ನಮೋಶಿ ಗರಂ, ನೌಕರರು ನರಂ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.3
ಆರನೇ ವೇತನ ಶ್ರೇಣಿ ಜಾರಿಗೊಳಿಸಬೇಕು, ಅನುಕಂಪದ ನೌಕರಿ ಕೊಡಬೇಕು, ಗಳಿಕೆ ರಜೆ ನಗದೀಕರಣ ಸೌಕರ್ಯ ಬೇಕೇ ಬೇಕು ಎಂಬುದು ಸೇರಿದಂತೆ 9 ವಿವಿಧ ಬೇಡಿಕೆ ಈಡೇರಿಕೆಗಾಗಿ ಇಲ್ಲಿನ ಹೈಕಶಿ ಸಂಸ್ಥೆ ರಾಂಪುರೆ ವೈದ್ಯ ವಿದ್ಯಾಲಯದ 180 ಬೋಧಕೇತರ ನೌಕರರು ಸತತ 6 ದಿನಗಳ ಕಾಲ ನಡೆಸಿದ್ದ ಮುಷ್ಕರ ಕೊನೆಗೂ ನಿರೀಕ್ಷಿತ ಫಲ ನೀಡಲಿಲ್ಲ.
ಕೋಲು ಮುರಿಯಲಿಲ್ಲ, ಹಾವೂ ಸಾಯಲಿಲ್ಲ.. ಎಂಬತಾಯ್ತು ಬೋಧಕೇತರ ನೌಕರರ ಮುಷ್ಕರ. ಇವರ 9 ಬೇಡಿಕೆಗಳ ಪೈಕಿ ಒಂದೂ ತಕ್ಷಣಕ್ಕೆ ಈಡೇರದೆ ಹೋದರೂ ಮುಷ್ಕರ ಕೈಬಿಟ್ಟು ಎಲ್ಲರೂ ಕೆಲಸಕ್ಕೆ ಹಾಜರಾಗಿದ್ದಾರೆ.
ಗಟ್ಟಿ ನಿಲುವು: ಮುಷ್ಕರ ಆರಂಭಿಸದ ನಂತರ ಸ್ಥಳಕ್ಕೆ ಬಂದ ಹೈಕಶಿ ಅಧ್ಯಕ್ಷ ನಮೋಶಿ ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಹೀಗಿದ್ದರೂ ಬೋಧಕೇತರರು ತಮ್ಮ ಮುಷ್ಕರ ವಾಪಸ್ ಪಡೆದರು. ನಿಜಾರ್ಥದಲ್ಲಿ ಮುಷ್ಕರ ಇನ್ನೂ ತೀವ್ರ ಸ್ವರೂಪ ತಾಳಬೇಕಿತ್ತು. ಆದರೆ ಮುಷ್ಕರವನ್ನು ದಿಢೀರನೇ ಯಾಕೆ ಹಿಂಪಡೆಯಲಾಯ್ತೋ ಎಂದು ನೌಕರರ ಸಂಘದಲ್ಲೇ ಆಡಿಕೊಳ್ಳಲಾಗುತ್ತಿದೆ.
ಕೆರಳಿದ್ರು ನಮೋಶಿ: ಮೂಲಗಳ ಪ್ರಕಾರ- ರಾಂಪುರೆ ವೈದ್ಯ ವಿದ್ಯಾಲಯದ ಬೋಧಕೇತರ ಸಿಬ್ಬಂದಿ ನಡೆಸಿದ್ದ ಮುಷ್ಕರದಿಂದ ನಮೋಶಿ ತೀವ್ರ ಇಕ್ಕಟ್ಟಿಗೆ ಸಿಲುಕುವಂತಾಗಿತ್ತು. ಅಲ್ಲದೆ ಎಲೆಕ್ಷನ್ ಸಂದರ್ಭವಾಗಿದ್ದರಿಂದ ಅವರ ರಾಜಕೀಯ ವಿರೋಧಿಗಳೂ ಈ ಬಿಕ್ಕಟ್ಟಿನ ಲಾಭ ಪಡೆಯುವ ಹವಣಿಕೆಯಲ್ಲಿದ್ದರು.
ಮುಷ್ಕರದ ಸ್ಥಳಕ್ಕೆ ಕಾಂತಾ, ದತ್ತು ಪಾಟೀಲ್, ಕೈಲಾಸ ಪಾಟೀಲ್ ಇತರರು ಬಂದು ಬೆಂಬಲ ಸೂಚಿಸಿದ್ದರಿಂದ ನಮೋಶಿ ಒಳಗೊಳಗೆ ಗರಂ ಆಗಿದ್ದರಲ್ಲದೆ ಮುಷ್ಕರ ನಿರತರ ಬೇಡಿಕೆಗಳಿಗೆ ಸೊಪ್ಪು ಹಾಕಬಾರದು, ತಮ್ಮ ಮೊದಲಿನ ನಿಲುವು ಯಾವ ಕಾರಣಕ್ಕೂ ಬಿಡಬಾರದೆಂದು ಆಗಲೇ ನಿರ್ಧರಿಸಿದ್ದರು ಎನ್ನಲಾಗಿದೆ.
