ದೈನಂದಿನ ಜೀವನಕ್ಕೂ ಬೇಕು ಕಾನೂನು ಅರಿವು: ನ್ಯಾ. ಸತೀಶ್
ಶಹಾಪುರ: ಪ್ರತಿಯೊಬ್ಬರೂ ಕಾನೂನು ತಿಳಿವಳಿಕೆ ಪಡೆಯಬೇಕು. ನಮಗೆ ಕಾನೂನು ಗೊತ್ತಿಲ್ಲವೆಂದರೆ ನಡೆಯದು. ಕಾನೂನು ತಿಳಿದುಕೊಳ್ಳುವುದು ಎಲ್ಲರ ಕರ್ತವ್ಯ ಎನ್ನುವುದನ್ನು ಅರಿಯಬೇಕೆಂದು ನ್ಯಾಯಾಧೀಶರಾದ ಸತೀಶ ಎಸ್.ಟಿ. ಹೇಳಿದರು.
ತಾಲೂಕಿನ ಕಡಕೋಳ ಮಡಿವಾಳೇಶ್ವರದ ಶಾಖಾಮಠದ ಆವರಣದಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದ ನಿಮಿತ್ತ ಕಾನೂನು ಸಾಕ್ಷರತಾ ರಥ ಜಾಥಾದಲ್ಲಿ ಅವರು ಮಾತನಾಡಿದರು.
ಕಾನೂನು ಜ್ಞಾನ ಅವಶ್ಯ: ಕಾನೂನು ಸೇವೆಗಳ ಪ್ರಾಧಿಕಾರವು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ನ್ಯಾಯ ದೊರಕುವುದು ವಿಳಂಬವಾಗಬಾರದು ಎನ್ನುವ ದೃಷ್ಟಿಯಿಂದ ಕಾನೂನು ಅರಿವು ಮತ್ತು ನೆರವು ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ರೈತರು ರಸಗೊಬ್ಬರ ಮತ್ತು ಬೀಜ ಖರೀದಿಸುವಾಗ ಅಧಿಕೃತ ರಸೀದಿ ಪಡೆಯಬೇಕು. ಬಾಲ್ಯ ವಿವಾಹಕ್ಕೆ ಆಸ್ಪದ ನೀಡಬಾರದು. ಹೆಣ್ಣುಮಕ್ಕಳ ಬಗ್ಗೆ ಅಸಭ್ಯವಾಗಿ ವರ್ತಿಸಿದರೆ ಶಿಕ್ಷಿಸಲು ಇನ್ನು ಮುಂದೆ ಕಠಿಣ ಕಾನೂನುಗಳು ಬರುತ್ತವೆ ಎಂದು ತಿಳಿಸಿದರು. ಹಿರಿಯ ನ್ಯಾಯವಾದಿ ಭಾಸ್ಕರರಾವ ಮುಡಬೂಳ, ನಿವೃತ್ತ ತಹಸೀಲ್ದಾರ್ ರಾಮರಡ್ಡಿ ಮಾತನಾಡಿದರು. ನೇತೃತ್ವ ವಹಿಸಿದ ಕಡಕೋಳ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಂಗನಗೌಡ ಚನ್ನಪಟ್ಟಣ, ಬಂಡೆಪ್ಪ ದೊರಿ, ವಕೀಲರಾದ ಶಿವಕುಮಾರ ಗುಬ್ಬಿ, ಸತ್ಯಮ್ಮ ಹೊಸ್ಮನಿ, ಅಂಬರೀಶ, ಉಮೇಶ ಕುಲಕರ್ಣಿ ಇದ್ದರು. ಗ್ರಾಪಂ ಅಧ್ಯಕ್ಷೆ ತಿಮ್ಮವ್ವ ಬೀಮಣ್ಣ ಜಟ್ಟೂರ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಪರಿಷತ್ನ ಅಧ್ಯಕ್ಷ ಶಿವಶರಣ ಹೋತಪೇಟಿ ಪ್ರಾರ್ಥಿಸಿದರು. ವಕೀಲ ಮಲ್ಲಿಕಾರ್ಜುನ ಅಂಗಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.