'ಕವಿ ಸಮಾಜ ತಿದ್ದುವ ಕೆಲಸ ಮಾಡಲಿ'
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಏ.1
ಕವಿ ಬರಹಗಾರರು ಸಮಾಜದ ತಿದ್ದುವ ರೀತಿಯಲ್ಲಿ ಕಾವ್ಯ ರಚನೆ ಮಾಡಬೇಕೆಂದು ಹಿರಿಯ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಅವರು ಹೇಳಿದರು.
ಅಕ್ಕಮಹಾದೇವಿ ಮಂದಿರದಲ್ಲಿ ಕಸಾಪ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಿಕ್ಷಕ ಮಾಲತೇಶ ಬಬ್ಬಜ್ಜಿ ಅವರ ಮಿಂಚುಹುಳು ಕವನ ಸಂಕಲನದ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕವಿಗಳಲ್ಲಿ ಸಮಾಜಿಕ ಕಳಕಳಿ ಬೆಳಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಾಹಿತಿಗಳಿಗೆ ಗೌರವ ಸಿಗುತ್ತದೆ. ಕವಿಯಾದವನು ಓದುವ ಹವ್ಯಾಸ ಬೆಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಾಹಿತಿ ಚಂದ್ರಕಾತ ಕರದಳ್ಳಿ ಮಾತನಾಡಿ, ಮಿಂಚುಹುಳು ಕವನ ಸಂಕಲನದಲ್ಲಿ ಸಮಾಜ ತಿದ್ದುವ ಕವಿತೆಗಳಿವೆ. ಅನುಭವದಿಂದ ಮೂಡಿಬಂದ ಕವಿತೆಗಳು, ರಾಷ್ಟ್ರ ನಾಯಕ ತತ್ವ ಸಿದ್ದಾಂತಗಳಿವೆ. ಕುಡಿತ, ಶೋಷಣೆ, ಬಂಡಾಯದ ಧ್ವನಿ ಕವಿತೆಗಳಲ್ಲಿ ಅಡಗಿದೆ ಎಂದು ಹೇಳಿದರು.
ಕ್ಷೇತ್ರಶಿಕ್ಷಣಾಧಿಕಾರಿ ಜೆ. ಚವ್ಹಾಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಹಿಂದುಳಿದ ವರ್ಗಗಳ ನೌಕರ ಸಂಘದ ತಾಲೂಕು ಅಧ್ಯಕ್ಷ ಅಮರಪ್ಪ ಹುಸನಗೋಳ, ಲೇಖಕ ಶಿಕ್ಷಕ ಮಾಲತೇಶ ಬಬ್ಬಜ್ಜಿ ಮಾತನಾಡಿದರು.
ಕಸಾಪ ತಾಲುಕು ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಕಾಶಿನಾಥ ಗುತ್ತೇದಾರ ಸ್ವಾಗತಿಸಿದರು. ಶಿವಾನಂದ ಸ್ಥಾವರಮಠ ಪ್ರಸ್ತಾವಿಕ ಮಾತನಾಡಿದರು. ವೀರಸಂಗಪ್ಪ ಸುಲೇಗಾಂವ ನಿರೂಪಿಸಿದರು.