ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಲ್ಲಿ ಜಾತಿ, ಪಕ್ಷಗಳಿಗೆ ನೆಲೆಯಿಲ್ಲ ಬಿಡ್ರಿ...

Lingaraj Badiger
Updated On : 3 Apr 2013, 11:25 am

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.2
ಹಲವು ದಶಕಗಳಿಂದಲೂ ಈ ಕ್ಷೇತ್ರದಲ್ಲಿ ಪಕ್ಷಗಳಿಗೆ ಹಾಗೂ ಜಾತಿಗೆ ನೆಲೆಯಿಲ್ಲವಾಗಿದೆ. ಅಧಿಕಾರ ಗದ್ದುಗೆಯನ್ನು ವ್ಯಕ್ತಿ ವರ್ಚಸ್ಸಿಗೆ ಅನುಸಾರ ಬದಲಾಗುತ್ತಲೇ ಇದೆ. ಇಲ್ಲಿಯ ರಾಜಕೀಯ ಪರಸ್ಪರ ಕಡುವೈರಿಗಳಾಗಿರುವ ಮಾಜಿ ಶಾಸಕ ಬಿ.ಆರ್. ಪಾಟೀಲ್, ಹಾಲಿ ಶಾಸಕ ಸುಭಾಷ ಗುತ್ತೇದಾರ ಅವರ ವ್ಯಕ್ತಿ ವರ್ಚಸ್ಸಿನ ರಾಜಕಾರಣ ಇಲ್ಲಿ ಕೇಂದ್ರೀಕೃತವಾಗಿದೆ. ಹಾಲಿ ವಿಧಾನಸಭಾ ಚುನಾವಣೆಯಲ್ಲೂ ಅದು ಮುಂದುವರೆವ ಲಕ್ಷಣಗಳು ಕಾಣತೊಡಗಿದೆ.  ಈ ಇಬ್ಬರ ಗೆಲವು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಟಿಕೆಟ್ ಪಡೆಯುವುದರ ಮೇಲೂ ಅವಲಂಬಿತವಾಗಿದೆ.
ರಾಜಕೀಯ ಇತಿಹಾಸ: 1993ರಲ್ಲಿ ಕೆಸಿಪಿ ಮೂಲಕ ರಾಜಕೀಯ ಪ್ರವೇಶಿಸಿದ ಸುಭಾಷ ಗುತ್ತೇದಾರ ಅವರು ಬಿ.ಆರ್. ಪಾಟೀಲ್ ವಿರುದ್ಧ ಗೆದ್ದು ಬಂದಿದ್ದರು. 1998ರಲ್ಲೂ ಎರಡನೇ ಬಾರಿಗೆ ಗೆಲವನ್ನು ತಮ್ಮದಾಗಿಸಿಕೊಂಡಿದ್ದರು. ಮೂರನೇ ಬಾರಿಗೆ 2004ರಲ್ಲಿ ಕಾಂಗ್ರೆಸ್‌ನಿಂದ ಸೋಲನ್ನಪ್ಪಿದರೆ, ಜನತಾದಳದಿಂದ ಬಿ.ಆರ್. ಪಾಟೀಲ್ ಚುನಾಯಿತರಾದರು. 1998ರಿಂದ ಕ್ಷೇತ್ರದಲ್ಲಿ ವ್ಯಕ್ತಿ ವರ್ಚಸ್ಸು ಶುರುವಾಯಿತು. ಜಾತಿಯ ಲೆಕ್ಕಾಚಾರದಲ್ಲಿ ಚುನಾವಣೆ ನಡೆದಿದ್ದರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಿ ಶಾಸಕ ಸುಭಾಷ ಗುತ್ತೇದಾರ ಮೂರು ಬಾರಿ ಶಾಸಕರಾಗುವ ಅವಕಾಶವೇ ದೊರೆಯುತ್ತಿರಲಿಲ್ಲ.
ಈಡಿಗ ಸಮುದಾಯಕ್ಕೆ ಸೇರಿರುವ ಗುತ್ತೇದಾರರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಗಮನಿಸಿದರೆ, ಇಲ್ಲಿ ಜಾತಿ ರಾಜಕೀಯಕ್ಕೆ ಮತದಾರ ಬೆಲೆ ಕೊಡುವುದಿಲ್ಲ ಎನ್ನುವುದೇ ಸಾಬೀತಾಗಿದೆ.
