ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಮಾನಸಿಕ ರೋಗಿ ಪುನಶ್ಚೇತನ ಕೇಂದ್ರ

Parashurama
Updated On : 17 Mar 2013, 10:53 am

ಕ.ಪ್ರ ವಾರ್ತೆ, ಚಿತ್ರದುರ್ಗ, ಮಾ.16
ಮಾನಸಿಕ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ, ಮಾದಕ ದ್ರವ್ಯ ವ್ಯಸನಿಗಳ ನೆರವಿಗಾಗಿ ಮಾನಸಿಕ ರೋಗಿಗಳ ಪುನಶ್ಚೇತನ ಕೇಂದ್ರಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸ್ಥಾಪಿಸಲಾಗುವುದು ಎಂದು ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆ ಅಧ್ಯಕ್ಷ ಡಾ.ಕೆ.ಎ. ಅಶೋಕ ಪೈ ತಿಳಿಸಿದ್ದಾರೆ.
    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2010ರಲ್ಲಿ ಬೆಂಗಳೂರಿನ ವರದಿಯಂತೆ ಆತ್ಮಹತ್ಯೆ ಮಾಡಿಕೊಂಡ ಬಹುತೇಕರು ಖಿನ್ನತೆ ಮತ್ತು ಮದ್ಯ ವ್ಯಸನಿ, ಮಾದಕ ವಸ್ತುಗಳನ್ನು ಬಳಸುವವರಾಗಿದ್ದರು. ಬೆಂಗಳೂರು ಪ್ರಪಂಚದಲ್ಲಿಯೇ ತಂತ್ರಜ್ಞಾನದಲ್ಲಿ ಹೆಸರು ಮಾಡಿದೆ.
   ಆದರೆ, ಅಷ್ಟೇ ಪ್ರಮಾಣದಲ್ಲಿ ಸಮಸ್ಯೆಯನ್ನು ತಂದಿದೆ. ಆದರೆ, ಅದನ್ನು ಯಾರೂ ಗುರುತಿಸುತ್ತಿಲ್ಲ. ಇಲ್ಲಿ ಕಾರ್ಯಪಡೆ ಇಂತಹ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಡುವ ಕೆಲಸವನ್ನು ಮಾಡುತ್ತಿದೆ. ಸಂಶೋಧನೆಯ ಪ್ರಕಾರ ಮಾನಸಿಕ ಖಾಯಿಲೆಗೆ ಔಷಧಿ ಇದೆ. ಅದನ್ನು ಸರಿಯಾದ ರೀತಿಯಲ್ಲಿ ಪಡೆಯಬೇಕಾಗಿದೆ ಎಂದು ಹೇಳಿದರು.
   ಮನೋ ಶಿಕ್ಷಣದ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಜನಜಾಗೃತಿಯನ್ನು ಮೂಡಿಸುವುದು, ಸಮಾಜದಲ್ಲಿನ ಕಂದಾಚಾರ, ಮೂಢನಂಬಿಕೆಗಳನ್ನು ತೆಗೆಯುವುದರ ಮೂಲಕ ಸ್ವಾಸ್ಥ್ಯ ಮಾನಸಿಕ ಆರೋಗ್ಯದ ಪರಿಕಲ್ಪನೆಯನ್ನು ನೀಡುವುದು ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯ ಮುಖ್ಯ ಉದ್ದೇಶವಾಗಿದೆ.
ಮನೆಯಲ್ಲೇ ಚಿಕಿತ್ಸೆ ಉದ್ದೇಶ; ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 40 ಮನೋವೈದ್ಯರನ್ನು ತರಬೇತಿಗೊಳಿಸಿದರೆ ಅದರಲ್ಲಿ ಶೇ.50ಕ್ಕೂ ಹೆಚ್ಚು ಮಂದಿ ವಿದೇಶಗಳಿಗೆ ವಲಸೆ ಹೋಗುತ್ತಾರೆ.
  ಈಗ ರಾಜ್ಯದಲ್ಲಿ ಮನೋವೈದ್ಯರ ಸಂಖ್ಯೆ 180 ಇದ್ದು, ಈ ಸಮಸ್ಯೆಯನ್ನು ಸರಿಪಡಿಸಲು ಮಾನಸಿಕ ಆರೋಗ್ಯ ಪಡೆಯನ್ನು ಸರ್ಕಾರ ಸ್ಥಾಪಿಸುವುದರ ಜೊತೆಗೆ ಈ ಸಾಲಿನ ಆಯವ್ಯಯದಲ್ಲಿ ಆರ್ಥಿಕ ನೆರವನ್ನು ನೀಡಿದೆ. 15 ಲಕ್ಷ ಜನಸಂಖ್ಯೆ ಇರುವ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಮನೋವೈದ್ಯರಿಲ್ಲ.
