಂದಿನ ಘಟನೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು, ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.