ತಪ್ಪದೇ ಮತದಾನ ಮಾಡಲು ಡಿಸಿ ಮನವಿ
ರಾಯಚೂರು: ಜಿಲ್ಲೆಯ ಎಲ್ಲ 7 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಯು ಮೇ.5ರಂದು ನಡೆಯಲಿದ್ದು, ಮತದಾರರು ಸಮ್ಮ ಸಂವಿಧಾನಾತ್ಮಕ ಹಕ್ಕು ತಪ್ಪದೇ ಚಲಾಯಿಸುವಂತೆ ಜಿಲ್ಲಾಧಿಕಾರಿ ಉಜ್ವಲ್ಕುಮಾರ್ ಘೋಷ್ ಮನವಿ ಮಾಡಿದ್ದಾರೆ. ಪ್ರಜಾಪ್ರಭುತ್ವದ ಬಲವರ್ಧನೆಗೆ ಜಿಲ್ಲೆಯ ಎಲ್ಲ ಮತದಾರರು ಸಂವಿಧಾನಾತ್ಮಕವಾಗಿರುವ ಮತದಾನದ ಹಕ್ಕನ್ನು ಕಡ್ಡಾಯವಾಗಿ ಮತ್ತು ತಪ್ಪದೇ ಚಲಾಯಿಸುವುದು ಅವಶ್ಯ. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ವ್ಯಕ್ತಿಗಳ ಹೆಸರು ನೋಂದಣಿಯಾಗುವುದು ಮುಖ್ಯ. ಮತದಾರರು ತಮ್ಮ ಮತ ಗೌಪ್ಯವಾಗಿರುವಂತೆ ನೋಡಿಕೊಳ್ಳಬೇಕು. ಯಾವುದೇ ಆಸೆ, ಆಮಿಷಗಳಿಗೆ ತುತ್ತಾಗದೆ ಮತ ಚಲಾಯಿಸುವಂತೆ ಅವರು ಸಲಹೆ ನೀಡಿದ್ದಾರೆ. ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಕ್ಷಮ್ಯ ಅಪರಾಧ ಮತ್ತು ಶಿಕ್ಷಾರ್ಹ. ಜಿಲ್ಲೆಯ ಸಮಸ್ತ ನಾಗರಿಕರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು, ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಎಲ್ಲ ಅಭ್ಯರ್ಥಿಗಳ ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸುವಂತೆ ಅವರು ಕೋರಿದ್ದಾರೆ.