ಯೋಗ ಭಾರತ ಕೊಟ್ಟ ಅದ್ಭುತ ಕೊಡುಗೆ
ಕ.ಪ್ರ.ವಾರ್ತೆ ಚಿತ್ರದುರ್ಗ ಮಾ.16
ಸಂಸ್ಕೃತಿ, ಧಾರ್ಮಿಕತೆ, ಯೋಗ, ಧ್ಯಾನ, ಶಾಂತಿ, ಸಹಬಾಳ್ವೆ ಇತ್ಯಾದಿ ವಿಷಯಗಳನ್ನು ಜಗತ್ತಿಗೆ ಕೊಡುಗೆ ನೀಡಿದ ಮಹಾನ್ ರಾಷ್ಟ್ರ ನಮ್ಮದಾಗಿದ್ದು, ನಾವೆಲ್ಲರೂ ಭಾರತದ ಹಿರಿಮೆಯನ್ನು ಎತ್ತಿ ಹಿಡಿಯುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕೆಂದು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಕರೆ ಇತ್ತರು.
ಅದ್ಭುತ ಕೊಡುಗೆ: ಶನಿವಾರ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಸೂರದಾಸ್ ಸ್ವಾಮೀಜಿಯವರ ಶಿಲಾಮಯ ಕಳಸಾರೋಹಣ ಪ್ರತಿಷ್ಠಾಪನೆ ಹಾಗೂ ಧ್ಯಾನ ಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಮಹಾನ್ ಸಾಧಕರಾಗಿದ್ದರು.
ಯೋಗದ ಮೂಲಕ ಎಲ್ಲರನ್ನು ಹತ್ತಿರ ಸೆಳೆಯುತ್ತಿದ್ದರು. ಯೋಗ ಮಾನವ ಜನಾಂಗಕ್ಕೆ ಕೊಟ್ಟಿರುವ ಅದ್ಭುತ ಕೊಡುಗೆಯಾಗಿರುವ ಇದಕ್ಕೆ ಧಾರ್ಮಿಕ ಭಾವನೆ ಜಾಗೃತಗೊಳಿಸುವ ಶಕ್ತಿ ಇದೆ. ಶ್ರೀಗಳು ಕೇವಲ ಯೋಗ, ಧ್ಯಾನ ಈ ವಿಷಯದ ಬಗ್ಗೆಯಲ್ಲದೆ ಅನಾಥ ಮಕ್ಕಳಿಗೆ ಆಶ್ರಯ ನೀಡಿ ಅನ್ನ, ಶಿಕ್ಷಣ ನೀಡುವ ಮೂಲಕ ಅವರ ಬದುಕು ರೂಪಿಸಿಕೊಳ್ಳಲು ದಾರಿ ತೋರಿದಂತಹ ಮಹಾನ್ ಚೇತನವಾಗಿದ್ದರು ಎಂದು ತಿಳಿಸಿದರು.
ಅನುಕರಣೀಯ: ಇದೇ ಸಂದರ್ಭದಲ್ಲಿ ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ ಹೊರತಂದ ದಾನ ಚಿಂತಾಮಣಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅಧ್ಯಕ್ಷರೂ ಆಗಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ತಿರುಕ ನಾಮಾಂಕಿತ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಸಮನ್ವಯ ದೃಷ್ಟಿ ಅನುಕರಣೀಯವಾದದ್ದು.
ರಾಘವೇಂದ್ರ ಶ್ರೀಗಳು ಯಾವುದೇ ಮಠದ ಪೀಠಾಧ್ಯಕ್ಷರಾಗಿರದಿದ್ದರೂ ಬರಿಗೈಯಲ್ಲಿ ಬಂದು ದಾನಿಗಳ ಸಹಕಾರದಿಂದ ಯಾವುದೇ ಜಾತಿ, ಧರ್ಮ, ಮತ ಭೇದವಿಲ್ಲದೆ ಜಾತ್ಯತೀತ ಆಶ್ರಮ ಸ್ಥಾಪಿಸಿ ಸಮಾಜಮುಖಿ ಕೆಲಸ ಮಾಡಿರುವುದು ಶ್ಲಾಘನೀಯವಾದದ್ದು ಎಂದರು.