ಬಸವೇಶ್ವರ ಸಿಬ್ಬಂದಿ ಬಳಕೆ ಚಿಂತನೆ: ಬೋಧಕೇತರ ಸಿಬ್ಬಂದಿ ಮುಷ್ಕರದಿಂದ ವೈದ್ಯ ವಿದ್ಯಾಲಯದ ಕೆಲಸಗಳೇ ಸ್ಥಗಿತಗೊಂಡಿದ್ದವು. ವೈದ್ಯ ವಿದ್ಯಾರ್ಥಿಗಳು ಪರದಾಡುತ್ತಿದ್ದರು. ಅದಕ್ಕಾಗೇ ನಮೋಶಿಯವರು ಶನಿವಾರ ಸಂಸ್ಥೆಯ ಆಡಳಿತ ಮಂಡಳಿಯ ತುರ್ತು ಸಭೆ ಕರೆದು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿವರಿಸುವ ಮೂಲಕ ತಾವು ಮುಷ್ಕರದ ಹಿನ್ನೆಲೆಯಲ್ಲಿ ಕೈಗೊಳ್ಳುವ ನಿರ್ಣಯಕ್ಕೆ ಬೆಂಬಲ ಕೋರಿದ್ದರು. ಇದಕ್ಕೆ ಬಹುತೇಕರು 'ಮೌನ ಸಮ್ಮತಿ' ನೀಡಿದ್ದರು ಎನ್ನಲಾಗಿದೆ.
ಆದ್ದರಿಂದ ನಮೋಶಿಯವರು ಎಂದಿನಂತೆ 2013ರ ಏಪ್ರಿಲ್‌ನಿಂದ 6ನೇ ವೇತನ ಶ್ರೇಣಿ ಜಾರಿಗೊಳಿಸಿ ಹಣವನ್ನು ಆಗಸ್ಟ್ ನಂತರವೇ ನೌಕರರಿಗೆ ನೀಡುವುದು ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಈ ನಿಲುವನ್ನು ಮುಷ್ಕರದ ಮೊದಲ ದಿನವೇ ನಮೋಶಿ ಪ್ರಕಟಿಸಿದ್ದರು.
ನೌಕರರು ನಮೋಶಿಯವರ ಈ ನಿಲುವನ್ನು ಒಪ್ಪಿಕೊಂಡು ಮುಷ್ಕರ ಮುಗಿಸುವುದಿದ್ದಲ್ಲಿ 6 ದಿನಗಳವರೆಗೆ ಎಳೆದುಕೊಂಡು ಹೋಗಿ ವೈದ್ಯ ವಿದ್ಯಾರ್ಥಿಗಳಿಗೆ ತೊಂದರೆ ಮಾಡುವ ಅಗತ್ಯವೇ ಇರಲಿಲ್ಲ. ಆದಾಗ್ಯೂ ಮುಷ್ಕರದ ವಿಚಾರದಲ್ಲಿ ಬೋಧಕೇತರ ನೌಕರರ ಸಂಘ ಎಡವಿದ್ದಂತೂ ಸ್ಪಷ್ಟ. ಕೊನೆಗೂ ಇಲ್ಲಿ ಆಡಳಿತ ಮಂಡಳಿಯೇ ಗೆಲವು ಸಾಧಿಸಿದ್ದು ಸ್ಪಷ್ಟ ಎಂದು ಬೋಧಕೇತರರ ನೌಕರರೇ ಹೇಳುತ್ತಿದ್ದಾರೆ.
ಮುಷ್ಕರ ಮೂರಾಬಟ್ಟೆ: ವೇತನ ಶ್ರೇಣಿಯ ಜೊತೆಗೇ ನೌಕರರು ಕೆಸಿಎಸ್‌ಆರ್ ನೀತಿಯನ್ವಯ ಸಂಸ್ಥೆಯಲ್ಲಿ ಸವಲತ್ತು ಕೊಡಬೇಕೆಂಬ ಮಹತ್ವದ ಬೇಡಿಕೆ ಹೊಂದಿದ್ದರು. ಇದಕ್ಕೂ ಹೈಕಶಿ ಸಂಸ್ಥೆ ಆಡಳಿತ ಮಂಡಳಿ ಸೊಪ್ಪು ಹಾಕಿಲ್ಲ ಸಂಸ್ಥೆಯ ಬೋಧಕೇತರರೆಲ್ಲ ಈ ವಿಚಾರದಲ್ಲಿ ಒಂದಾಗಿದ್ದಾರೆ. ಇನ್ನೇನು ಮುಷ್ಕರ ಗಂಭೀರ ಸ್ವರೂಪ ತಾಳುತ್ತದೆ ಎಂಬ ಸಂಕೇತಗಳಿದ್ದಾಗಲೇ ದಿಢೀರನೆ ಮುಷ್ಕರ ಕೈಬಿಡಲ್ಪಟ್ಟು ಹಲವರ ಹುಬ್ಬು ಮೇಲೇರುವಂತೆ ಮಾಡಿದ್ದು ವಾಸ್ತವ.