ಗಮನ ಸೆಳೆದ ಕಣ: ಜಿಲ್ಲೆಯಲ್ಲಿಯೇ ಆಳಂದ ವಿಧಾನಸಭಾ ಮತಕ್ಷೇತ್ರದ ಚುನಾವಣೆಯು ಕದನ ಕುತೂಹಲ ಕೆರಳಿಸಿದೆ. ಈಗಾಗಲೇ ಜಾತ್ಯಾತಿತ ಜನತಾದಳದ ಹಾಲಿ ಶಾಸಕ ಸುಭಾಷ ಗುತ್ತೇದಾರ ಹಾಗೂ ರಾಜ್ಯ ವಿಧಾನ ಪರಿಷತ್ತಿನ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ್ ಕ್ರಮವಾಗಿ ಜೆಡಿಎಸ್ ಹಾಗೂ ಕೆಜೆಪಿಯಿಂದ ಟಿಕೆಟ್ ಪಡೆದು ಪೈಪೋಟಿಯಿಂದ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಸೋಲೋರ್ಯಾರು?, ಗೆಲ್ಲೋರ್ಯಾರು: ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಎರಡು ಬಾರಿ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದ ರಾಜ್ಯ ವಿಧಾನ ಪರಿಷತ್ತಿನ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ್ ಅವರು ಕೆಜೆಪಿಯಿಂದ ಟಿಕೆಟ್ ಪಡೆಯುವ ಮೂಲಕ ವಿರೋಧಿ ಪಾಳೆಯದಲ್ಲಿ ನಡುಕ ಹುಟ್ಟಿಸಿದ್ದಾರೆ. ಮೂರು ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಹಾಲಿ ಶಾಸಕ ಸುಭಾಷ ಗುತ್ತೇದಾರ ಹಲವರ ಅತೃಪ್ತಿಯ ಮಧ್ಯೆಯೂ ಸಹ ಜೆಡಿಎಸ್ ಟಿಕೆಟ್ ಪಡೆದು ಆಖಾಡಕ್ಕಿಳಿದಿದ್ದಾರೆ.
1994ರ ನಂತರ ನಡೆದ ಚುನಾವಣೆಗಳ ಫಲಿತಾಂಶವನ್ನು ಗಮನಿಸಿದರೆ ಈ ಕ್ಷೇತ್ರದಲ್ಲಿ ಪಕ್ಷಗಳಿಗಿಂತಲೂ ಬಿ.ಆರ್. ಪಾಟೀಲ್ ಹಾಗೂ ಗುತ್ತೇದಾರ ಅವರ ವ್ಯಕ್ತಿಗತ ಪ್ರತಿಷ್ಠೆ ಮೇಲೆ ಚುನಾವಣೆ ನಡೆಯುತ್ತಿದೆ. 1994, 1999, 2004 ಹಾಗೂ 2008ರಲ್ಲಿ ನಡೆದ ಚುನಾವಣೆಗಳಲ್ಲಿ ಮತದಾರರು ಕಾಂಗ್ರೆಸ್ಸೇತರ ಅಭ್ಯರ್ಥಿಗಳನ್ನೇ ಗೆಲ್ಲಿಸಿದ್ದು ಗಮನಾರ್ಹ.
ಅಭ್ಯರ್ಥಿಗಳಿಗೆ ಹುಡುಕಾಟ: ಕಾಂಗ್ರೆಸ್‌ನಿಂದ ಧರ್ಮಸಿಂಗ್ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಪಕ್ಷದ ವರಿಷ್ಠರು ಸಂಸದರಿಗೆ ಹಾಗೂ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ನಿರ್ಧರಿಸಿದ್ದರಿಂದ ಅವರ ಸ್ಪರ್ಧೆ ಸುಳ್ಳಾಗಿಸಿದೆ. ಸಾಕಷ್ಟು ಮಂದಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರೂ, ಅವರಾರೂ ಗೆಲ್ಲುವ ಕುದುರೆಗಳಲ್ಲ ಎಂಬುದು ಪಕ್ಷದ ವರಿಷ್ಠರಿಗೆ ಅರ್ಥವಾಗಿದೆ.
ಜಿಪಂ ಮಾಜಿ ಸದಸ್ಯ ಶಿವರಾಜ ಭಾಸಗಿ, ಜಗನ್ನಾಥ ಶೇಗಜಿ, ಸೂರ್ಯಕಾಂತ ಕೊರಳ್ಳಿ ಮತ್ತಿತರರು ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನ ಮುಂದುವರೆಸಿದ್ದಾರೆ. ಜಿಪಂ ಮಾಜಿ ಸದಸ್ಯ ವೀರಣ್ಣ ಮಂಗಾಣೆ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಬಹುತೇಕ ಖಚಿತವಾಗಿದೆ.
ಇನ್ನು ಬಿಜೆಪಿಯಿಂದ ರಾಜ್ಯ ವಿಧಾನ ಪರಿಷತ್ತಿನ ಸದಸ್ಯ ಅಮರನಾಥ ಪಾಟೀಲ್ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆದಿದೆ. ಸುಮಾರು 40ಕ್ಕಿಂತ ಹೆಚ್ಚು ಅರ್ಜಿಗಳನ್ನು ಬಿಜೆಪಿ ವರಿಷ್ಠರು ಸ್ವೀಕರಿಸಿದ್ದಾರೆ. ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ ಅವರಿಗೆ ಟಿಕೆಟ್ ಕೊಡುವ ಕುರಿತಂತೆ ವರಿಷ್ಠರಿಗೆ ಒಲವು ಇದೆ ಎನ್ನಲಾಗಿದ್ದರೂ, ರಮೇಶ ಲೋಹಾರ ಅಥವಾ ಚಿತ್ತಾಪುರ ಕ್ಷೇತ್ರಕ್ಕೆ ಸೇರಿದ ಮಲ್ಲಿಕಾರ್ಜುನ ಪಾಟೀಲ್‌ರಿಗೆ ಟಿಕೆಟ್ ಕೊಟ್ಟರೂ ಅಚ್ಚರಿಯೇನಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement