ಬೇಗೆ ಕಚೇರಿಗಿಲ್ಲ ಆದೇಶ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.1
ಬಿಸಿಲಿನ ತಾಪದಿಂದ ಕುದಿಯುವ ಗುಲ್ಬರ್ಗ ಹಾಗೂ ಬೆಳಗಾವಿ ವಿಭಾಗದ 8 ಜಿಲ್ಲೆಗಳ ನೌಕರರಿಗೆ 2 ದಶಕಗಳಿಂದ ಏಪ್ರಿಲ್ ಮತ್ತು ಮೇನಲ್ಲಿ ದೊರಕುತ್ತಿದ್ದ 'ಬೇಗ ಕಚೇರಿ-ಬೇಗ ಮನೆ' ಸವಲತ್ತಿಗೆ ಈ ವರ್ಷ ಸರ್ಕಾರ ಆದೇಶವನ್ನೇ ಹೊರಡಿಸಿಲ್ಲ.
ಪ್ರತಿ ವರ್ಷ ಕೊಡುವ ಸವಲತ್ತನ್ನು ಸರ್ಕಾರ ಕಸಿದು ಕೊಂಡಿದ್ಯಾಕೆ ಎಂಬ ಅಸಮಾಧಾನ ಗುಲ್ಬರ್ಗ ಕಂದಾಯ ವಿಭಾಗದ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ಬೆಳಗಾವಿ ಕಂದಾಯ ವಿಭಾಗದ ಬಾಗಲಕೋಟೆ, ಬಿಜಾಪುರ ಜಿಲ್ಲೆಗಳ 2 ಲಕ್ಷಕ್ಕೂ ಹೆಚ್ಚು ರಾಜ್ಯ ಸರ್ಕಾರಿ ನೌಕರರಲ್ಲಿ ಭುಗಿಲೆದ್ದಿದೆ.
ಈ ಎರಡು ತಿಂಗಳು ಈ ಜಿಲ್ಲೆಗಳಲ್ಲಿ ಕಚೇರಿಯಲ್ಲಿ ಕೂರಲು ಅಸಾಧ್ಯವಾಗುವಷ್ಟು ಬೇಗೆ ಇರುತ್ತದೆ. ಈ ಭಾಗದ ಉರಿ ಬಿಸಿಲಿನ ವಾತಾವರಣದ ಹಿನ್ನೆಲೆಯಲ್ಲಿ 1995ರಿಂದಲೇ ಬೇಸಿಗೆ 2 ತಿಂಗಳು ಕಚೇರಿ ಸಮಯ ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ನಿಗದಿಪಡಿಸುವ ಪದ್ಧತಿ ಜಾರಿಯಲ್ಲಿತ್ತು.
ಅಂದಿನಿಂದ ಅನೂಚಾನವಾಗಿ ಸಾಗಿಕೊಂಡು ಬಂದಿದ್ದ ಪದ್ಧತಿಗೆ ಕಳೆದ ವರ್ಷವೇ ಅರ್ಧಚಂದ್ರ ಪ್ರಯೋಗವಾಗಿತ್ತು. ವಿವಿಧ ಇಲಾಖೆಗಳ ಮುಖ್ಯ, ತುರ್ತು ಕೆಲಸಗಳು ಸಕಾಲದಲ್ಲಿ ನಿರ್ವಹಿಸುವುದು ಕಷ್ಟಸಾಧ್ಯವಾಗುತ್ತಿದೆ. ಅದಕ್ಕೆಂದೇ ಬದಲಾದ ಕಚೇರಿ ಸಮಯ ಯಥಾಸ್ಥಿತಿಗೆ ತರಲಾಗುತ್ತಿದೆ ಎಂದು ಸರ್ಕಾರ ಹೇಳಿತ್ತು. ಈ ವರ್ಷ ಸರ್ಕಾರ ಈ ಸವಲತ್ತಿನ ಮಾತೇ ಎತ್ತಿಲ್ಲ.
ನೌಕರರ ಅಸಮಾಧಾನ: ಈ ಎಂಟು ಜಿಲ್ಲೆಗಳ ಭೌಗೋಳಿಕ ಪರಿಸರದ ಹಿನ್ನೆಲೆಯಲ್ಲಿ ಈ ಕಚೇರಿ ವೇಳೆ ಬದಲಾವಣೆಯನ್ನು ವೈಜ್ಞಾನಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ಹೊರಡಿಸಿತ್ತು. ಈ ಆದೇಶ ಸರ್ಕಾರಿ ನೌಕರರಿಗೆ ನೆಮ್ಮದಿಯನ್ನೂ ನೀಡಿತ್ತು.
ಏಪ್ರಿಲ್, ಮೇ ತಿಂಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿ, ಬೇಸಿಗೆ ಉಪಟಳ ದ್ವಿಗುಣಗೊಳ್ಳುತ್ತದೆ. ಗ್ರಾಮೀಣ ಭಾಗದಲ್ಲಂತೂ ವಿದ್ಯುತ್ ಕೈ ಕೊಡುತ್ತದೆ. ಇನ್ನು ಸರ್ಕಾರಿ ಕಚೇರಿಗಳಲ್ಲಿ ಫ್ಯಾನಿದ್ದರೆ ಬ್ಲೇಡ್ ಇರೋದಿಲ್ಲ, ಬ್ಲೇಡ್ ಇದ್ದರೆ ತಿರುಗೋದಿಲ್ಲ. ಕೆಲವು ಕಚೇರಿಗಳಲ್ಲಿ ಕುಡಿಯಲು ನೀರೂ ಇರೋಲ್ಲ.
2 ವರ್ಷಗಳ ಹಿಂದೆ ವಿವಾದ ಮೊಳಕೆಯೊಡೆದಾಗ ಸರ್ಕಾರ ಕೊನೆ ಗಳಿಗೆಯಲ್ಲಿ ಸಮಯ ಬದಲಾವಣೆ ಸವಲತ್ತು ನೀಡಲಾಗದು ಎಂದು ಕೈ ಅಲ್ಲಾಡಿಸಿತ್ತು. ನೌಕರರ ಹೋರಾಟದ ಫಲವಾಗಿ ಈ ಸವಲತ್ತು ಮರಳಿ ಪಡೆದಿದ್ದರು.
ಕಚೇರಿ ವೇಳೆ ಬದಲಾದರೂ ಜಿಲ್ಲಾಧಿಕಾರಿ, ಎಂಜಿನಿಯರಿಂಗ್ ವಿಭಾಗ ಸೇರಿದಂತೆ ಅನೇಕ ಇಲಾಖೆಗಳಲ್ಲಿ ನೌಕರರು ಇಡೀ ದಿನ ಕಾರ್ಯ ನಿರ್ವಹಿಸುತ್ತಾರೆ. ಆದರೆ ಈ ಬಾರಿ ಯಾಕೆ ಸರ್ಕಾರ ಈ ಬಗ್ಗೆ ಮೌನ ತಾಳಿದೆಯೋ ಎಂಬುದು ನೌಕರರ ಪ್ರಶ್ನೆ.
ಬಿಸಿಲಲ್ಲಿ ಕಚೇರಿಗೆ ಬರುವವರು ಕಮ್ಮಿ: ಕಚೇರಿ ಅವಧಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ಮಾಡಿದಲ್ಲಿ ಕಚೇರಿಗೆ ಬರಲು ನೌಕರರು ಅರ್ಧ ದಿನವನ್ನೇ ಕಳೆಯುತ್ತಾರೆ. ಬಂದು ಟೀ, ನಾಷ್ಟಾ ಎಂದು ಹೊತ್ತು ಕಳೆಯುತ್ತಾರೆ. ಜನರ ಕೆಲಸಗಳೇ ಆಗೋದಿಲ್ಲ ಎಂಬುದು ಒಂದು ವರ್ಗದ ಆರೋಪ.
ಆ ಬಿಸಿಲಲ್ಲಿ ಕಚೇರಿಗೆ ಬರುವ ಜನರ ಸಂಖ್ಯೆಯೂ ಅಷ್ಟಕ್ಕಷ್ಟೆ. ತುರ್ತು ಕೆಲಸದ ವಿಷಯ ಮುಂದೆ ಮಾಡುವ ಸರ್ಕಾರ ಕೆಲವು ಇಲಾಖೆಗಳವರಿಗೆ ಈ ಸಮಯದ ಸವಲತ್ತಿನಿಂದ ಹೊರಗಿಡಬಹುದಲ್ಲ? ಎಲ್ಲರನ್ನೂ ಬಿಸಿಲಿನ ತಾಪಕ್ಕೆ ಒಳಪಡಿಸುವುದು ಅದೆಷ್ಟು ಸಮರ್ಥನೀಯ ಎಂಬುದು ಈ ನೌಕರರ ಪ್ರಶ್ನೆ.
-ಶೇಷಮೂರ್ತಿ ಅವಧಾನಿ