ಹೈಕಶಿ ಸಂಸ್ಥೆಯಲ್ಲಿ 6ನೇ ವೇತನ ಶ್ರೇಣಿ ಜಾರಿಗೊಳಿಸುವ ವಿಚಾರವಾಗಿ ಬೋಧಕ, ಬೋಧಕೇತರ ನೌಕರರ ಮಧ್ಯೆ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಪಿಡಿಎ ಎಂಜಿನಿಯರಿಂಗ್ ಕಾಲೇಜು ಪ್ರಕರಣದಿಂದಲೂ ತೀವ್ರ ವಿವಾದಕ್ಕೆ ಗುರಿಯಾದ ವಿಚಾರ.
ರಾಂಪುರೆ ವೈದ್ಯ ವಿದ್ಯಾಲಯದ ಪ್ರಕರಣದಲ್ಲಂತೂ ನೌಕರರು ಮುಷ್ಕರಕ್ಕಿಳಿದು ಆಕ್ಷೇಪಿಸಿದ್ದರು. ನಿದಾನವಾಗಿ ನೌಕರರ ಪರ ಬೆಂಬಲ ಮಹಾಪುರ ಸೃಷ್ಟಿಯಾಗುತ್ತಿದೆ ಎಂಬುದನ್ನರಿತ ಆಗ್ಳಿತ ಮಂಡಳಿ ನೌಕರ ಸಂಘಟನೆಯನ್ನೇ ಒಡೆಯುವಲ್ಲಿ ಯತ್ನಿಸಿತ್ತು. ಇದೇ ಮುಷ್ಕರ ಮೂರಾಬಟ್ಟೆಯಾಗಲು ಕಾರಣವಾಯ್ತು ಎನ್ನಲಾಗುತ್ತಿದೆ.
ಸಹಾನುಭೂತಿ ಮುಳುವಾಯ್ತೆ?
ಮುಷ್ಕರಕ್ಕೆ ಸ್ಥಳೀಯವಾಗಿ ಜೆಡಿಎಸ್‌ನ ದತ್ತಾತ್ರೇಯ ಪಾಟೀಲ್, ಕಾಂಗ್ರೆಸ್‌ನ ಕೈಲಾಸ ಪಾಟೀಲ್, ಕೆಜೆಪಿಯ ಎಸ್.ಕೆ. ಕಾಂತಾ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೆ ನೌಕರರ ಬೇಡಿಕೆ ನ್ಯಾಯಸಮ್ಮತವಾಗಿದ್ದು ಸಂಸ್ಥೆ ಆಡಳಿತ ವರ್ಗ ತಕ್ಷಣ ಈಡೇರಿಸಬೇಕೆಂದು ಆಗ್ರಹಿಸಿದ್ದರು. ಅಸೆಂಬ್ಲಿ ಚುನಾವಣೆಯ ಈ ಅವಧಿಯಲ್ಲಿ ಸಂಸ್ಥೆಯ ಅಧ್ಯಕ್ಷ ನಮೋಶಿ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿ. ನೌಕರರ ಮುಷ್ಕರಕ್ಕೆ ಸಹಾನುಭೂತಿ ತೋರಿದ ಪ್ರಮುಖ ನಾಯಕರೆಲ್ಲರೂ ಅಸೆಂಬ್ಲಿ ಅಖಾಡದಲ್ಲಿ ನಮೋಶಿಯವರೊಟ್ಟಿಗೆ ಮುಖಾಮುಖಿಯಾಗುವವರೇ. ತಾವು ಅಧ್ಯಕ್ಷರಾಗಿದ್ದ ಸಂಸ್ಥೆಯಲ್ಲಿನ ಮುಷ್ಕರಕ್ಕೆ ಇವರೆಲ್ಲ ಬೆಂಬಲಿಸಿದರಲ್ಲ ಎಂಬುದು ನಮೋಶಿಯವರ ರಾಜಕೀಯ ಚಟುವಟಿಕೆಗಳಿಗೇ ಸವಾಲ್ ಎಸೆದಿರಲು ಸಾಕು. ಇದರಿಂದಾಗಿಯೇ 6ನೇ ವೇತನ ಶ್ರೇಣಿ ಜಾರಿ ವಿಚಾರದಲ್ಲಿ ನಮೋಶಿ ಬಿಗಿಪಟ್ಟು ಹಿಡಿಯಲು ಕಾರಣ ಎನ್ನಲಾಗುತ್ತಿದೆ. ಮುಷ್ಕರ ನಿರತರೂ ಇಂತಹ ಸೂಕ್ಷ್ಮಗಳನ್ನು ಅರಿತವರಾಗಿದ್ದಲ್ಲಿ ಬೇಡಿಕೆ ಈಡೇರದೆ ಜಾಗ ಖಾಲಿ ಮುಡುವಂತಹ ಪರಿಸ್ಥಿತಿ ಎದುರಿಸುತ್ತಿರಲಿಲ್ಲವೇನೋ ಎಂಬ ಮಾತುಗಳೂ ಈಗ ಕೇಳಿ ಬರುತ್ತಿವೆ.
-ಶೇಷಮೂರ್ತಿ ಅವಧಾನಿ