   ಮಾನಸಿಕ ರೋಗಿಗಳಿಗೆ ಮನೆಯಂಗಳದಲ್ಲಿಯೇ ಚಿಕಿತ್ಸೆ ನೀಡಬೇಕೆಂಬುದು ಕಾರ್ಯಪಡೆಯ ಮುಖ್ಯ ಉದ್ದೇಶವಾಗಿದೆ ಎಂದರು.
   ಇತ್ತೀಚಿನ ದಿನದಲ್ಲಿ ಸಣ್ಣ ವಿಚಾರಗಳಿಗೆ ಆತ್ಮಹತ್ಯೆಯಂತಹ ವಿಚಾರಗಳು ತಲೆಯಲ್ಲಿ ಮೂಡುತ್ತವೆ. ಇದಲ್ಲದೆ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಕೆಲವು ಅನಿಷ್ಠ ಪದ್ಧತಿ ಆಚರಣೆ ಮಾಡುವ ಮೂಲಕ ಬೇರೆಯವರನ್ನು ಪ್ರೇರೇಪಿಸುತ್ತಿದ್ದಾರೆ. ಪ್ರಕೃತಿಯ ವೈಫಲ್ಯಗಳು, ಬರಗಾಲ, ಅತಿವೃಷ್ಟಿ, ಅನಾವೃಷ್ಟಿ, ಮುಳುಗಡೆ ಪ್ರದೇಶದ ಸಮಸ್ಯೆಗಳು, ಹದಿ ವಯಸ್ಸಿನಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನ, ಹೆಣ್ಣು ಮಕ್ಕಳ ಮೇಲಾಗುವ ಅತ್ಯಾಚಾರ ಪ್ರಕರಣಗಳನ್ನು ತಡೆಯುವ ಹಿನ್ನೆಲೆಯನ್ನು ಕಾರ್ಯಪಡೆ ತನ್ನ ಕೆಲಸವನ್ನು ಮಾಡಲಿದೆ ಎಂದು ಹೇಳಿದರು.
ಲೈಂಗಿಕ ಶಿಕ್ಷಣ: ನಮ್ಮಲ್ಲಿ ಮಡಿವಂತಿಕೆಯಿಂದಾಗಿ ಕೆಲವು ವಿಷಯಗಳನ್ನು ಮಕ್ಕಳಿಗೆ ತಿಳಿಸದೆ ಮುಚ್ಚಿಡುವ ಕೆಲಸ ಮಾಡಲಾಗುತ್ತಿದೆ ಎಂದ ಅವರು, ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಪಠ್ಯ ಪುಸ್ತಕ ತಯಾರಾಗಿದೆ. ಸರ್ಕಾರದ ಅನುಮತಿ ಪಡೆದು ಅದನ್ನು ಅನುಷ್ಠಾನ ಮಾಡಬೇಕಿದೆ ಎಂದರು.
    ಆದರೆ, ಇದಕ್ಕೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇದನ್ನು ಅನುಷ್ಠಾನ ಮಾಡಿದರೆ ಮಕ್ಕಳು ಹಾಳಾಗುತ್ತಾರೆ ಎಂಬುದು ವಿರೋಧಿಸುವವರ ಭಾವನೆ. ಆದರೆ, ಇದರ ಬಗ್ಗೆ ತಿಳಿವಳಿಕೆ ಇಲ್ಲದೆ ಪ್ರತಿ ದಿನ ಅತ್ಯಾಚಾರಗಳು ನಡೆಯುತ್ತಿವೆ. ಇದನ್ನು ತಿಳಿಸುವುದರಿಂದ ಅವುಗಳ ಪ್ರಮಾಣ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರೋತ್ಸಾಹ ಅಗತ್ಯ: ಶಾಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮೂಲಕ ಬುದ್ಧಿಮಾಂದ್ಯ ಮಕ್ಕಳು, ಮೆದುಳು ಪಾರ್ಶ್ವ ರೋಗಿಗಳು ಮತ್ತು ಬಹುಮುಖಿ ಅಂಗವಿಲಕತೆಯಳ್ಳ ರೋಗಿಗಳನ್ನು ನೋಡಿಕೊಳ್ಳುವ ಬಗೆಗೆ ಶಿಕ್ಷಕ, ಶಿಕ್ಷಕಿಯರಿಗೆ ತರಬೇತಿ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳಿಗೆ ಸಾಧನೆಯ ಬದ್ಧತೆ, ಸ್ವಾತಂತ್ರ್ಯ, ಪ್ರೋತ್ಸಾಹ ಸರಿಯಾದ ರೀತಿಯಲ್ಲಿ ದೊರಕಿದಾಗ ಅವರು ಮಾನಸಿಕ ರೋಗಿಗಳಾಗುವುದಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹಾಲಿಂಗಪ್ಪ, ಜಿಲ್ಲಾ ಸರ್ಜನ್ ವಿಜಯಕುಮಾರ್, ಮಾನಸಿಕ ತಜ್ಞರಾದ ಸಂತೋಷ್, ಜಯಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments