ಜಗಳೂರು ಪಪಂ ಕಾಂಗ್ರೆಸ್ ಭರ್ಜರಿ ಜಯಭೇರಿ
ಕನ್ನಡಪ್ರಭ ವಾತೆ, ಜಗಳೂರು, ಮಾ.11
ಜಗಳೂರು ಪಟ್ಟಣ ಪಂಚಾಯತಿಯ 15 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದ್ದು, ಆಡಳಿತ ಪಕ್ಷ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ.
ಸೋಮವಾರ ಮತ ಎಣಿಕೆ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಜಯದ ಓಟವೂ ಆರಂಭಗೊಂಡಿತು. ಒಟ್ಟು 11 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ದಾಖಲಿಸಿದರೆ, ಜೆಡಿಎಸ್ 2, ಬಿಜೆಪಿ 1 ಹಾಗೂ ಪಕ್ಷೇತರರ ಒಂದು ವಾರ್ಡ್ನಲ್ಲಿ ಜಯ ಗಳಿಸಿದರು.
ಪ್ರಭಾವಿಗಳಿದ್ದೂ ವಿಫಲ: ಶಾಸಕ ಎಸ್.ವಿ. ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ. ಗುರುಸಿದ್ದನಗೌಡರ ಪ್ರಭಾವ ಹೊಂದಿದ್ದರೂ, ಕೇವಲ ಒಂದೇ ಒಂದು ಸ್ಥಾನದಲ್ಲಿ ಮಾತ್ರ ಬಿಜೆಪಿ ಜಯ ಪಡೆಯಲು ಸಾಧ್ಯವಾಗಿದೆ. ಕಳೆದ ಬಾರಿ 6 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಐದು ಸ್ಥಾನ ಕಳೆದುಕೊಂಡಿದೆ. ಕಳೆದ ಸಲ 4 ಸ್ಥಾನ ಗೆದ್ದಿದ್ದ ಜೆಡಿಎಸ್ ಈ ಬಾರಿ 2 ಸ್ಥಾನಕ್ಕಷ್ಟೇ ತೃಪ್ತಿಪಡಬೇಕಾಯಿತು.
ಕಾಂಗ್ರೆಸ್ ಪಕ್ಷವು 11 ಸ್ಥಾನ ಗೆಲ್ಲುವ ಮೂಲಕ ಆಡಳಿತ ಪಕ್ಷ ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ಧೂಳೀಪಟ ಮಾಡಿದೆ. ಕಳೆದ ಬಾರಿ 5 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಹೆಚ್ಚುವರಿಯಾಗಿ 6 ಸ್ಥಾನ ಗೆದ್ದಿದೆ.
ಕಾಂಗ್ರೆಸ್ ವಶ: ಕಾಂಗ್ರೆಸ್ ಮುಖಂಡರಾದ ಎಚ್.ಪಿ. ರಾಜೇಶ, ದೇವೇಂದ್ರಪ್ಪ, ಕೆ.ಪಿ. ಪಾಲಯ್ಯ, ಕೆಪಿಸಿಸಿ ಸದಸ್ಯ ಪಟೇಲ್ ಕಲ್ಲೇಶರಾಜಗೌಡ, ಬಿಸ್ತುವಳ್ಳಿ ಬಸವರಾಜ ಬಾಬು, ಬ್ಲಾಕ್ ಅಧ್ಯಕ್ಷ ತಿಪ್ಪೇಸ್ವಾಮಿಗೌಡ ಮತ್ತಿತರರ ನೇತೃತ್ವದಲ್ಲಿ ಚುನಾವಣಾ ಅಖಾಡಕ್ಕಿಳಿದ ಕಾಂಗ್ರೆಸ್ ಜಗಳೂರು ಪಪಂ ಕೈ ವಶ ಮಾಡಿಕೊಂಡಿದೆ. ಕೆಜೆಪಿ, ಬಿಎಸ್ಸಾರ್ ಇಲ್ಲಿ ಪ್ರಭಾವ ಬೀರಲಿಲ್ಲ.
ಪಪಂ ಕಾಂಗ್ರೆಸ್ ಕೈ ವಶವಾಗುತ್ತಿದ್ದಂತೆ ಪಟ್ಟಣಧ ಗಾಂಧಿ ವೃತ್ತದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಪಕ್ಷದ ಮುಖಂಡರ ಜೊತೆಗೆ ಪಲ್ಲಾಗಟ್ಟೆ ಶೇಖರಪ್ಪ, ಬಿದರಕೆರೆ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಮತ್ತಿತರರು ಇದ್ದರು. ಸಿಪಿಐ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ತಹಸೀಲ್ದಾರ್ ವೆಂಕಟನಗೌಡ ಆರ್. ಪಾಟೀಲ್ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು.
ಫಲಿತಾಂಶ ದಿಕ್ಸೂಚಿಯಲ್ಲ ಬಿಜೆಪಿ
ಬಿಜೆಪಿ ಮುಖಂಡ, ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಲ್ಲ. ಸ್ಥಳೀಯ ಅಭ್ಯರ್ಥಿಗಳ ಸಾಮರ್ಥ್ಯ, ಜನರೊಂದಿಗೆ ಹೊಂದಿರುವ ಒಡನಾಟದ ಆದಾರದಲ್ಲಿ, 12 ಸಾವಿರ ಮತದಾರರಿಂದ ನಿರ್ಧಾರಿತವಾಗುವ ಚುನಾವಣೆ. ವಿಧಾನಸಭೆ ಫಲಿತಾಂಶವನ್ನು 1.5 ಲಕ್ಷದಷ್ಟು ಮತದಾರರು ನಿರ್ಧರಿಸುತ್ತಾರೆ. ಈಗಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಗಿರುವ ಜನಾದೇಶಕ್ಕೆ ನಾನು ತಲೆ ಬಾಗುತ್ತೇನೆ ಎಂದರು.
ಫಲಿತಾಂಶ ದಿಕ್ಸೂಚಿ ಕಾಂಗ್ರೆಸ್
ಕೆಪಿಸಿಸಿ ಸದಸ್ಯ ಕಲ್ಲೇಶರಾಜ ಪಟೇಲ್ ಮಾತನಾಡಿ, ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ ಇದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.