ಸೊಸೆ ರಕ್ಷಣೆಗೆ ಧಾವಿಸಿದ ಅತ್ತೆಯೂ ಬಲಿಯಾದಳು...
ಕನ್ನಡಪ್ರಭ ವಾರ್ತೆ, ಗುಲ್ಬರ್ಗ/ಶಹಾಬಾದ್, ಏ.3
ಶಹಾಬಾದ್ ಪಟ್ಟಣದ ಅಶೋಕ ನಗರದಲ್ಲಿ ಬೆಂಕಿ ಹಚ್ಚಿಕೊಂಡು ಅತ್ತೆ, ಸೊಸೆ ದಾರುಣ ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ದುರಂತದಲ್ಲಿ ಮಡಿದವರನ್ನು ಅಶೋಕ ನಗರದ ಆಶಾ ಅಬ್ದುಲ್ ರಹೀಮಾನ್(27), ಈಕೆಯ ಅತ್ತೆ ಹಮೀದಾ(46) ಇಬ್ಬರೂ ಸುಟ್ಟ ಗಾಯಗಳನ್ನು ಅನುಭವಿಸಿದ್ದಾರೆ.
ಸೊಸೆ ಆಶಾ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದಾಗ ಅದನ್ನು ಬಿಡಿಸಲು ಹೋದ ಅತ್ತೆ ಹಮೀದಾಳಿಗೂ ತೀವ್ರ ಸುಟ್ಟ ಗಾಯಗಳಾಗಿವೆ. ಇವರಿಬ್ಬರ ಬೆಂಕಿ ಪಕ್ಕದಲ್ಲೇ ಇದ್ದ ಮಗು ಫಾತೀಮಾಳನ್ನೂ ಆವರಿಸಿದೆ. ಹೀಗೆ ಮೂವರು ರಾತ್ರಿ ಹೊತ್ತು ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದಾಗ ಅಕ್ಕಪಕ್ಕದವರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಸಾವು: ಆದರೆ ಆಸ್ಪತ್ರೆಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ವೈದ್ಯರೇ ಇರಲಿಲ್ಲ. ಇದರಿಂದಾಗಿ ಸುಟ್ಟ ಗಾಯಗಳಿಗೆ ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ದೊರಕಿಲ್ಲ. ಕೂಡಲೇ ಇವರನ್ನು ಆ್ಯಂಬುಲನ್ಸ್ನಲ್ಲಿ ಗುಲ್ಬರ್ಗಕ್ಕೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆಶಾ ಹಾಗೂ ಅವಳ ಅತ್ತೆ ಹಮೀದಾ ಬುಧವಾರ ಬೆಳಗ್ಗೆ ಅಸುನೀಗಿದರು. ಗಾಯಗೊಂಡಿದ್ದ ನಾಲ್ಕು ವರ್ಷದ ಮಗು ಫಾತೀಮಾ ಅ. ರಹೇಮಾನ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಜನ ಆಕ್ರೋಶಗೊಂಡು, ಆಸ್ಪತ್ರೆಯ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಇದರಿಂದ ಮಂಗಳವಾರ ರಾತ್ರಿ ಆಸ್ಪತ್ರೆಯ ಎದುರು ಉದ್ರಿಕ್ತ ವಾತಾವರಣ ಉಂಟಾಗಿತ್ತು.
ನಗರಸಭೆ ಸದಸ್ಯ, ವೈದ್ಯ ಡಾ. ಅಹ್ಮದ್ ಪಟೇಲರವರು ಸ್ಥಳಕ್ಕೆ ಧಾವಿಸಿ ಸುಟ್ಟ ಗಾಯಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಸ್ಥಳಕ್ಕೆ ಆಗಮಿಸಿದ ಪಿಐ ಶರಣಪ್ಪ ಹಿಪ್ಪರಗಿ, ಪಿಎಸ್ಐ ಎನ್.ರಘು 108 ಆ್ಯಂಬುಲನ್ಸ್ನಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಗುಲ್ಬರ್ಗಕ್ಕೆ ಕಳುಹಿಸಿದ್ದರು.
ಆಸ್ಪತ್ರೆಗೆ ಬೀಗ ಜಡಿದರು: ಕಳೆದ ಹಲವು ಬಾರಿ ಇಂತಹ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಈ ಬಗ್ಗೆ ಜಿಲ್ಲಾ, ತಾಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದ ಕಾರಣ ಆಕ್ರೋಶಗೊಂಡ ಸಾರ್ವಜನಿಕರು ಆಸ್ಪತ್ರೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಪಿಐ ಹಿಪ್ಪರಗಿಯವರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಪಟ್ಟು ಬಿಡದ ಜನ ಜಿಲ್ಲಾ ವೈದ್ಯಾಧಿಕರಿಗಳು ಸ್ಥಳಕ್ಕೆ ಬರುವವರೆಗೆ ಬೀಗ ತೆಗೆಯುವದಿಲ್ಲ ಎಂದು ಪಟ್ಟು ಹಿಡಿದರು. ನಗರಸಭೆ ಸದಸ್ಯರಾದ ಕುಮಾರ ಚವ್ಹಾಣ, ಸಾಹೇಬಗೌಡ ಬೊಗುಂಡಿ, ನಾಗಣ್ಣ ರಾಂಪುರೆ, ಹಾಶಮ್ಖಾನ್, ಜಾವೀದ್, ಮಹಿಬೂಬ, ಗ್ರಾಪಂ ಸದಸ್ಯ ನದೀಮ, ಲತೀಫ್ ಪಟೇಲ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಜನ ಆಸ್ಪತ್ರೆಯ ಮುಂದೆ ತಡರಾತ್ರಿವರೆಗೂ ಜಮಾಯಿಸಿದ್ದರು. ಮಂಗಳವಾರ ರಾತ್ರಿ ಪೂರಾ ಆಸ್ಪತ್ರೆಗೆ ಬೀಗ ಹಾಕಲಾಗಿತ್ತು.
ಪಟ್ಟು ಸಡಿಲಿಸದ ಜನತೆ: ಬುಧವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಭೇಟಿ ನೀಡಿ ವೈದ್ಯರ ಕೊರತೆ, ಔಷಧಿ ಕೊರತೆಯಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವವರೆಗೂ ಆಸ್ಪತ್ರೆ ಕೆಲಸ ಕಾರ್ಯಗಳು ನಡೆಯದಂತೆ ಮಾಡುತ್ತೇವೆಂದು ಶಹಾಬಾದ್ ಪ್ರಮುಖರು, ಸಾರ್ವಜನಿಕರು ಆಸ್ಪತ್ರೆ ಮುಂದೆಯೇ ಬಹು ಸಂಖ್ಯೆಯಲ್ಲಿ ಜಮಾಯಿಸಿದ್ದರು.