ಬಾಲಕಿಯರ ಹಾಸ್ಟೆಲ್ಗೆ ಸಿಇಒ ಭೇಟಿ
ಕ.ಪ್ರ.ವಾರ್ತೆ, ಭರಮಸಾಗರ, ಮಾ.16
ಚಿತ್ರದುರ್ಗ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ ಮತ್ತು ಮುಖ್ಯ ಲೆಕ್ಕಾಧಿಕಾರಿ ಮಹಂತೇಶ್ ತಂಡ ಪಟ್ಟಣದ ವಸತಿ ನಿಲಯಕ್ಕೆ ದಿಡೀರ್ ಭೇಟಿ ನೀಡಿ ಸಮಸ್ಯೆ ಬಗ್ಗೆ ಪರಿಶೀಲಿಸಿದರು.
ಇಲ್ಲಿನ ಬಾಲಕಿಯರ ಸರ್ಕಾರಿ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರ ರಕ್ಷಣೆ ಹಾಗೂ ನಾನಾ ಸೌಲಭ್ಯ ಒದಗಿಸುವಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಅಧ್ಯಯನ ಮಾಡಲು ಶುಕ್ರವಾರ ರಾತ್ರಿ 9 ರ ಸಮಯದಲ್ಲಿ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಮಸ್ಯೆ ಆಲಿಸಿದರು.
ಪ್ಲೋರೈಡ್ಯುಕ್ತ ನೀರು: ಮುರಿದ ಕಿಟಕಿ, ಬಾಗಿಲು, ಸ್ನಾನಗೃಹದ ಅವ್ಯವಸ್ಥೆ, ಅಸಮರ್ಪಕ ಕುಡಿಯುವ ನೀರು ಸರಬರಾಜು ಸಮಸ್ಯೆ, ಪ್ಲೋರೈಡ್ಯುಕ್ತ ಕುಡಿಯುವ ನೀರು ಸೇವಿಸುವ ಅನಿವಾರ್ಯತೆ, ಸ್ವಚ್ಛತೆಯಿಲ್ಲದ ವಾಷ್ ಬೇಸಿನ್, ಸುಣ್ಣ ಬಣ್ಣ ಕಂಡು ಎಷ್ಟೋ ವಷಂವಾಗಿರುವ ಹಾಸ್ಟೆಲ್ ಗೋಡೆ, ವಿತರಣೆಯಾಗದ ಕಾಟ್ಗಳು, ಹೀಗೆ ಹತ್ತು ಹಲವು ಸಮಸ್ಯೆಗಳನ್ನು ವಸತಿ ಶಾಲೆ ವಿದ್ಯಾರ್ಥಿನಿಯರಿಂದ ಕೇಳಿ ತಿಳಿದ ಸಿಎಸ್ ಅವರು ಅವುಗಳ ಪರಿಹಾರಕ್ಕೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.
ಹಾಸ್ಟಲ್ಗೆ ಹೊಸದಾಗಿ ಮಹಿಳಾ ವಾರ್ಡ್ ನೇಮಕ ಮಾಡಲಾಗಿದ್ದು, ಅವರಿಂದ ಮೆನು ಚಾರ್ಟ್ ಆಹಾರ ಪೂರೈಸುತ್ತಿರುವ ಬಗ್ಗೆ ಪರಿಶೀಲಿಸಿದರು. ಇಲ್ಲಿಗೆ ದೊರೆಯುವ ಅನುದಾನದಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ಪೂರೈಸುವಂತೆ ಆದೇಶಿಸಿದರು.
ಸರಿಪಡಿಸಲು ಸೂಚನೆ: ಹಾಸ್ಟೆಲ್ನಲ್ಲಿ ಕೆಟ್ಟುಹೋಗಿರುವ ವಿದ್ಯುತ್ ಸ್ವಿಚ್ಗಳನ್ನು ಹಾಗೂ ಸೋಲಾರ್ ವಾಟರ್ ಹೀಟರ್ ರಿಪೇರಿ ಮಾಡಿಸಲಾಗುವುದು ಎಂದ ಅಧಿಕಾರಿಗಳು ಹಾಸ್ಟೆಲ್ ಕಂಪೌಂಟ್ನಲ್ಲಿ ಕುಸಿದು ಬಿದ್ದಿರುವ ನೀರಿನ ಗುಂಡಿಯನ್ನು ಮುಚ್ಚಿಸಿ ಅಲ್ಲಿರುವ ಅನೈರ್ಮಲ್ಯತೆಯನ್ನು ಗ್ರಾಪಂ ಅನುದಾನದಡಿ ಸರಿಪಡಿಸಬೇಕೆಂದು ಸೇರಿದ್ದ ಗ್ರಾಪಂ ಸದಸ್ಯರಿಗೆ ತಿಳಿಸಿದರು.
ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆಯನ್ನು ಭರಮಸಾಗರ ಸಮುದಾಯ ಕೇಂದ್ರದ ಮಹಿಳಾ ವೈದ್ಯರು ಕಾಲಕಾಲಕ್ಕೆ ನಡೆಸಬೇಕು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೂ ಸೂಚಿಸಲಾಗುವುದು ಎಂದರು.
ಕಠಿಣ ಕ್ರಮ: ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರಿಗೆ ದಿನಚರಿ ಪ್ರಕಾರ ಊಟ ನೀಡದಿರುವ ಬಗ್ಗೆ ಅಥವಾ ಕಳಪೆ ಊಟ ನೀಡಿದ ಬಗ್ಗೆ ದೂರು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ನೆಲ ಮತ್ತು ಗೋಡೆಗಳಿಗೆ ಸೂಕ್ತ ಕ್ಲೀನರ್ ಬಳಸಿ ಸ್ವಚ್ಛಗೊಳಿಸಬೇಕು ಎಂದು ಆದೇಶಿಸಿದರು. ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ನಾಗಭೂಷಣ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಮಂಜುಳಮ್ಮ, ಗ್ರಾಪಂ ಸದಸ್ಯ ಅಶೋಕ್, ಕರವೇ ಹೋಬಳಿ ಘಟಕ ಅಧ್ಯಕ್ಷ ಪ್ರವೀಣ್ ಕುಮಾರ್, ಜಯ ಭಾರತ ರಕ್ಷಣಾ ವೇದಿಕೆ ತಾಲೂಕು ರೈತ ಘಟಕ ಅಧ್ಯಕ್ಷ ಸೂರಪ್ಪ ಮೊದಲಾದವರು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.