ಜಿಲ್ಲೆಯ ಅರಣ್ಯ ರಕ್ಷಣೆಗೆ ಪ್ಲಾನ್
ಕ.ಪ್ರ.ವಾರ್ತೆ ಶಿವಮೊಗ್ಗ ಮಾ.16
ಪಶ್ಚಿಮಘಟ್ಟದ ಸಾಲು ಅಪರೂಪದ ಅರಣ್ಯ ಸಂಪತ್ತಿನ ಗಣಿ, ವಿಶಾಲವಾದ ಅರಣ್ಯಹೊಂದಿದ ಖನಿ. ಇಂತಹ ಮೌಲ್ಯಕಟ್ಟಲಾಗದ ಸಂಪತ್ತನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯು ಅರಣ್ಯಕ್ಕಾಗಿಯೇ ಪ್ರತ್ಯೇಕವಾಗಿ ಮಾಸ್ಟರ್ ಪ್ಲಾನ್ ಸಜ್ಜುಮಾಡುತ್ತಿದೆ.
ಯಾವ ಪ್ರದೇಶದಲ್ಲಿ ಅರಣ್ಯ ಚೆನ್ನಾಗಿದೆ, ಎಲ್ಲಿ ಅರಣ್ಯಕ್ಕೆ ಉತ್ತೇಜನ ಬೇಕು, ಎಲ್ಲಿ ಹೊಸದಾಗಿ ಅರಣ್ಯ ಬೆಳೆಸಬೇಕು, ಎಲ್ಲಿ ಅರಣ್ಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ ಎಂಬುದನ್ನು ಅರಿಯುವ ಜೊತೆಗೆ ಇಲ್ಲಿಗೆ ಯೋಜನೆ ರೂಪಿಸುವಾಗ ಆದ್ಯತೆ ನೀಡುವ ಉದ್ದೇಶದಿಂದ ಪ್ಲಾನ್ ಸಿದ್ಧವಾಗುತ್ತಿದೆ.
ಇದರ ಜೊತೆ ಜೊತೆಗೆ ಅರಣ್ಯ ಇಲಾಖೆಯು ಪ್ರತಿ ವರ್ಷ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಇದರ ಸದ್ಭಳಕೆ ಉದ್ದೇಶದಿಂದ ಮಾಸ್ಟರ್ ಪ್ಲಾನ್ ಕೈಯಲ್ಲಿದ್ದರೆ ಅನುದಾನದ ಸದ್ಭಳಕೆ ಸಾದ್ಯವಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್ ಕನ್ನಡಪ್ರಭಕ್ಕೆ ವಿವರಿಸಿದರು.
ಎಸಿಎಫ್ಗೆ ಹೊಣೆ; ಅರಣ್ಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಎಸಿಎಫ್ಗಳೇ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ನೊಗಹೊತ್ತಿದ್ದಾರೆ. ಪ್ರತಿ ಎಸಿಎಫ್ ಅರ್ಧಗಂಟೆಕಾಲ ತಮ್ಮ ಕಾರ್ಯಚಟುವಟಿಕೆಯನ್ನು ಅಧಿಕಾರಿಗಳ ಸಭೆಯಲ್ಲಿ (ಛಾಯಾಚಿತ್ರ ಸಹಿತ- ಪ್ರಸೆಂಟೇಷನ್) ಮಂಡಿಸಲಿದ್ದಾರೆ.
ಅರಣ್ಯ ಸಂರಕ್ಷಣೆಗೆ ಎಸಿಎಫ್ಗಳು ಮಾಡಿದ ಉತ್ತಮ ಕೆಲಸಗಳೂ ಈ ಸಂದರ್ಭದಲ್ಲಿ ಪ್ರಕಟಗೊಳ್ಳುವುದರಿಂದ ಅದು ಇತರ ಅಧಿಕಾರಿಗಳಿಗೂ ಅನುಕೂಲವಾಗುತ್ತದೆ ಎಂಬುದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ವಿವರಣೆ.
ಒಂದು ಉದಾಹರಣೆ ಎಂದರೆ ಶಿವಮೊಗ್ಗ ಜಿಲ್ಲೆಯ ಇಕೋ ಟೂರಿಸಂ ಹೇಗೆ ಅಭಿವೃದ್ಧಿಪಡಿಸಬಹುದು, ಎಲ್ಲೆಲ್ಲಿ ಅವಕಾಶವಿದೆ ಎಂಬ ಅಂಶ ಇಲಾಖೆಗೆ ಒಂದೇ ವೇದಿಕೆಯಲ್ಲಿ ಸಿಕ್ಕಿಹೋಗುತ್ತದೆ. ಅದನ್ನಾಧರಿಸಿ ಮಾದರಿ ಯೋಜನೆ ಸಿದ್ಧಪಡಿಸಲು ಅವಕಾಶವಿದೆ ಎಂಬುದು ಅಧಿಕಾರಿಯ ವಿವರಣೆ. ಇದರೊಟ್ಟಿಗೆ ಎಲ್ಲೆಲ್ಲಿ ಹೆಚ್ಚು ಅರಣ್ಯ ಬೆಳೆಸಲು ಅವಕಾಶವಿದೆ ಎಂಬುದನ್ನು ತಿಳಿದು ಮಾಸ್ಟರ್ ಪ್ಲಾನ್ನಲ್ಲಿ ಯೋಜನೆ ರೂಪಿಸಬಹುದು.
ವಿಪತ್ತು ನಿಧಿ ಕೊಡಿ: ಪ್ರಾಕೃತಿಕವಾಗಿ ಎದುರಾಗುವ ವಿಪತ್ತನ್ನು ನಿರ್ವಹಿಸಲು ಸರ್ಕಾರ ವಿಪತ್ತು ನಿಧಿಯನ್ನು ಸ್ಥಾಪಿಸಿದೆ. ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ವಿವಿಧ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ. ಈ ಹಣವನ್ನು ಕಾಡ್ಗಿಚ್ಚು ಸೇರಿದಂತೆ ಅರಣ್ಯ ಸಂಪತ್ತು ನಷ್ಟವಾಗುವ ಸಂದರ್ಭದಲ್ಲಿ ಬಳಸಿಕೊಳ್ಳಲು ಅವಕಾಶ ಕೊಡುವಂತೆ ಅರಣ್ಯ ಇಲಾಖೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಜಿಲ್ಲಾಡಳಿತ ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ಕೇಳಿದೆ. ಅರಣ್ಯ ವಿಚಾರದಲ್ಲಿ ವಿಪತ್ತು ನಿಧಿಯನ್ನು ಮುಂಚಿತವಾಗಿ ಬಳಸಿಕೊಳ್ಳಲು ಅವಕಾಶ ಕೊಡುವಂತೆಯೂ ಕೋರಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.