ಸಹನಾಮೂರ್ತಿ: ಕ್ರೀಡೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸಾಹಸ ಮಾಡಿದವರಂತೆ ಧಾರ್ಮಿಕ ಕ್ಷೇತ್ರದಲ್ಲಿ ಸಾಹಸ ಮಾಡಿದ ಕೀರ್ತಿ ರಾಘವೇಂದ್ರ ಶ್ರೀಗಳಿಗೆ ಸಲ್ಲುತ್ತದೆ. ಶ್ರೀಗಳು ಪಲಾಯನವಾದಿಗಳಾಗದೇ ಧೀರರಲ್ಲಿ ಧೀರರಾಗಿ ಕರುಣೆ, ಮಾನವೀಯತೆ ಸಹನಾಮೂರ್ತಿಗಳಾಗಿ ವಿಶಾಲ ದೃಷ್ಟಿಯಿಂದ ಆಶ್ರಮ ಸ್ಥಾಪಿಸಿ ಲಕ್ಷಾಂತರ ಜನರ ಬದುಕಿಗೆ ದಾರಿದೀಪವಾಗಿದ್ದಾರೆ. ಅವರ ಆದರ್ಶಗಳನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಗದಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮಲ್ಲಾಡಿಹಳ್ಳಿ ಕುಗ್ರಾಮವನ್ನು ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ರಾಘವೇಂದ್ರ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಅವರ ಮತ್ತು ತಮಗಿರುವ ಸಂಬಂಧದ ಕುರಿತಂತೆ ಮಠಗಳ ಸಂಬಂಧ ಕುರಿತಂತೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಲೋಕಸಭಾ ಸದಸ್ಯ ಜನಾರ್ದನ ಸ್ವಾಮಿ ಮಾತನಾಡಿ, ರಾಘವೇಂದ್ರ ಶ್ರೀಗಳ ಆದರ್ಶಗಳು ನಮ್ಮ ಬದುಕಿಗೆ ಮಾರ್ಗದರ್ಶಕವಾಗಿರಲಿ ಎಂದು ಅವರ ಆತ್ಮಕಥೆಯನ್ನು ನಾವು ಪುನಃ ಓದಿದಾಗ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆಯಿಂದ ಸೇವಾ ಕೈಂಕರ್ಯಗೊಂಡು ಸಮಾಜದ ಕಾರ್ಯವನ್ನು ದೇವರ ಕಾರ್ಯ ಎಂಬಂತೆ ಮಾಡಿದರು. ಆಶ್ರಮದ ಚಟುವಟಿಕೆಗಳಿಗೆ ರು.5 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು.
ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಪ್ರೊ.ಜಿ.ಎಸ್. ಮುಡಂಬಡಿತ್ತಾಯ, ಎಚ್.ಸಿ. ಪ್ರಭಾಕರ ನುಡಿನಮನ ಸಲ್ಲಿಸಿದರು. ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಈಶ್ವರಾನಂದ ಪುರಿ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಬಸವಪ್ರಭು ಕೇತೇಶ್ವರ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಾಸಕ ಮಾಡಾಳ್ ವಿರುಪಾಕ್ಷಪ್ಪ,
ಮಾಜಿ ಶಾಸಕ ಮಹಿಮಾ ಪಟೇಲ್, ಎಂ. ಚಂದ್ರಪ್ಪ, ಪಿ. ರಮೇಶ್, ಜೆ.ಎಂ. ಯೋಗಾನಂದ ಮೂರ್ತಿ ಇದ್ದರು. ಕಾರ್ಯಕ್ರಮದ ನಂತರ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪ್ರಸಿದ್ಧ ಸುಗಮ ಸಂಗೀತ ಗಾಯಕ ಶಂಕರ ಶ್ಯಾನಭಾಗ್ ಮತ್ತು ವೃಂದದವರಿಂದ ಭಾವ-ಭಕ್ತಿ ಕಾರ್ಯಕ್ರಮ ನಡೆಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.