ಶ್ರೀಶೈಲ ಪಾದಯಾತ್ರೆ ತೆರಳಿದ ಜೇವರ್ಗಿ ಮಹಿಳೆಯ ದುರ್ಮರಣ
ಕನ್ನಡಪ್ರಭ ವಾರ್ತೆ, ಜೇವರ್ಗಿ, ಏ.2
ಶ್ರೀಶೈಲಗೆ ಪಾದಯಾತ್ರೆ ತೆರಳಿದ ಜೇವರ್ಗಿ ಪಟ್ಟಣದ ಮಹಿಳೆಯೊಬ್ಬಳು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
ಪಟ್ಟಣದ ಪಾರ್ವತಿ ಬಸವರಾಜ ಮೋರಟಗಿ (45) ಎಂಬ ಮಹಿಳೆ ಸೊಲ್ಲಾಪುರದಿಂದ ಶ್ರೀಶೈಲ ಕ್ಷೇತ್ರಕ್ಕೆ ಪಾದಯಾತ್ರೆಗೆ ತೆರಳುತ್ತಿದ್ದಾಗ ಆಂಧ್ರಪ್ರದೇಶದ ಕರ್ನೂಲ್ ಬಳಿ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೃತ ಪಟ್ಟು, ಶಿವಮ್ಮ ರದ್ದೇವಾಡಗಿ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಕರ್ನೂಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಸ್ಪರ್ಶ: ಕೃಷಿ ಕಾರ್ಮಿಕ ಸಾವು
ಜೇವರ್ಗಿ: ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ಹೊಲಮೊಂದರಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಕೃಷಿ ಕೂಲಿ ಕಾರ್ಮಿಕನಿಗೆ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲೇ ಮೃತ ಪಟ್ಟ ಘಟನೆ ಸೋಮವಾರ ಸಂಭವಿಸಿದೆ. ಮುತ್ತಪ್ಪ ತಂದೆ ನಾಗಪ್ಪ ಹಸನಾಪುರ (40) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಕಳೆದ ಮೂರು ವರ್ಷಗಳಿಂದ ಡಾ. ಬಿ.ಬಿ. ಬಿಲ್ಲಾರ್ ಎಂಬುವರ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ರಾಮಣ್ಣ ಸಾವಳಗಿ, ಪಿಎಸ್‌ಐ ಸುಧೀರ ಬೆಂಕಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ; ಅಪರಿಚಿತ ಮಹಿಳೆ ಶವ ಪತ್ತೆ
ಜೇವರ್ಗಿ: ತಾಲೂಕಿನ ಹರನೂರ ಗ್ರಾಮದ ಬಳಿ ಸೋಮವಾರ ಅಪರಿಚಿತ ಮಹಿಳೆಯೊಬ್ಬಳ ಶವ ಪತ್ತೆಯಾಗಿದೆ.
ಅಪರಿಚಿತ ಮಹಿಳೆಯ ವಯಸ್ಸು ಅಂದಾಜು 30- 35 ವರ್ಷ ಆಸುಪಾಸು ಇದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತಳ ಮೈಮೇಲೆ ಸ್ವರ್ಣ ಬಣ್ಣದ ಇಲ್‌ಕಲ್ ಸೀರೆ, ಕೆಂಪು ಬಣ್ಣದ ರವಿಕೆ ತೊಟ್ಟಿದ್ದು, ಗೋದಿ ಬಣ್ಣ ಹೊಂದಿದ್ದ ಮಹಿಳೆ ಗುರುತು ಇದ್ದು, ಸಂಬಂಧಿಕರು ಹೆಚ್ಚಿನ ಮಾಹಿತಿಗೆ ಜೇವರ್ಗಿ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಸಿಪಿಐ ರಾಮಣ್ಣ ಸಾವಳಗಿ ತಿಳಿಸಿದ್ದಾರೆ.