ಮಹಿಳೆ ಕೀಳರಿಮೆ ತೊರೆದಾಗ ಸಬಲೀಕರಣ ಸಾಧ್ಯ
ಕ.ಪ್ರ.ವಾರ್ತೆ ಚಿತ್ರದುರ್ಗ ಮಾ.16
ಸ್ತ್ರೀ ಅಂತರಂಗದಲ್ಲಿ ವಿಶಿಷ್ಟ ಶಕ್ತಿ ಇದೆ. ಆ ಶಕ್ತಿಯನ್ನು ಆಕೆಯೇ ಕಂಡುಕೊಂಡಾಗ ಮಾತ್ರ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಡಾ. ಶ್ರೀ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಎಸ್.ಜೆ.ಎಂ. ಮಹಿಳಾ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಸಂಘದ ಆಶ್ರಯದಲ್ಲಿ ಶನಿವಾರ ಯುಜಿಸಿ ಪ್ರಾಯೋಜಕತ್ವದಲ್ಲಿ ಗ್ರಾಮೀಣ ಭಾರತದಲ್ಲಿ ಮಹಿಳಾ ಸಬಲೀಕರಣ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕೀಳರಿಮೆಯಿಂದ ಹೊರಬನ್ನಿ: ಬುದ್ಧ, ಬಸವ, ಗಾಂಧಿ, ಪೈಗಂಬರ್, ಅಂಬೇಡ್ಕರ್ ಇವರೆಲ್ಲರ ಉದ್ದೇಶ ಸಮಸಮಾಜದ ನಿರ್ಮಾಣವಾಗಿತ್ತು. ಲಿಂಗ ತಾರತಮ್ಯ ಇಲ್ಲದ ಸಮಾಜ ಇವರ ಕನಸಾಗಿತ್ತು. ಆದರೆ ಇಂದು ಸ್ತ್ರೀ ಕನಿಷ್ಠ ಎಂಬ ಭಾವನೆ ಬೇರೂರಿದೆ. ಜೊತೆಗೆ ಸ್ತ್ರೀ ಒಳಗಿನ ಕೀಳರಿಮೆ ಈ ಸಮಾಜಿಕ ವ್ಯತ್ಯಾಸಕ್ಕೆ ಕಾರಣವಾಗಿದೆ. ಇದರಿಂದ ಅವರವರೇ ಹೊರಬರುವ ಪ್ರಯತ್ನ ಮಾಡಬೇಕು ಎಂದರು.
ಪುರಷ ಪ್ರಧಾನ: ಆಶಯ ನುಡಿಗಳನ್ನಾಡಿದ ಕುವೆಂಪು ವಿಶ್ವ ವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಜೆ.ಎಸ್. ಸದಾನಂದ ಅವರು ಬದುಕಿಗೆ ಬೇಕಾದ ಅಗತ್ಯವಾದ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ವಾತಾವರಣದ ಸೃಷ್ಟಿಯೇ ನಿಜವಾದ ಸಬಲೀಕರಣ. ದುರಂತವೆಂದರೆ ಮಹಿಳೆಯರ ಬದುಕಿನ ನಿರ್ಧಾರಗಳನ್ನು ಪುರುಷರೇ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಲೋಕಸಭೆಯಲ್ಲಿ ಶೇ.50 ಮೀಸಲಾತಿ ಕೊಟ್ಟ ಕೊಡಲೇ ಸಮಾನತೆ ಸಾಧ್ಯವಾಗುವುದಿಲ್ಲ ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಅಸಮಾನತೆಯಿಂದಾಗಿ ಮಹಿಳಾ ಸ್ವಾಯತ್ತತೆ ಎನ್ನುವುದು ಸಾಧ್ಯವಾಗುತ್ತಿಲ್ಲ. ಮಹಿಳಾ ಸಬಲೀಕರಣ ಎನ್ನುವುದು ಕೇವಲ ಮಹಿಳೆಯರ ಸಮಸ್ಯೆ ಮಾತ್ರವಲ್ಲ, ಪುರುಷರದ್ದೂ ಕೂಡ. ಪರ್ಯಾಯ ವ್ಯವಸ್ಥೆಯನ್ನು ರೂಪಿಸುವ ಶಿಕ್ಷಣದ ಮೂಲಕ ಸ್ವಾಯತ್ತತೆಗೆ ಕಾರಣವಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕಿ ತಾರಿಣಿ ಶುಭದಾಯಿನಿ, ಸಬಲೀಕರಣ ಪರಿಕಲ್ಪನೆಯ ಮೇಲಿನ ಒತ್ತಡ ಬಹಳ ಹೆಚ್ಚಾಗಿದೆ. ಸ್ಟೀರಿಯೋಟೈಪ್ ನಿಲುವನ್ನು ದಾಟಿ ಬರಲು ಸಾಧ್ಯವೇ ಇಲ್ಲವೇನೋ ಎಂಬಂತೆ ಸಬಲೀಕರಣವನ್ನು ಬಿಂಬಿಸಲಾಗುತ್ತಿದೆ. ಮಹಿಳೆಯ ದೇಹವನ್ನು ಕೇಂದ್ರವಾಗಿಸಿಕೊಂಡು ಆ ದೇಹದ ಮೇಲೆ ದೌರ್ಜನ್ಯವೆಸಗುವ ಮೂಲಕ ಮಹಿಳೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಿಕ್ಷಣವೇ ಪರಿಹಾರ: ಅಧ್ಯಕ್ಷತೆ ವಹಿಸಿದ್ದ ಎಸ್.ಜೆ.ಎಂ. ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ. ರಂಗಸ್ವಾಮಿ, ಉನ್ನತ ಶಿಕ್ಷಣವೇ ಎಲ್ಲದಕ್ಕೂ ಪರಿಹಾರ, ಶಿಕ್ಷಣದ ಮೂಲಕ ಮಹಿಳೆ ಆತ್ಮಬಲ ಹೆಚ್ಚಿಸಿಕೊಳ್ಳಬೇಕು ಆ ಮೂಲಕ ಆಕೆ ಸಬಲೆಯಾಗಬೇಕೆಂದು ಕರೆ ನೀಡಿದರು.
ವಿದ್ಯಾಪೀಠದ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ. ವಿರೂಪಾಕ್ಷಪ್ಪ, ಪ್ರೊ. ಚಂದ್ರನಾಯಕ್, ಪ್ರೊ. ತಿಪ್ಪೇಸ್ವಾಮಿ, ಪ್ರೊ. ಕುಸುಗೂರು, ಪ್ರೊ. ಗಂಗಾಧರಮಠ, ಪ್ರೊ. ಆದಪ್ಪಸ್ವಾಮಿ, ಪ್ರೊ. ಗಂಗಾಧರಯ್ಯರನ್ನು ಸನ್ಮಾನಿಸಲಾಯಿತು. ಪ್ರೊ.ಡಿ.ಎಚ್. ಹರೀಶ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಲಾವಣ್ಯ ಪ್ರಾರ್ಥಿಸಿದರು, ಪ್ರೊ.ಎಲ್. ರಾಜಾನಾಯ್ಕ ವಂದಿಸಿದರು, ಪ್ರೊ. ಐ.ಬಿ. ಬಡಿಗೇರ್ ಕಾರ್ಯಕ್ರಮ ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.